ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಹೆಚ್ಚಿದ ಇಳುವರಿ: ಬರದಲ್ಲೂ ಕೈ ಹಿಡಿದ ಕಬ್ಬು

Published 17 ಮೇ 2024, 18:36 IST
Last Updated 17 ಮೇ 2024, 18:36 IST
ಅಕ್ಷರ ಗಾತ್ರ

ಬೆಳಗಾವಿ: ಈ ಬಾರಿ ಬರಗಾಲದ ನಡುವೆಯೂ ಕಬ್ಬು ರೈತರ ಕೈ ಹಿಡಿದಿದೆ. ಇಳುವರಿಯೂ ಹೆಚ್ಚಳವಾಗಿದೆ. ಎಫ್‌ಆರ್‌ಪಿ ಕೂಡ ಏರಿಕೆಯಾಗಿದ್ದರಿಂದ ಬೆಳೆಗಾರರ ಜೇಬು ಭರ್ತಿಯಾಗಿದೆ.

ರಾಜ್ಯದಲ್ಲಿ ಈ ಹಂಗಾಮಿನಲ್ಲಿ 76 ಕಾರ್ಖಾನೆಗಳು ಕಬ್ಬು ನುರಿಸಿವೆ. ಏಪ್ರಿಲ್‌ 30ರ ವರೆಗೆ 586 ಲಕ್ಷ ಟನ್‌ ಕಬ್ಬು ನುರಿಸಲಾಗಿದೆ. ಒಟ್ಟು 52.91 ಲಕ್ಷ ಮೆಟ್ರಿಕ್‌ ಟನ್‌ ಸಕ್ಕರೆ ಉತ್ಪಾದಿಸಲಾಗಿದ್ದು, 9.04 ರಿಕವರಿ ಬಂದಿದೆ.

2023ರಲ್ಲಿ 600 ಲಕ್ಷ ಮೆಟ್ರಿಕ್‌ ಟನ್‌ ಮತ್ತು 2022ರಲ್ಲಿ 600 ಲಕ್ಷ ಟನ್‌ ಕಬ್ಬು ನುರಿಸಲಾಗಿತ್ತು.

‘ಹೆಚ್ಚು ಪ್ರಮಾಣದಲ್ಲಿ ಕಬ್ಬು ಬೆಳೆಯುವ ಬೆಳಗಾವಿ, ಬಾಗಲಕೋಟೆ, ಬೀದರ್, ಮಂಡ್ಯ, ವಿಜಯಪುರ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಕೈ ಹಿಡಿದಿದೆ. ಬರಗಾಲಕ್ಕೂ ಮುಂಚೆಯೇ ಕಬ್ಬಿನಲ್ಲಿ ಸಕ್ಕರೆ ಅಂಶ ಕಟ್ಟಿತ್ತು. ಹಾಗಾಗಿ, ಬರ ಕಾಣಿಸಿಕೊಂಡರೂ ಇಳುವರಿ ಕುಸಿದಿಲ್ಲ. ಇದು ನಮಗೆ ಅಚ್ಚರಿ ಮೂಡಿಸಿದೆ’ ಎಂದು ಸಕ್ಕರೆ ಆಯುಕ್ತ ಎಂ.ಆರ್‌. ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರ್ಖಾನೆಗಳು ರೈತರಿಗೆ ಒಟ್ಟು ₹19,899.14 ಕೋಟಿ ಪಾವತಿಸಬೇಕಿದೆ. ಈ ಪೈಕಿ ಮೇ 15ರ ವರೆಗೆ ₹19,294.78 ಕೋಟಿ (ಶೇ 97ರಷ್ಟು) ಪಾವತಿಸಲಾಗಿದೆ. ಇನ್ನೂ ₹604.36 ಕೋಟಿ ಬಾಕಿ ಇದೆ. 15 ದಿನಗಳಲ್ಲಿ ಪಾವತಿ ಆಗುವ ನಿರೀಕ್ಷೆಯಿದೆ. ವಿಳಂಬ ಮಾಡುವ ಕಾರ್ಖಾನೆಗಳಿಗೆ ನೋಟಿಸ್‌ ನೀಡಲಾಗುವುದು’ ಎಂದರು.

ಹೆಚ್ಚು ಕಬ್ಬು ನುರಿಸಿದ ಜಿಲ್ಲೆಗಳು:

ಬೆಳಗಾವಿ ಜಿಲ್ಲೆಯಲ್ಲಿ 28 ಕಾರ್ಖಾನೆಗಳಿದ್ದು 2.06 ಕೋಟಿ ಟನ್‌ ಕಬ್ಬು ನುರಿಸಿವೆ. 19.70 ಲಕ್ಷ ಟನ್‌ ಉತ್ಪಾದನೆ ಮಾಡಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ 13  ಕಾರ್ಖಾನೆಗಳಿವೆ. 1.73 ಕೋಟಿ ಟನ್‌ ಕಬ್ಬು ನುರಿಸಿದ್ದು, 15.41 ಲಕ್ಷ ಟನ್‌ ಉತ್ಪಾದಿಸಿವೆ. ಈ ಎರಡೂ ಜಿಲ್ಲೆಗಳಲ್ಲಿ ಶೇ 97ರಷ್ಟು ಹಣ ಪಾವತಿಯಾಗಿದೆ.

ವಿಜಯಪುರ ಜಿಲ್ಲೆಯಲ್ಲಿರುವ 9 ಕಾರ್ಖಾನೆಗಳು, 58.10 ಲಕ್ಷ ಟನ್‌ ಕಬ್ಬು ನುರಿಸಿವೆ. 5.27 ಲಕ್ಷ ಟನ್‌ ಉತ್ಪಾದಿಸಿದ್ದು, ಶೇ 91ರಷ್ಟು ಹಣ ಪಾವತಿಸಿವೆ. 

ಮಂಡ್ಯ ಜಿಲ್ಲೆಯಲ್ಲಿ 5  ಕಾರ್ಖಾನೆಗಳಿವೆ. 30.90 ಲಕ್ಷ ಟನ್‌ ಕಬ್ಬು ನುರಿಸಿದ್ದು, 2.71 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಮಾಡಿವೆ. ಶೇ 100ರಷ್ಟು ಹಣ ಪಾವತಿಸಿವೆ.

ಬೀದರ್‌ ಜಿಲ್ಲೆಯಲ್ಲಿರುವ 5 ಕಾರ್ಖಾನೆಗಳು, 17.81 ಲಕ್ಷ ಟನ್‌ ಕಬ್ಬು ನುರಿಸಿವೆ. 1.61 ಲಕ್ಷ ಟನ್‌ ಉತ್ಪಾದಿಸಿವೆ. ಕಲಬುರಗಿ ಜಿಲ್ಲೆಯ 4 ಕಾರ್ಖಾನೆಗಳು 33.42 ಲಕ್ಷ ಟನ್‌ ಕಬ್ಬು ನುರಿಸಿದ್ದು. 2.74 ಲಕ್ಷ ಟನ್‌ ಉತ್ಪಾದನೆ ಮಾಡಿವೆ.

ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಮೊದಲ ಕಂತಿನ ಪೂರ್ಣ ಹಣ ನೀಡಿದೆ. ಫೆಬ್ರುವರಿ ಬಳಿಕ ಸಾಗಿಸಿದ ಕಬ್ಬಿನ ಬಾಕಿ ಬರಬೇಕಿದೆ
– ಶ್ರೀಕಾಂತ ಗುಡೆಣ್ಣವರ, ರೈತ, ಎಂ.ಕೆ. ಹುಬ್ಬಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT