ಬುಧವಾರ, ಜನವರಿ 22, 2020
24 °C

ವಡಗಾವಿ| ಮುಖ್ಯಶಿಕ್ಷಕಿ ವಿರುದ್ಧ ಮಕ್ಕಳು, ಪೋಷಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಮುಖ್ಯಶಿಕ್ಷಕಿ ಆರ್.ಎಂ. ಹಂಚಿನಮನಿ ವಿದ್ಯಾರ್ಥಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಅವರನ್ನು ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿ ಇಲ್ಲಿನ ವಡಗಾವಿಯ ಕನ್ನಡ ಮಾಧ್ಯಮ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲಾ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದರು. ಜೊತೆಯಾದ ಪಾಲಕರು, ‘ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ 620 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ, ಶಾಲೆಯಲ್ಲಿ ಕನಿಷ್ಠ ಮೂಲ ಸೌಕರ್ಯವೂ ಇಲ್ಲ. ಮುಖ್ಯಶಿಕ್ಷಕರು ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸುತ್ತಾರೆ. ಸರ್ಕಾರದಿಂದ ಬರುವ ಅನುದಾನ ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ಆರೋ‍ಪಿಸಿದರು. ‘ಅವರನ್ನು ವರ್ಗಾವಣೆ ಮಾಡುವವರೆಗೂ ಮಕ್ಕಳನ್ನು ತರಗತಿಗೆ ಕಳುಹಿಸುವುದಿಲ್ಲ’ ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಬಂದ ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಎ.ಎನ್. ಪ್ಯಾಟಿ ಮಾತನಾಡಿ, ‘ನಿಮ್ಮ ಬೇಡಿಕೆಯನ್ನು ಮೇಲಧಿಕಾರಿ ಗಮನಕ್ಕೆ ತರುತ್ತೇವೆ. ತಪ್ಪು ಮಾಡಿದ್ದರೆ ಶಿಸ್ತು ಕ್ರಮ ಜರುಗಿಸುತ್ತೇವೆ. ಮಕ್ಕಳ ಕಲಿಕೆ ದೃಷ್ಟಿಯಿಂದ ಪ್ರತಿಭಟನೆ ಹಿಂದಕ್ಕೆ ಪಡೆಯಬೇಕು’ ಎಂದು ಕೋರಿದರು. ಇದಕ್ಕೆ ಸ್ಪಂದಿಸಿದ ಪಾಲಕರು ಪ್ರತಿಭಟನೆ ನಿಲ್ಲಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಶಂಕರ ಕಾಮಕರ, ಮುಖಂಡರಾದ ಗಜಾನನ ಗುಂಜೇರಿ, ರಾಘವೇಂದ್ರ ಕಿತ್ತೂರ, ರಮೇಶ ಭಜಂತ್ರಿ, ಶಂಕರ ಢವಳಿ, ಯಾಮನಗೌಡ ಲಿಂಗದಳ್ಳಿ ಇದ್ದರು.

‘ನಾನು ಯಾವುದೇ ತಪ್ಪು ಮಾಡಿಲ್ಲ. ಮಕ್ಕಳಿಗೆ ಮಾನಸಿಕ ಕಿರುಕುಳ ನೀಡಿಲ್ಲ. ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧಳಾಗಿದ್ದೇನೆ’ ಎಂದು ಆರ್‌.ಎಂ. ಹಂಚಿನಮನಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ವಿದ್ಯಾರ್ಥಿಗಳ ಪಾಲಕರು ನೀಡಿರುವ ದೂರು ಆಧರಿಸಿ ತನಿಖೆ ಕೈಗೊಳ್ಳುತ್ತೇವೆ. ತಪ್ಪು ಸಾಬೀತಾದರೆ, ಮುಖ್ಯಶಿಕ್ಷಕಿ ವಿರುದ್ಧ ಕ್ರಮ ವಹಿಸಲಾಗುವುದು’ ಎಂದು ಬೆಳಗಾವಿ ನಗರ ಬಿಇಒ ಕೆ.ಡಿ. ಬಡಿಗೇರ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು