ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಹೈಕಮಾಂಡ್‌ ಶಿಸ್ತುಕ್ರಮ ಜರುಗಿಸಲಿ’

ಸಿ.ಎಂ, ಡಿಸಿಎಂ ಬೇಡಿಕೆ
Published 29 ಜೂನ್ 2024, 6:42 IST
Last Updated 29 ಜೂನ್ 2024, 6:42 IST
ಅಕ್ಷರ ಗಾತ್ರ

ಬೆಳಗಾವಿ/ಹುಬ್ಬಳ್ಳಿ: ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ.ಶಿವಕುಮಾರ ಅವರಿಗೆ ಬಿಟ್ಟುಕೊಡಬೇಕು’ ಎಂದು ಚಂದ್ರಶೇಖರನಾಥ ಸ್ವಾಮೀಜಿ ಅವರು ಗುರುವಾರ ಹೇಳಿಕೆ ನೀಡಿದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ  ಈ ಬಗ್ಗೆ ಪರ– ವಿರೋಧ ಚರ್ಚೆ ಆರಂಭವಾಗಿದೆ. ಮೂವರು ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆ ಚರ್ಚೆಯೂ ಮುಂದುವರಿದಿದೆ. 

‘ಯಾವುದೇ ಹುದ್ದೆಗಳ ಬಗ್ಗೆ ಚರ್ಚೆ ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕು. ಮಾಧ್ಯಮಗಳ ಮೂಲಕ ಜನರ ಎದುರು ಹೋಗಬಾರದು. ಈ ಹುದ್ದೆಗಳನ್ನು ಸಾರ್ವಜನಿಕ ಸ್ಥಳ ಅಥವಾ ಮಾರುಕಟ್ಟೆಯಲ್ಲಿ ಸೃಷ್ಟಿಸಲು ಆಗುವುದಿಲ್ಲ’ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಿಳಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾವುದೇ ಆರೋಪ, ದೂರುಗಳಿಲ್ಲ. ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅನಗತ್ಯ ಚರ್ಚೆಗಳು ಬೇಡ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

 ‘ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ನ ಎರಡು ಕಣ್ಣುಗಳು. ಮುಖ್ಯಮಂತ್ರಿ ಯಾರು ಆಗಬೇಕು ಎಂಬುದು ಈಗ ಅ‍ಪ್ರಸ್ತುತ. 136 ಶಾಸಕರ ಅಭಿಪ್ರಾಯ ಅನುಸಾರ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

 ‘ಸಿದ್ದರಾಮಯ್ಯ ನಮ್ಮ ‘ಮಾಸ್‌ ಲೀಡರ್‌’. ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಡಿ.ಕೆ.ಶಿವಕುಮಾರ್‌ ರಾಜ್ಯವ್ಯಾಪಿ ಸುತ್ತಾಡಿ, ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ. ಕೊರೊನಾ ವ್ಯಾಪಿಸಿದ್ದ ದಿನಗಳಲ್ಲಿ ಅವರು ಜನರ ಮಧ್ಯೆ ಇದ್ದು ಕೆಲಸ ಮಾಡಿದ್ದಾರೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ’ ಎಂದರು.

‘ವೀರಶೈವ ಲಿಂಗಾಯತರೇ ಆಗಲಿ’: 

 ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಅಥವಾ ಇನ್ನಷ್ಟು ಉಪ ಮುಖ್ಯಮಂತ್ರಿಗಳ ಸ್ಥಾನ ಸೃಷ್ಟಿಸುವುದಾದರೆ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಬೇಕು’ ಎಂದು ಯಡೂರ–ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.

ಚಿಕ್ಕೋಡಿ ತಾಲ್ಲೂಕಿನ ಯಡೂರು ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೀರಶೈವ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ನಮ್ಮ ಸಮುದಾಯದ ಸಚಿವರಾದ ಎಂ.ಬಿ.ಪಾಟೀಲ, ಈಶ್ವರ ಖಂಡ್ರೆ, ಎಸ್.ಎಸ್.ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ ಅವರಂಥವರಿಗೆ ಅವಕಾಶ ನೀಡಬೇಕು’ ಎಂದರು.

‘ಈ ಬೆಳವಣಿಗೆ ಬಗ್ಗೆ ಕಾಶಿ, ಉಜ್ಜಯಿನಿ ಸೇರಿ ಪಂಚಪೀಠದ ಪೀಠಾಧಿಪತಿಗಳ ಜತೆ ಚರ್ಚಿಸಲಾಗಿದೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಬಗ್ಗೆ ಕಾಂಗ್ರೆಸ್‌ನಲ್ಲಿ ಮುಂಚಿತವಾಗಿಯೇ ಒಡಂಬಡಿಕೆ ಆಗಿದ್ದರೆ ಅದರ ಪ್ರಕಾರ ನಡೆದುಕೊಳ್ಳಲಿ’ ಎಂದರು.

'ಸ್ವಾಮೀಜಿಗಳಿಗೂ ರಾಜಕೀಯಕ್ಕೂ ಸಂಬಂಧವಿಲ್ಲ’
ರಾಯಚೂರು ವರದಿ: ‘ಸ್ವಾಮೀಜಿಗಳಿಗೂ ರಾಜಕೀಯಕ್ಕೂ ಸಂಬಂಧವಿಲ್ಲ. ಚಂದ್ರಶೇಖರನಾಥ ಸ್ವಾಮೀಜಿ ತಿಳಿವಳಿಕೆಯಿಂದ ಮಾತನಾಡಿದ್ದಾರೋ, ತಿಳಿವಳಿಕೆ ಇಲ್ಲದೆ ಮಾತನಾಡಿದ್ದಾರೋ ಗೊತ್ತಿಲ್ಲ. ಅವರು ರಾಜಕೀಯ ಮಾತನಾಡಬಾರದಿತ್ತು’ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ ಅಭಿಪ್ರಾಯಪಟ್ಟರು.

‘ಸ್ವಾಮೀಜಿ ಏಕೆ ರಾಜಕೀಯ ಮಾತನಾಡಬೇಕು? ಇದು ಸರಿಯಲ್ಲ. ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕು ಎನ್ನುವ ವಿಚಾರ ಅಲ್ಲಲ್ಲಿ ಪ್ರಸ್ತಾಪವಾಗುತ್ತಿದೆ. ಈ ವಿಷಯದ ಬಗ್ಗೆ ಏನೂ ಹೇಳಲಾರೆ. ಇದನ್ನು ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ಕೆಲವರು ಏಕೆ ಬಹಿರಂಗ ಹೇಳಿಕೆ ಕೊಡುತ್ತಿದ್ದಾರೋ ಗೊತ್ತಿಲ್ಲ’ ಎಂದರು.

‘ಕಾಂಗ್ರೆಸ್‌ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎನ್ನುವ ನಿಯಮ ಇದೆ. ಆದರೆ, ಡಿ.ಕೆ.ಶಿವಕುಮಾರ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರಿಯುತ್ತಿದ್ದಾರೆ’ ಎಂದು ಹೇಳಿದರು.

Quote - ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಹುದ್ದೆ ಕುರಿತು ನಾಯಕರು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕೆ ಹೊರತು ಸಾರ್ವಜನಿಕವಾಗಿ ಚರ್ಚಿಸುತ್ತಿರುವುದು ಪಕ್ಷ ರಾಜ್ಯದ ಹಿತದೃಷ್ಟಿಯಿಂದ ಸರಿಯಲ್ಲ. ಮುಖ್ಯಮಂತ್ರಿ ಇರುವಾಗ ಮತ್ತೆ ಆ ಹುದ್ದೆ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ದಿನೇಶ್‌ ಗುಂಡೂರಾವ್ ಆರೋಗ್ಯ ಸಚಿವ

- ಡಿಕೆಶಿ ಮುಖ್ಯಮಂತ್ರಿ ಆಗುವುದು ಪಕ್ಕಾ: ಶಾಸಕ ಬಸವರಾಜು

ದಾವಣಗೆರೆ: ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಅವಧಿಯಲ್ಲೇ ಮುಖ್ಯಮಂತ್ರಿ ಆಗುವುದು ಪಕ್ಕಾ. ಈ ಬಗ್ಗೆ ಯಾವುದೇ ಸಂಶಯ ಇಲ್ಲ’ ಎಂದು ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಹೇಳಿದರು. ‘ಒಕ್ಕಲಿಗ ಸಮುದಾಯದ ಸ್ವಾಮೀಜಿ ಹೇಳಿರುವುದು ಸರಿಯಿದೆ. ಡಿ.ಕೆ. ಶಿವಕುಮಾರ್ ಅವರ ಸಂಘಟನಾ ಶಕ್ತಿಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಅವರೇ ಮುಖ್ಯಮಂತ್ರಿ ಆಗಬೇಕಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಡಿಸಿಎಂ ಆಗಿದ್ದಾರೆ’ ಎಂದು ನಗರದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರಿಗೆ ತಿಳಿಸಿದರು. ‘ಡಿ.ಕೆ.ಶಿವಕುಮಾರ್ ಅವರಿಗೆ ಅನೇಕ ಶಾಸಕರ ಬೆಂಬಲ ಇದೆ. ಅವರ ಹೆಸರನ್ನು ಪ್ರಸ್ತಾಪ ಮಾಡುವುದಿಲ್ಲ. ರಾಜ್ಯದ ಎಲ್ಲ ಸಮುದಾಯಗಳ ಪರವಾಗಿ ಸಮರ್ಥ ನಾಯಕ ಎಂಬ ಕಾರಣಕ್ಕೆ ಡಿ.ಕೆ. ಶಿವಕುಮಾರ್‌ ಅವರನ್ನು ಡಿಸಿಎಂ ಮಾಡಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT