ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಗಳಿಗೆ ವಿದ್ಯಾರ್ಥಿಗಳ ನಮನ

Last Updated 4 ಸೆಪ್ಟೆಂಬರ್ 2021, 12:18 IST
ಅಕ್ಷರ ಗಾತ್ರ

ಕೋವಿಡ್, ಪ್ರವಾಹದಿಂದಾಗಿ ಭೌತಿಕ ತರಗತಿಗಳು ನಡೆಯಲಿಲ್ಲ. ಆನ್‌ಲೈನ್ ತರಗತಿಗೆ ನೆಟ್‌ವರ್ಕ್ ಸಮಸ್ಯೆ. ಈ ಎಲ್ಲ ತೊಡಕುಗಳ ನಡುವೆಯೂ ಶಿಕ್ಷಕರು ತಮ್ಮ ಕರ್ತವ್ಯವನ್ನು ಸೇವೆಯೆಂದೇ ಪರಿಗಣಿಸಿ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಅಂತಹ ಗುರುಗಳಿಗೆ ‘ಥ್ಯಾಂಕ್ಸ್’ ಹೇಳಲು ‘ಪ್ರಜಾವಾಣಿ’ಯು ವಿದ್ಯಾರ್ಥಿಗಳಿಗೆ ಅವಕಾಶ ನೀಡಿದೆ. ಆಯ್ದ ಬರಹಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

ಸಂದೀಪ್ ಸರ್‌ಗೆ ಧನ್ಯವಾದ

ಕೊರೊನಾದಿಂದ ಶಾಲೆಗಳು ಬಂದ್‌ ಆದಾಗ ಖುಷಿಯೋ ಖುಷಿ. ನಿರಂತರ ರಜೆಯಿಂದ ಕಲಿಕೆ ನಿಂತಾಗ ಭಯವೋ ಭಯ. ಆಗ ದೇವರ ರೂಪದಲ್ಲಿ ಸಂದೀಪ್ ಸರ್ ಬಂದು ಆನ್‌ಲೈನ್‌ನಲ್ಲಿ ಪಾಠ ಆರಂಭಿಸಿದರು. ಮೊದಲು ಮೊಬೈಲ್ ಫೋನ್‌ ಮೂಲಕ ಆರೋಗ್ಯ ವಿಚಾರಿಸಿ ಕೊರೊನಾ ಜಾಗೃತಿ ಮೂಡಿಸಿದರು. ಆನ್‌ಲೈನ್‌ ಪಾಠಕ್ಕೆ ಹಾಜರಾಗುವ ಬಗೆಯನ್ನೂ ತಿಳಿಸಿದರು. ಪಾಠಗಳನ್ನು ಸರಳವಾಗಿ ತಿಳಿಸಿ ಹೋಂವರ್ಕ್‌ ಕೊಟ್ಟು ಮಾರ್ಗದರ್ಶನ ಮಾಡುತ್ತಿದ್ದರು. ಪಾಠಗಳಿಗೆ ಹಾಜರಾಗದಾಗ ಫೋನ್ ಮೂಲಕ ಕಾರಣ ಕೇಳುತ್ತಿದ್ದರು. ಹಾಜರಾಗಲು ಪ್ರೇರೇಪಿಸುತ್ತಿದ್ದರು. ಅವರ ಪ್ರೇರಣೆಯಿಂದ ಬಹಳಷ್ಟು ಕಲಿತೆ.

– ದಕ್ಷಾ ವಿನೋದ ದಳವಾಯಿ, ಚನ್ನಮ್ಮನ ಕಿತ್ತೂರು

***

ಸಮಸ್ಯೆಗಳ ನಡುವೆಯೇ

ಕೋವಿಡ್ ಪರಿಣಾಮ ಆರಂಭವಾದ ಆನ್‌ಲೈನ್‌ ತರಗತಿಗಳನ್ನು ಆಲಿಸುವುದು ಬಹು ದೊಡ್ಡ ಸವಾಲಾಗಿತ್ತು. ನೆಟ್‌ವರ್ಕ್‌ ಸಮಸ್ಯೆ ಹೇಳತೀರದು. ಈ ನಡುವೆಯೂ ರಸಾಯನವಿಜ್ಞಾನ ಗುರುಗಳಾದ ಅಚ್ಯುತಾನಂದ ಮತ್ತು ಕಿರಣ್ ವಿಭಿನ್ನ ಶೈಲಿಯಲ್ಲಿ ವಿಷಯ ಮಂಡಿಸಿ ಮನದಟ್ಟಾಗುವಂತೆ ಪಾಠ ಮಾಡಿದ್ದಕ್ಕೆ ಶಿರಬಾಗುತ್ತೇವೆ. ನೆಟ್‌ವರ್ಕ್‌ ಸಮಸ್ಯೆ ಇರುವಲ್ಲಿನ ಕಡೆಗಳ ವಿದ್ಯಾರ್ಥಿಗಳಿಗೆ ಕೈಬರಹದ ಮೂಲಕ ನೋಟ್ಸ್ ಒದಗಿಸಿದರು. ಮನೆಯಿಂದಾಚೆ ಬಂದು ನೆಟ್‌ವರ್ಕ್‌ ಸಿಗುವಲ್ಲಿ ನಿಂತು ಪಾಠ ಹೇಳಿಕೊಟ್ಟರು. ಅವರಿಗೆ ಧನ್ಯವಾದ.

- ನಾರಾಯಣ ಡಂಬಳಿ, ಎಸ್‌ಸ್ಎಂಎಸ್ ಕಾಲೇಜು, ಕೋಹಳ್ಳಿ, ಅಥಣಿ

***

ಉತ್ತಮವಾಗಿ ಪಾಠ

ಕೊರೊನಾ ಸಮಯದಲ್ಲಿ ನಮ್ಮ ಕಾಲೇಜಿನ ಉಪನ್ಯಾಸಕರು ಆನ್‌ಲೈನ್‌ ತರಗತಿ ತೆಗೆದುಕೊಂಡು ಉತ್ತಮವಾಗಿ ಪಾಠ ಮಾಡಿದರು. ಎಲ್ಲರಿಗೂ ಅರ್ಥವಾಗುವಂತೆ ಬೋಧಿಸುತ್ತಿದ್ದರು. ನಮ್ಮೆಲ್ಲರನ್ನೂ ಸಮಾಜದಲ್ಲಿ ಒಳ್ಳೆಯ ವ್ಯಕ್ತಿ ಮಾಡಲು ಶ್ರಮಿಸುತ್ತಿದ್ದಾರೆ. ಅವರೆಲ್ಲರಿಗೂ ನನ್ನ ನಮನಗಳು.

– ಕೀರ್ತಿ ಸುರೇಶ ಹೊಸಮನಿ, ಮುದಕವಿ, ರಾಮದುರ್ಗ ತಾಲ್ಲೂಕು

***

ಎಲ್ಲರಿಗೂ ಧನ್ಯವಾದ

ಈಗಿನ ಕೋವಿಡ್‌ನಂತಹ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ನಮ್ಮ ಕಲಿಕೆ ಚೆನ್ನಾಗಿ ಸಾಗಬೇಕಾದರೆ ಶಿಕ್ಷಕರ ಪ್ರಯತ್ನ ಕಾರಣವಾಗುತ್ತದೆ. ಹೀಗಾಗಿ, ಆನ್‌ಲೈನ್‌ ಮೊದಲಾದ ವೇದಿಕೆಗಳನ್ನು ಬಳಸಿಕೊಂಡು ನಮ್ಮೆಲ್ಲರಿಗೂ ಪಾಠ ಮಾಡಿದ ಶಿಕ್ಷಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಶಿಕ್ಷಕರ ದಿನದ ಶುಭಾಶಯ ಕೋರುತ್ತೇನೆ.

– ನಿಧಾ ಗುರ್ಲಹೊಸೂರ, ಪುರಸಭೆ ಶೂರಸಂಗೊಳ್ಳಿ ಪ್ರೌಢಶಾಲೆ, ಬೈಲಹೊಂಗಲ

***

ವ್ಯರ್ಥವಾಗಲಿಲ್ಲ ಆನ್‌ಲೈನ್ ಪಾಠ

ನಿಗದಿತ ವೇಳಾಪಟ್ಟಿಯಂತೆ 10 ನಿಮಿಷ ಮುಂಚಿತವಾಗಿ ಫೋನ್‌ನೊಂದಿಗೆ ಪಾಠಕ್ಕೆ ಕುಳಿತು ಪುಸ್ತಕ ತೆರೆದಾಗ, ಆ ವಿಷಯದ ಗುರುಗಳೇ ಮುಂದೆ ಬಂದಂತಾಗುತ್ತಿತ್ತು. ಹಾಜರಾಗದಿದ್ದವರಿಗೆ ತಕ್ಷಣವೇ ಫೋನ್ ಕರೆ ಮಾಡಿ ವಿಚಾರಿಸುತ್ತಿದ್ದರು. ವಿದ್ಯಾರ್ಥಿ ನೆಟ್‌ವರ್ಕ್‌ ಸಮಸ್ಯೆ ಹೇಳಿದಾಗ, ‘ನಮಗೂ ಅದೇ ಪರಿಸ್ಥಿತಿ ಇದೆ. ಎಲ್ಲಿ ಸಿಗುತ್ತದೆಯೋ ಆ ಸ್ಥಳದಿಂದಲೇ ಪಾಠ ಮಾಡುತ್ತಿದ್ದೇವೆ. ನೀವೂ ಹಾಗೆಯೇ ನೆಟ್‌ವರ್ಕ್‌ ಇರುವ ಕಡೆ ಇರಿ’ ಎಂದು ತಿಳಿಸಿ ಪಾಠ ಮಾಡುತ್ತಿದ್ದರು. ಅಂತಹ ಗುರುಗಳಿಗೆ ವಂದನೆಗಳು ಮತ್ತು ಶುಭಾಶಯಗಳು.

–ರಾಹುಲ್ ಪೂಜೇರ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಲ್ಲೋಳಿ

***

ಉತ್ತಮ ಮಾರ್ಗದರ್ಶನ

ಕೋವಿಡ್‌ನಿಂದಾಗಿ ವಿದ್ಯಾರ್ಥಿಗಳೆಲ್ಲರ ಭವಿಷ್ಯ ಅಂಧಕಾರದಲ್ಲಿ ಮುಳುಗಿತ್ತು. ಅವರಲ್ಲಿ ನಾನೂ ಇದ್ದೆ. ಈ ಸಂದರ್ಭದಲ್ಲಿ ನಮ್ಮ ಕಾಲೇಜಿನವರು ಆನ್‌ಲೈನ್‌ ಮೂಲಕ ಕಲಿಸಿದರು. ನೆಟ್‌ವರ್ಕ್‌ ಸಮಸ್ಯೆ ಇದ್ದವರು, ಕರೆ ಮಾಡಿದಾಗ ಪಾಠದ ಬಗ್ಗೆ ತಿಳಿಸಿ ಉತ್ತಮ ಮಾರ್ಗದರ್ಶನ ಮಾಡಿದರು. ಹೀಗಾಗಿ, ಪ್ರಥಮ ಸೆಮಿಸ್ಟರ್‌ ಪರೀಕ್ಷೆಯನ್ನು ಗೊಂದಲ ಅಥವಾ ಆತಂಕವಿಲ್ಲದೆ ಯಶಸ್ವಿಯಾಗಿ ಎದುರಿಸಲು ಸಾಧ್ಯವಾಯಿತು. ಆ ಗುರುಗಳೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ.

– ಪ್ರಿಯಾಂಕಾ ಕುರಾಡೆ, ಎಸ್‌ಪಿಎಂ ಶಿಕ್ಷಣ ಮಹಾವಿದ್ಯಾಲಯ, ಹಾರೂಗೇರಿ

***

ಆದರಣೀಯ ಕುಂಬಾರ ಗುರುಗಳು

ಕುಂಬಾರ ಗುರುಗಳು ವಿವೇಕಾನಂದ ನವೋದಯ ಮತ್ತು ಮೊರಾರ್ಜಿ ಶಾಲೆ ಪ್ರವೇಶದ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದರು. ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ತರಗತಿ ತೆಗೆದುಕೊಳ್ಳುತ್ತಿದ್ದರು. ಅವರು ಬಹಳ ಕಟ್ಟುನಿಟ್ಟು. ಅದು ಒಮ್ಮೊಮ್ಮೆ ನಮಗೆ ಬಹಳ ಬೇಸರ ತರಿಸುತ್ತಿತ್ತು. ಹೋಂವರ್ಕ್‌ ತಪ್ಪಿದರೆ ಯಾವುದೇ ಮುಲಾಜಿಲ್ಲದೆ ಶಿಕ್ಷೆ ಕೊಡುತ್ತಿದ್ದರು. ಅವರಿಂದಾಗಿ ಗಣಿತ, ಇಂಗ್ಲಿಷ್ ಮತ್ತು ಸಾಮಾನ್ಯ ಜ್ಞಾನ ಪಡೆದವು. ಕುಂಬಾರ ಗುರುಗಳು ಸಾಕಷ್ಟು ಜ್ಞಾನ ನೀಡಿದರು. ಅವರಿಗೆ ಕೃತಜ್ಞತೆ ಅರ್ಪಿಸುತ್ತೇನೆ.

– ಶ್ರೇಯಸ್ ಕಿರಣ ಯಲಿಗಾರ, ಎಸ್.ಪಿ.ಜೆ.ಜಿ. ಪ್ರೌಢಶಾಲೆ, ಮುನವಳ್ಳಿ

***

ಹೃದಯ ಪೂರ್ವಕ ಧನ್ಯವಾದಗಳು

ತರಗತಿಯ ಪರೀಕ್ಷೆಗೆ ಮಾತ್ರ ಸೀಮಿತವಾಗಿದ್ದ ನನ್ನ ಮನಸ್ಸನ್ನು ಸ್ಪರ್ಧಾತ್ಮಕ ಪರೀಕ್ಷೆಯತ್ತಲೂ ಕೇಂದ್ರೀಕರಿಸುವಂತೆ ಮಾಡಿದ ನಿಮಗೆ ನಾನು ಯಾವಾಗಲೂ ಚಿರಋಣಿ. ಉತ್ತಮವಾಗಿ ಪಾಠ ಮಾಡಿದ ನಿಮಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಆಸೆಯಂತೆ ದೊಡ್ಡ ಹುದ್ದೆಗೆ ಹೋಗಲು ಪ್ರಯತ್ನಿಸುವೆ.

– ಅನಿತಾ ತುಕಾರಾಮ, ಗೋಕಾಕ

***

ನೆರವಾದ ಶಿಕ್ಷಕರು

ಮದುವೆಯಾದ ನಂತರ ನಾನು ನಿತ್ಯವೂ ತರಗತಿಗೆ ಹೋಗಲು ಆಗುತ್ತಿರಲಿಲ್ಲ. ಅಷ್ಟರಲ್ಲಿ ಕೋವಿಡ್ ಹಾವಳಿ ಕಾಣಿಸಿಕೊಂಡಿತು. ಆಗ ಆನ್‌ಲೈನ್‌ ತರಗತಿಗಳನ್ನು ಗುರುಗಳು ಆರಂಭಿಸಿದರು. ನನ್ನ ಬಳಿ ಸ್ಮಾರ್ಟ್ ಮೊಬೈಲ್ ಫೋನ್ ಇರಲಿಲ್ಲ. ತರಗತಿ ಕೇಳಲೇಬೇಕೆಂದು ಬಟ್ಟೆ ಹೊಲಿಯಲು ಪ್ರಾರಂಭಿಸಿ ಅದರಿಂದ ಬಂದ ಹಣದಿಂದ ಸೆಕೆಂಡ್ ಹ್ಯಾಂಡ್ ಮೊಬೈಲ್ ಫೋನ್ ಖರೀದಿಸಿದೆ. ಕೆಲಸದ ನಡುವೆಯೇ ಪಾಠ ಕೇಳುತ್ತಿದ್ದೆ. ರೆಕಾರ್ಡ್‌ ಮಾಡಿಕೊಂಡು ಬಿಡುವಾದಾಗ ಆಲಿಸುತ್ತಿದ್ದೆ. ಇದರಿಂದ ಪರೀಕ್ಷೆಗೆ ಸಹಕಾರಿಯಾಯಿತು. ಅನ್‌ಲೈನ್‌ ತರಗತಿಗಳ ಮೂಲಕ ಮಾರ್ಗದರ್ಶನ ಮಾಡಿದ ಎಲ್ಲ ಗುರುಗಳಿಗೂ ಧನ್ಯವಾದ.

– ನಾಗಿಣಿ ಮಾಳಿ, ಹಿಡಕಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT