ಗುರುವಾರ , ಆಗಸ್ಟ್ 5, 2021
23 °C

ಲಾಕ್‌ಡೌನ್‌ ಭೀತಿಯಲ್ಲೂ 49 ಸಹಜ ಹೆರಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಲಸಂಗ: ಕೊರೊನಾ ಭೀತಿಯ ನಡುವೆಯೂ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟಾಫ್‌ ನರ್ಸ್‍ಗಳಾದ ಗೌರವ್ವ ಕುಂಬಾರ ಮತ್ತು ಪ್ರೇಮಾ ಶಿರಹಟ್ಟಿ ಅವರು ಲಾಕ್‌ಡೌನ್‌ ಆರಂಭದಿಂದ ಇಲ್ಲಿವರೆಗೆ ವೈದ್ಯಾಧಿಕಾರಿ ಡಾ.ವಾಸಂತಿ ಅವರ ಮಾರ್ಗದರ್ಶನದಲ್ಲಿ 49 ಸಹಜ ಹೆರಿಗೆಗಳನ್ನು ಮಾಡಿಸಿ ಗಮನಸೆಳೆದಿದ್ದಾರೆ.

ತುರ್ತು ಸಂದರ್ಭದಲ್ಲಿ ಗರ್ಭಿಣಿಯರ ಸೇವೆ ಮಾಡಿ ಜನರ ಮೆಚ್ಚುಗೆ ಗಳಿಸಿದ್ದಾರೆ.

ಅಥಣಿ ತಾಲ್ಲೂಕಿನಿಂದ 6 ಕಿ.ಮೀ. ಅಂತರದಲ್ಲಿನ ಬಡಚಿ ಗ್ರಾಮದ ಮಹಿಳೆಗೆ ಭಾನುವಾರ ನಸುಕಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅಥಣಿಯಲ್ಲಿ ಕೊರೊನಾ ಕಾರಣದಿಂದ ಖಾಸಗಿ ಆಸ್ಪತ್ರೆಗಳು ಬಂದ್ ಆಗಿರುವುದರಿಂದ ಅವರು 28 ಕಿ.ಮೀ. ದೂರದ ತೆಲಸಂಗ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೆಲವೇ ಗಂಟೆಗಳಲ್ಲಿ ಸಹಜ ಹೆರಿಗೆ ಆಗಿದೆ. ತಾಯಿ–ಮಗು ಆರೋಗ್ಯವಾಗಿದ್ದಾರೆ. ಸಿಸೇರಿಯನ್ ಬದಲಿಗೆ ಸಹಜ ಹೆರಿಗೆಗೆ ಆದ್ಯತೆ ನೀಡುವುದು ಇಲ್ಲಿನ ವಿಶೇಷವಾಗಿದೆ.

‘15 ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇನೆ. ಅನುಭವ ಹಾಗೂ ತರಬೇತಿ ಆಧಾರದ ಮೇಲೆ ನಿರ್ವಹಿಸುತ್ತಿದ್ದೇನೆ. 1,500ಕ್ಕೂ ಹೆಚ್ಚಿನ ಹೆರಿಗೆ ಮಾಡಿಸಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಲು ಹೆಮ್ಮೆ ಆಗುತ್ತಿದೆ. ಸರ್ಕಾರ ನಮ್ಮಿಂದ ದುಡಿಸಿಕೊಳ್ಳುತ್ತಿದೆ. ಆದರೆ, ಕಾಯಂ ಮಾಡುತ್ತಿಲ್ಲ. ದಿನಗೂಲಿ ಲೆಕ್ಕದಲ್ಲಿ ಕೊಡುವ ಸಂಬಳ ಕುಟುಂಬ ನಿರ್ವಹಣೆಗೆ ಸಾಕಾಗುವುದಿಲ್ಲ. ಸರ್ಕಾರ ನೆರವಾಗಬೇಕು’ ಎಂದು ಗೌರವ್ವ ಕುಂಬಾರ ಕೋರಿದರು.

‘5 ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇನೆ. 500ಕ್ಕೂ ಹೆಚ್ಚಿನ ಹೆರಿಗೆ ಮಾಡಿಸಿದ್ದೇನೆ. ವಿದ್ಯೆ ಕಲಿತಿದ್ದೇವೆ;ಸೇವೆ ಮಾಡಲೇಕೆ ಹಿಂದೇಟು? ಜನ ಸೇವೆ ನಿಜಕ್ಕೂ ತೃಪ್ತಿ ತಂದಿದೆ. ಚಿಕಿತ್ಸೆ ಪಡೆದವರು ನಮ್ಮನ್ನು ಹರಸಿ ಹೋಗುತ್ತಾರೆ. ಇದರಲ್ಲಿ ತೃಪ್ತಿ ಇದೆ. ಇಂದಲ್ಲ ನಾಳೆ ಕೆಲಸ ಕಾಯಂ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ಪ್ರೇಮಾ ಸಿರಹಟ್ಟಿ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು