ಮಂಗಳವಾರ, ಆಗಸ್ಟ್ 20, 2019
27 °C

ವಿದ್ಯಾರ್ಥಿಗಳು ಪ್ರಚಲಿತ ವಿದ್ಯಮಾನ ತಿಳಿದುಕೊಳ್ಳಬೇಕು

Published:
Updated:
Prajavani

ಬೆಳಗಾವಿ: ‘ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗಷ್ಟೇ ಸೀಮಿತವಾಗದೇ, ಹೊರ ಜಗತ್ತಿನ ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳಬೇಕು’ ಎಂದು ಆರ್‌ಪಿಡಿ ಬಿಬಿಎ ಕಾಲೇಜಿನ ಸ್ಥಾಪಕ ನಿರ್ದೇಶಕ ಪ್ರೊ.ಎ.ಬಿ. ಕಪಿಲೇಶ್ವರ ಸಲಹೆ ನೀಡಿದರು.

ಇಲ್ಲಿನ ಎಸ್‌ಕೆಇ ಸೊಸೈಟಿಯ ಆರ್‌ಪಿಡಿ ಕಾಲೇಜಿನಲ್ಲಿ ಮಂಗಳವಾರ ನಡೆದ ಬಿಬಿಎ ಮೊದಲನೇ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತ್ವರಿತವಾಗಿ ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಗಳ ಬಗ್ಗೆಯೂ ಅರಿತುಕೊಳ್ಳಬೇಕು. ಬಿಬಿಎ ಕೋರ್ಸ್‌ ವ್ಯವಸ್ಥಾಪನಾ ಕಲೆ ಕಲಿಸಿಕೊಡುತ್ತದೆ. ಆದರೆ, ಪುಸ್ತಕದಲ್ಲಿ ಇದ್ದಂತೆ ಜೀವನದಲ್ಲಿ ವ್ಯವಹರಿಸಲಾಗದು. ಹೀಗಾಗಿ, ಪಠ್ಯದ ಕಲಿಕೆಯೊಂದಿಗೆ ಪ್ರಾಯೋಗಿಕ ಜ್ಞಾನವನ್ನೂ ಪಡೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ.ಅಚಲಾ ದೇಸಾಯಿ, ‘ಪದವಿ ವ್ಯಾಸಂಗ ಮಾಡುವ ಮೂರು ವರ್ಷಗಳು ವಿದ್ಯಾರ್ಥಿ ಜೀವನದ ನಿರ್ಣಾಯಕ ಅವಧಿಯಾಗಿದೆ. ಜ್ಞಾನ ಸಂಪಾದನೆಗೆ ಆದ್ಯತೆ ನೀಡುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು’ ಎಂದರು.

ಬಿಬಿಎ ವಿಭಾಗದ ನಿರ್ದೇಶಕ ಆರ್.ವಿ. ಭಟ್ಟ ಮಾತನಾಡಿ, ‘ನಮ್ಮ ಕಾಲೇಜಿನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಲ್ಲಿ ಶೇ 50ಕ್ಕಿಂತಲೂ ಹೆಚ್ಚಿನವರು ಕ್ಯಾಂಪಸ್‌ ಸಂದರ್ಶನದಲ್ಲೇ ಆಯ್ಕೆಯಾಗಿ ಉದ್ಯೋಗ ಪಡೆದು ಹೆಮ್ಮೆ ತರುತ್ತಿದ್ದಾರೆ. ಇಲ್ಲಿ ಪದವಿ ಪಡೆಯುವ ಪ್ರತಿ ವಿದ್ಯಾರ್ಥಿಯೂ ಸ್ವಾವಲಂಬಿ ಆಗಬೇಕು ಎನ್ನುವುದು ನಮ್ಮ ಗುರಿಯಾಗಿದೆ’ ಎಂದು ತಿಳಿಸಿದರು.

ಕಳೆದ ಸಾಲಿನ ‍ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಪ್ರತಿಭೆ ಪ್ರದರ್ಶಿಸಿದ ಸ್ವಪ್ನಿಲ ಪಾಟೀಲ ಹಾಗೂ ಆಶಾ ಮಾಳವಿ ಅವರಿಗೆ ಕ್ರಮವಾಗಿ ಮಿಸ್ಟರ್ ಫ್ರೆಶರ್ ಹಾಗೂ ಮಿಸ್ ಫ್ರೆಶರ್ ಎಂದು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಾದ ಗೀತಾ ಕಂಗ್ರಾಳಕರ ಸ್ವಾಗತಿಸಿದರು. ಅಶ್ವಿನಿ ನಿರೂಪಿಸಿದರು. ವಾಣಿಶ್ರೀ ಒಡೆಯರ್ ವಂದಿಸಿದರು.

Post Comments (+)