ಶನಿವಾರ, ಮಾರ್ಚ್ 28, 2020
19 °C
9 ದಿನಗಳವರೆಗೆ ನಡೆಯಲಿರುವ ಸಂಭ್ರಮ

ಲಕ್ಷ್ಮಿ ಜಾತ್ರೆಗೆ ಸಿಂಗಾರಗೊಂಡ ಸುಳೇಭಾವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಐದು ವರ್ಷಗಳಿಗೊಮ್ಮೆ ಬರುವ ತಾಲ್ಲೂಕಿನ ಸುಕ್ಷೇತ್ರ ಸುಳೇಭಾವಿ ಮಹಾಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಮಾರ್ಚ್‌ 10ರಿಂದ 18ರವರೆಗೆ ನಡೆಯಲಿದ್ದು, ಗ್ರಾಮ ಸಿಂಗಾರಗೊಂಡಿದೆ.

10ರಂದು ಸಂಜೆ 5ಕ್ಕೆ ಜಾತ್ರಾ ಮಹೋತ್ಸವದ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ಮಹಾಲಕ್ಷ್ಮಿ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಸಮಿತಿ ಪದಾಧಿಕಾರಿಗಳು, ಪೂಜಾರಿಗಳು ಹಾಗೂ ದೇವಿಯ ಹಕ್ಕುದಾರರಿಂದ ಚಾಲನೆ ಸಿಗಲಿದೆ. ಗ್ರಾಮದ ಬಡಿಗೇರ (ತವರು ಮನೆ) ಮನೆಯಲ್ಲಿ ದೇವಿಗೆ ಹಕ್ಕುದಾರರು ಉಡಿ ತುಂಬಿದ ಬಳಿಕ ರಾತ್ರಿ 12ರ ಬಳಿಕ ದೇವಿಯ ಹೊನ್ನಾಟ ಆರಂಭಗೊಳ್ಳಲಿದೆ. ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಇಡೀ ರಾತ್ರಿ ಹಾಗೂ ಮರುದಿನ ಸಂಜೆವರೆಗೆ ಹೊನ್ನಾಟವಿರಲಿದ್ದು, ಸಂಪ್ರದಾಯದಂತೆ ನಿಗದಿತ ಸ್ಥಳಗಳಲ್ಲಿ ಸಾರ್ವಜನಿಕರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಲಿದೆ.

ಗ್ರಾಮದ ಮೈದಾನದಲ್ಲಿ ನಿರ್ಮಿಸಿರುವ ಆಕರ್ಷಕ ಮಂಟಪದಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ನಂತರ ದೇವಿಯ ದರ್ಶನ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಮಾರ್ಚ್‌ 13ರಂದು ಭಕ್ತರು ದೀಡ್ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿ, ಉಡಿ ತುಂಬಲಿದ್ದಾರೆ. 18ರಂದು ಸಂಜೆ ದೇವಿ ಹೊನ್ನಾಟದ ನಂತರ ಸೀಮೆಗೆ ಹೋಗುವ ಕಾರ್ಯಕ್ರಮದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.

ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದಿಂದಲೂ ಬರುವ ಭಕ್ತರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪ್ರಾಥಮಿಕ ಚಿಕಿತ್ಸೆ, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಜನದಟ್ಟಣೆ ತಡೆಯಲು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಾಂಬ್ರಾ ಮಾರ್ಗದಿಂದ ಬರುವ ವಾಹನಗಳನ್ನು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದ ಮೈದಾನದಲ್ಲಿ ಹಾಗೂ ಖನಗಾಂವ ಮಾರ್ಗದಿಂದ ಬರುವ ವಾಹನಗಳನ್ನು ಕಲ್ಮೇಶ್ವರ ದೇವಸ್ಥಾನ ಆವರಣದ ಬಳಿ ನಿಲ್ಲಿಸಬೇಕು. ಗ್ರಾಮ ಪಂಚಾಯಿತಿ ಎದುರಿನ ಮೈದಾನದಲ್ಲಿ ಬಸ್ ನಿಲ್ದಾಣ ಮಾಡಲಾಗಿದೆ.

‘ಸುಳೇಭಾವಿ ಜಾತ್ರೆಗೆ ಹೋಗುವವರ ಅನುಕೂಲಕ್ಕಾಗಿ, ನಗರ ಬಸ್‌ ನಿಲ್ದಾಣ ಹಾಗೂ ರೈಲು ನಿಲ್ದಾಣದಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಎನ್‌ಡಬ್ಯ್ಯಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು