ಗುರುವಾರ , ಜನವರಿ 21, 2021
20 °C
ವಿಟಿಯುನಲ್ಲಿ ಸಂವಿಧಾನ ದಿನ ಆಚರಣೆ

ಸಂವಿಧಾನದ ಅರಿವು: ವಿದ್ಯಾರ್ಥಿಗಳಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಈ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನ ಶ್ರೇಷ್ಠ ಸ್ಥಾನದಲ್ಲಿದೆ ಹಾಗೂ ಇದುವೇ ಎಲ್ಲದರ ಮೂಲವೂ ಆಗಿದೆ’ ಎಂದು ಗೋಗಟೆ ವಾಣಿಜ್ಯ ಕಾಲೇಜಿನ ನಿವೃತ್ತ ಪ್ರಾಚಾರ್ಯರು ಹಾಗೂ ವಿಟಿಯು ನ್ಯಾಕ್‌ ಘಟಕದ ಮಾರ್ಗದರ್ಶಕ ಡಾ.ಎ.ಬಿ. ಕಾಲಕುಂದ್ರಿಕರ ಹೇಳಿದರು.

ಇಲ್ಲಿನ ವಿಟಿಯುನಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ದಿನ ಆಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಫೋಟೊಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ನಮ್ಮದು ಜಗತ್ತಿನ ಅತಿ ದೊಡ್ಡ ಸಂವಿಧಾನವಾಗಿದೆ. ಕೇವಲ ಸುಪ್ರೀಂ ಕೋರ್ಟ್ ಮಾತ್ರ ಇದರ ವಿಮರ್ಶೆ ಮಾಡಬಹುದು ಹಾಗೂ ಸರ್ಕಾರವೂ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತದೆ. ಇದು ಕೇವಲ ಸಾಮಾಜಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ಹೇಳದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಹಣಕಾಸಿನ ವ್ಯವಹಾರದ ವ್ಯವಸ್ಥೆಯನ್ನು ವ್ಯಾಖ್ಯಾನಿಸುತ್ತದೆ’ ಎಂದು ತಿಳಿಸಿದರು.

ರಾಷ್ಟ್ರಭಕ್ತಿ ಇಮ್ಮಡಿಗೊಳಿಸುತ್ತದೆ:

‘ಬದಲಾಗುತ್ತಿರುವ ಸಂದರ್ಭದಲ್ಲಿ ಇಂದಿನ ವಿದ್ಯಾರ್ಥಿಗಳು ಸಂವಿಧಾನ ರಚನೆ ಇತಿಹಾಸ, ಅದರ ಅಂಶಗಳು ಹಾಗೂ ನಾಗರಿಕರಿಗೆ ನೀಡಿರುವ ಹಕ್ಕುಗಳ ಬಗ್ಗೆ ಅರಿವು ಹೊಂದುವುದು ಬಹಳ ಮುಖ್ಯವಾಗಿದೆ. ಹೀಗಾಗಿಯೇ ಎಲ್ಲ ರೀತಿಯ ಪಠ್ಯಕ್ರಮದಲ್ಲೂ ಈ ವಿಷಯ ಅಳವಡಿಸಲಾಗಿದೆ. ಸಂವಿಧಾನದ ಅರಿವು ರಾಷ್ಟ್ರಭಕ್ತಿ ಇಮ್ಮಡಿಗೊಳಿಸಿ ದೇಶಕ್ಕಾಗಿ ಕಾರ್ಯಪ್ರವೃತ್ತರಾಗಲು ಪ್ರೋತ್ಸಾಹಿಸುತ್ತದೆ. ನಾಗರಿಕರಿಗೆ ಸಾಮಾಜಿಕವಾಗಿ ಸ್ವಾತಂತ್ರ್ಯ ಕೊಡುವ ಜೊತೆಗೆ ಒಬ್ಬರು ಮತ್ತೊಬ್ಬರ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡದಂತೆಯೂ ನೋಡಿಕೊಳ್ಳುತ್ತದೆ. ಇಂತಹ ಶ್ರೇಷ್ಠ ರಾಷ್ಟ್ರಗ್ರಂಥ ನೀಡಿದ ಮಹಾನ್‌ ವ್ಯಕ್ತಿತ್ವ ಅಂಬೇಡ್ಕರ್ ಅವರನ್ನು ಪಡೆದದ್ದು ನಮ್ಮೆಲ್ಲರ ಪುಣ್ಯ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಕರಿಸಿದ್ದಪ್ಪ, ‘ಶ್ರೇಷ್ಠ ಪ್ರಜೆಗಳಾಗಲು ಸಂವಿಧಾನ ನೀಡಿದ ಹಕ್ಕು ಮತ್ತು ಜವಾಬ್ದಾರಿಗಳನ್ನು ಅರಿತುಕೊಂಡು ಅದರಂತೆ ನಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಕುಲಸಚಿವರಾದ ಪ್ರೊ.ಆನಂದ ದೇಶಪಾಂಡೆ, ಮೌಲ್ಯಮಾಪನ ಕುಲಸಚಿವ ಪ್ರೊ.ಸತೀಶ ಅಣ್ಣಿಗೇರಿ, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ವಿಶೇಷಾಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಪ್ರೊ.ಅಪ್ಪಾಸಾಬ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು