ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಿಗೂ ಮನೆ ನಿರ್ಮಾಣ: ಮಾರ್ಚ್‌ ಗಡುವು: ಸಚಿವ ಸುರೇಶ ಅ‌ಂಗಡಿ

Last Updated 27 ಡಿಸೆಂಬರ್ 2019, 7:23 IST
ಅಕ್ಷರ ಗಾತ್ರ

ಬೆಳಗಾವಿ: ‘ನನ್ನ ಲೋಕಸಭಾ ಕ್ಷೇತ್ರದ ಪ್ರತಿ ಕುಟುಂಬವೂ ಸ್ವಂತ ಸೂರು ಹೊಂದುವಂತೆ ನೋಡಿಕೊಳ್ಳಬೇಕು. 2020ರ ಮಾರ್ಚ್‌ ಅಂತ್ಯದೊಳಗೆ ಈ ಕಾರ್ಯ ಅನುಷ್ಠಾನಗೊಳ್ಳಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಇಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಜೊತೆ ಚಿಂತನ-ಮಂಥನ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಹಾಗೂ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಸಂದರ್ಭದಲ್ಲಿ, ವಸತಿರಹಿತರೆಲ್ಲರಿಗೂ ಮನೆಗಳನ್ನು ಕಟ್ಟಿಸಿಕೊಡಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ಅದಕ್ಕೆ ಸಹಕಾರ ನೀಡಬೇಕು. ಒಂದು ಮನೆಯನ್ನು ತಿಂಗಳಲ್ಲಿ ನಿರ್ಮಿಸಬಹುದಾಗಿದೆ. ಅದಕ್ಕೆ ದೊಡ್ಡ ತಂತ್ರಜ್ಞಾನವೇನೂ ಬೇಕಾಗುವುದಿಲ್ಲ. ಈ ವಿಷಯದಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

ಪ್ರಯೋಜನವೇನು ಎನ್ನುವುದನ್ನು ತಿಳಿಸಿ:‘ಮರಳಿಗೆ ಪರ್ಯಾಯವಾಗಿ ಎಂ–ಸ್ಯಾಂಡ್ (ಕೃತಕ ಮರಳು) ಬಳಸುವುದರಿಂದ ಆಗುವ ಪ್ರಯೋಜನವೇನು, ಎರಡರ ನಡುವಿನ ವ್ಯತ್ಯಾಸವೇನು ಎನ್ನುವುದನ್ನು ಫಲಾನುಭವಿಗಳಿಗೆ ತಿಳಿಸಿಕೊಡಬೇಕು. ಬ್ಯಾಂಕ್‌ನವರು ₹ 5 ಲಕ್ಷದವರೆಗೆ ಸಾಲ ಕೊಡಬೇಕು. ಫಲಾನುಭವಿಗಳು, ಸರ್ಕಾರದ ಹಣ ಪಡೆಯುವುದಕ್ಕೆ ಓಡಾಡಿ ಇರುವ ಹಣವನ್ನೂ‌ ಕಳೆದುಕೊಳ್ಳಬಾರದು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ‘ಫಲಾನುಭವಿಗಳಿಗೆ ಸರ್ಕಾರದಿಂದ ನೇರವಾಗಿ ಹಣ ಕೊಡಲಾಗುತ್ತದೆ. ಅವರಿಗೆ ಆಡಳಿತಾತ್ಮಕ ವ್ಯವಸ್ಥೆಯಿಂದಲೂ ಬೆಂಬಲ ಬೇಕಾಗುತ್ತದೆ. ಇದಕ್ಕಾಗಿ ‘ಗೃಹ ಮಿತ್ರ’ ಎನ್ನುವ ಕಾರ್ಯಕ್ರಮ ರೂಪಿಸಲಾಗಿದೆ. ಬ್ಯಾಂಕ್‌ಗಳಿಂದ ಸಾಲ ಕೊಡಿಸುವುದು, ಸಿಮೆಂಟ್, ಸ್ಟೀಲ್ ಮೊದಲಾದ ನಿರ್ಮಾಣ ಸಾಮಗ್ರಿಗಳು ಮಾರುಕಟ್ಟೆ ದರಕ್ಕಿಂತಲೂ ಕಡಿಮೆಗೆ ಸಿಗುವಂತೆ ಮಾಡಲು ಉದ್ದೇಶಿಸಲಾಗಿದೆ. ಈ ವಿಷಯದಲ್ಲಿ ಸಂಸದರೇ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ನರೇಗಾದಲ್ಲೂ ಸಹಕಾರ ನೀಡಲಾಗುವುದು’ ಎಂದು ತಿಳಿಸಿದರು.

ಬೆಂಬಲ ಕೊಡಬೇಕು:‘ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಕೊಟ್ಟರೆ ಮುಗಿಯಿತೆಂದು ಅಧಿಕಾರಿಗಳು ಭಾವಿಸಬಾರದು. ಅವರಿಗೆ ಮುಂದಿನ ಹಂತದಲ್ಲೂ ಬೆಂಬಲ ಒದಗಿಸಬೇಕು. 2020ಕ್ಕೆ ಜಿಲ್ಲೆಯನ್ನು ಗುಡಿಸಲು ಮುಕ್ತ ಮಾಡಬೇಕಾಗಿದೆ. ಶೀಘ್ರವೇ ಸಾಲ ಮೇಳವನ್ನೂ ಆಯೋಜಿಸಲಾಗುವುದು. ಬ್ಯಾಂಕ್‌ಗಳವರು ಸ್ಥಳದಲ್ಲಿಯೇ ಸಾಲ ಮಂಜೂರು ಮಾಡಬೇಕು’ ಎಂದು ಹೇಳಿದರು.

‘ಅಂದಾಜಿನ ಪ್ರಕಾರ, ₹ 3.50 ಲಕ್ಷದಿಂದ ₹ 5 ಲಕ್ಷಕ್ಕೆ ಮನೆ ಕಟ್ಟಲು ಅವಕಾಶವಿದೆ. ಮೊದಲ ಹಂತದಲ್ಲಿ ಎಷ್ಟು ಕಾರ್ಯಸಾಧ್ಯವೋ ಅದನ್ನು ಮಾಡಿಕೊಳ್ಳಲು ತಿಳಿಸಬೇಕು. ದೊಡ್ಡದಾಗಿ ಕಟ್ಟಲು ಹೋಗಿ ಅರ್ಧಕ್ಕೆ ‌ನಿಲ್ಲಿಸುವುದು ಸರಿಯಲ್ಲ. ಹೀಗಾಗಿ ಪಿಡಿಒಗಳು ಫಲಾನುಭವಿಗಳಿಗೆ ಜಾಗೃತಿ ಮೂಡಿಸಬೇಕು’ ಎಂದು ಸೂಚಿಸಿದರು.

‘ಮಹಾರಾಷ್ಟ್ರದಿಂದ ಬರುವ ಎಂ–ಸ್ಯಾಂಡ್ ಮಣ್ಣು ಮಿಶ್ರಿತವಾಗಿರುತ್ತದೆ. ಅದಕ್ಕಿಂತ ಗುಣಮಟ್ಟವಿದ್ದರೆ ಇಡೀ ಮನೆಗಾಗುವಷ್ಟನ್ನೂ ಬಳಸಬಹುದಾಗಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದರು.

‘ಕಳಪೆ ಗುಣಮಟ್ಟದ ಎಂ–ಸ್ಯಾಂಡ್ ಅಲ್ಲಿಂದ ರಾಜ್ಯಕ್ಕೆ ಬಾರದಂತೆ ತಡೆಯಬೇಕು’ ಎಂದು ಸಿಇಒ ನಿರ್ದೇಶನ ನೀಡಿದರು.

ಲೀಡ್ ಬ್ಯಾಂಕ್‌ ವ್ಯವಸ್ಥಾಪಕ ರಾಹುಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT