ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಕಳಪೆ ಸೈಕಲ್‌ ವಿತರಣೆ: ತನಿಖೆಗೆ ಒತ್ತಾಯ

ಡಿಡಿಪಿಐ ಎ.ಬಿ. ಪುಂಡಲೀಕ ವಿರುದ್ಧ ಹರಿಹಾಯ್ದ ಜಿ.ಪಂ. ಸದಸ್ಯರು;
Last Updated 31 ಆಗಸ್ಟ್ 2019, 13:00 IST
ಅಕ್ಷರ ಗಾತ್ರ

ಬೆಳಗಾವಿ: ‘ಶಾಲಾ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಸೈಕಲ್‌ಗಳನ್ನು ವಿತರಿಸಲಾಗಿದೆ. ತಕ್ಷಣ ತನಿಖೆ ಕೈಗೊಂಡು, ಕಳಂಕಿತ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಇಲ್ಲಿ ಶನಿವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಅರುಣ ಕಟಾಂಬಳೆ ಸೇರಿದಂತೆ ಸದಸ್ಯರೆಲ್ಲರೂ ಪಾಲ್ಗೊಂಡಿದ್ದರು.

ಸದಸ್ಯ ರಮೇಶ ಗೋರಲ ವಿಷಯ ಪ್ರಸ್ತಾಪಿಸಿ, ‘ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕೆಟ್ಟು ಹೋಗಿರುವ ಸೈಕಲ್‌ಗಳನ್ನು ವಿತರಿಸಲಾಗಿದೆ. ಸೈಕಲ್‌ಗಳ ಗುಣಮಟ್ಟ ವೀಕ್ಷಿಸಬೇಕಾದ ಡಿಡಿಪಿಐ ಎ.ಬಿ. ಪುಂಡಲೀಕ ಕರ್ತವ್ಯ ಲೋಪ ಎಸಗಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ವಿದ್ಯಾರ್ಥಿಗಳಿಗೆ ವಿತರಿಸಲಾಗಿರುವ ಬಹುತೇಕ ಸೈಕಲ್‌ಗಳ ಸೀಟು, ಟ್ಯೂಬ್‌ ಕೆಟ್ಟುಹೋಗಿವೆ. ಚೈನ್‌, ಸ್ಟೀಲ್‌ ತುಕ್ಕು ಹಿಡಿದಿದೆ. ಕಳೆದ ವರ್ಷ ನೀಡಿದ್ದ ಸೈಕಲ್‌ಗಳ ಸ್ಥಿತಿಯೂ ಇಂತಹದ್ದೇ ಆಗಿದೆ. ಅವುಗಳ ನಿರ್ವಹಣೆ ಹಾಗೂ ಬಿಡಿಭಾಗಗಳನ್ನು ಬದಲಾಯಿಸಿಕೊಡುವ ಕೆಲಸ ಮಾಡಿಲ್ಲ. ಡಿಡಿಪಿಐ ಎಳ್ಳಷ್ಟೂ ಕಾಳಜಿ ತೆಗೆದುಕೊಂಡಿಲ್ಲ. ಇವುಗಳ ಗುಣಮಟ್ಟ ಪರಿಶೀಲಿಸಿಲ್ಲ, ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜನರ ತೆರಿಗೆ ಹಣದಿಂದಲೇ ಸರ್ಕಾರ ಸೈಕಲ್‌ಗಳನ್ನು ವಿತರಿಸಿದೆ. ಆದರೆ, ಇವುಗಳ ಮೇಲ್ವಿಚಾರಣೆಯನ್ನು ಡಿಡಿಪಿಐ ಅವರು ಮಾಡುತ್ತಿಲ್ಲ. ತುಕ್ಕು ಹಿಡಿದಿರುವ ಸೈಕಲ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಇಂತಹ ಸೈಕಲ್‌ಗಳನ್ನು ಉಪಯೋಗಿಸಿದಾಗ ಉಂಟಾಗುವ ನೋವಿಗೆ ಯಾರು ಹೊಣೆ?’ ಎಂದು ಪ್ರಶ್ನಿಸಿದರು.

ಡಿಡಿಪಿಐ ಎ.ಬಿ. ಪುಂಡಲೀಕ ಮಾತನಾಡಿ, ‘ರಾಜ್ಯ ಮಟ್ಟದಲ್ಲಿಯೇ ಸೈಕಲ್‌ ವಿತರಣೆ ಟೆಂಡರ್‌ ನೀಡಲಾಗಿರುತ್ತದೆ. ಸೈಕಲ್‌ಗಳಿಗೆ ಎಷ್ಟು ದರ ನೀಡಿದ್ದಾರೆ ಎನ್ನುವುದು ತಮಗೆ ಗೊತ್ತಿಲ್ಲ’ ಎಂದರು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ, ‘ಈ ರೀತಿ ಬೇಜವಾಬ್ದಾರಿಯಿಂದ ಉತ್ತರಿಸಬೇಡಿ. ದರ ಗೊತ್ತಿಲ್ಲವೆಂದರೆ ತಿಳಿದುಕೊಳ್ಳಬೇಕಲ್ವೇನ್ರಿ? ರಾಜ್ಯ ಮಟ್ಟದಿಂದ ಟೆಂಡರ್‌ ಆಗಿದ್ದರೂ ಸೈಕಲ್‌ಗಳ ಗುಣಮಟ್ಟ ಪರಿಶೀಲಿಸಿ, ಕಳಪೆಯಾಗಿದ್ದರೆ ವಾಪಸ್‌ ಕಳುಹಿಸಲು ನಿಮಗೆ ಅವಕಾಶ ಇತ್ತಲ್ಲವೇ? ಏಕೆ ಮಾಡಲಿಲ್ಲ?’ ಎಂದು ತರಾಟೆ ತೆಗೆದುಕೊಂಡರು.

‘ಕಳೆದ 2– 3 ವರ್ಷಗಳಲ್ಲಿಯೂ ಇಂತಹ ಪ್ರಕರಣಗಳು ನಡೆದಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ದೂರುಗಳು ನಿಜವೇ, ಸುಳ್ಳೇ ಎನ್ನುವುದು ಗೊತ್ತಾಗಬೇಕಾಗಿದೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಒಪ್ಪಿದರೆ, ಸದಸ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿ ತನಿಖೆ ನಡೆಸಬಹುದಾಗಿದೆ. ಎರಡು ವಾರಗಳಲ್ಲಿ ವರದಿ ನೀಡುವಂತೆ ಕಾಲಮಿತಿ ವಿಧಿಸಬಹುದಾಗಿದೆ’ ಎಂದು ಹೇಳಿದರು.

ಅಧ್ಯಕ್ಷೆ ಆಶಾ ಐಹೊಳೆ ಯಾವುದೇ ಆದೇಶ ಹೊರಡಿಸದೇ ಮೌನಕ್ಕೆ ಶರಣಾದರು.

ಬೆಳೆ ನಷ್ಟ ಸಮೀಕ್ಷೆ

‘ಜಿಲ್ಲೆಯಲ್ಲಿ 7 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಭಾರಿ ಮಳೆ ಹಾಗೂ ಪ್ರವಾಹದಿಂದ ಎಷ್ಟು ನಷ್ಟ ಉಂಟಾಗಿದೆ ಎನ್ನುವುದನ್ನು ಪತ್ತೆ ಹಚ್ಚಲು ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಜಂಟಿ ಸಮೀಕ್ಷೆ ಮಾಡಲಾಗುತ್ತಿದೆ. ಬಹುಶಃ ಒಂದು ವಾರದಲ್ಲಿ ಸಮೀಕ್ಷೆ ಪೂರ್ಣಗೊಳಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ಹೇಳಿದರು.

‘ಪ್ರಾಥಮಿಕ ಹಂತದ ಸಮೀಕ್ಷೆಯಲ್ಲಿ 2.70 ಲಕ್ಷ ಹೆಕ್ಟೇರ್‌ ಪ್ರದೇಶ ಹಾನಿಗೊಳಗಾಗಿದೆ. ಜಂಟಿ ಸಮೀಕ್ಷೆಯಲ್ಲಿ ನಿಖರವಾಗಿ ನಷ್ಟದ ಪ್ರಮಾಣ ಗೊತ್ತಾಗಲಿದೆ. ಎನ್‌ಡಿಆರ್‌ಎಫ್‌ ಪ್ರಕಾರ, ಮಳೆ ಆಶ್ರಿತ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್‌ಗೆ ₹ 6,800 ಹಾಗೂ ನೀರಾವರಿ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್‌ಗೆ ₹ 13,500 ಪರಿಹಾರ ದೊರೆಯಲಿದೆ’ ಎಂದು ಹೇಳಿದರು.

‘ಈ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ ಇದನ್ನು ಹೆಚ್ಚಿಸಬೇಕು. ಠರಾವು ಮಾಡಿ ಸರ್ಕಾರಕ್ಕೆ ಕಳುಹಿಸಬೇಕು’ ಎಂದು ಸದಸ್ಯರು ಒತ್ತಾಯಿಸಿದರು.

ಮನೆ ಕುಸಿತ

‘ಜಿಲ್ಲೆಯಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಮನೆಗಳು ಹಾನಿಗೊಳಗಾಗಿವೆ. ಇವುಗಳ ಸಮೀಕ್ಷೆ ನಡೆದಿದೆ. ಶೇ 25ರಷ್ಟು ಹಾನಿಯಾಗಿದ್ದರೆ ₹ 25,000 ಶೇ 75ರಷ್ಟು ಹಾನಿಯಾಗಿದ್ದರೆ ₹ 1 ಲಕ್ಷ, ಇದಕ್ಕಿಂತ ಹೆಚ್ಚು ಹಾನಿಯಾಗಿದ್ದರೆ ₹ 5 ಲಕ್ಷ ಪರಿಹಾರ ನೀಡಲಾಗುತ್ತದೆ’ ಎಂದು ರಾಜೇಂದ್ರ ಕೆ.ವಿ. ಹೇಳಿದರು.

ಸದಸ್ಯರ ಆಕ್ರೋಶ: ‘ಪರಿಹಾರ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಇನ್ನೂ ಹಲವೆಡೆ ಕುಡಿಯುವ ನೀರು, ಮೇವು ಸಿಗುತ್ತಿಲ್ಲ. ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ’ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಸ್ಪಂದಿಸಿದ ರಾಜೇಂದ್ರ ಅವರು, ‘ಆಯಾ ಕ್ಷೇತ್ರದ ಜನಪ್ರತಿನಿಧಿಗಳ ಗಮನಕ್ಕೆ ತಂದು ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT