ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಶತಮಾನದ ಹೊಸ್ತಿನಲ್ಲಿ ‘ಕಾಂಗ್ರೆಸ್‌ ಅಧಿವೇಶನ’

Published 31 ಡಿಸೆಂಬರ್ 2023, 4:36 IST
Last Updated 31 ಡಿಸೆಂಬರ್ 2023, 4:36 IST
ಅಕ್ಷರ ಗಾತ್ರ

ಬೆಳಗಾವಿ:‌‌ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್‌ ಅಧಿವೇಶನಕ್ಕೆ ಸಾಕ್ಷಿಯಾದ ನೆಲ ಬೆಳಗಾವಿ. 1924ರಲ್ಲಿ ನಡೆದ ಐತಿಹಾಸಿಕ ಅಧಿವೇಶನಕ್ಕೆ ಈಗ ಶತಮಾನದ ಸಂಭ್ರಮ. ಇದರ ಸವಿನೆನಪಿಗಾಗಿ ವರ್ಷವಿಡೀ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ, ಸ್ವಾತಂತ್ರ್ಯದ ಸಂಗ್ರಾಮದ ಕ್ಷಣಗಳನ್ನು ನೆನೆಯಬೇಕೆಂಬ ಕೂಗು ಕೇಳಿಬರುತ್ತಿದೆ. ಇದಕ್ಕೆ ವಿಶೇಷ ಅನುದಾನ ಕೋರಿ ಜಿಲ್ಲಾಡಳಿತ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದೆ.

1924ರ ಡಿ.25, 26ರಂದು ಇಲ್ಲಿ ಅಧಿವೇಶನ ನಡೆದಿತ್ತು. 2024ರ ಡಿ.25ಕ್ಕೆ ಈ ಗಳಿಗೆಗೆ 100 ವಸಂತ ತುಂಬಲಿದೆ. ಅಂದು ಅಧಿವೇಶನ ನಡೆದ ಸ್ಥಳದಲ್ಲೀಗ ‘ವೀರಸೌಧ’ ನಿರ್ಮಾಣವಾಗಿದ್ದು, ಆ ಸ್ಥಳಕ್ಕೂ ಕಾಯಕಲ್ಪ ನೀಡಬೇಕೆಂಬ ಒತ್ತಾಯ ಸಾರ್ವಜನಿಕರದ್ದು.

ರಾಷ್ಟ್ರಪತಿ ಆಹ್ವಾನಿಸಬೇಕು

‘ವೀರಸೌಧದಲ್ಲಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಆಯೋಜಿಸಬೇಕು. ಅದಕ್ಕೆ ರಾಷ್ಟ್ರಪತಿ ಆಹ್ವಾನಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಂಡಲು ಶ್ರಮಿಸಿದ ಜಿಲ್ಲೆಯ ನೈಜ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಳ್ಳಿಪತ್ರ ನೀಡಿ ಸನ್ಮಾನಿಸಬೇಕು. ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಬೆಳಗಾವಿಯ ಯಾಳಗಿ ಕುಟುಂಬದವರನ್ನೂ ಗುರುತಿಸುವ ಕೆಲಸವಾಗಬೇಕಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸುಭಾಷ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇಶಭಕ್ತಿಗೆ ಸಂಬಂಧಿಸಿ ಜಿಲ್ಲಾಮಟ್ಟದ ನಿಬಂಧ, ಸಮರ ಗೀತೆ ಗಾಯನ ಮತ್ತು ರಂಗೋಲಿ ಸ್ಪರ್ಧೆ ಆಯೋಜಿಸಬೇಕು. ಸ್ವಾತಂತ್ರ್ಯ ಸಂಗ್ರಾಮ ಮತ್ತು ಅಧಿವೇಶನಕ್ಕೆ ಸಂಬಂಧಿಸಿ ಕಿರುಚಿತ್ರ ನಿರ್ಮಿಸಿ ಪ್ರದರ್ಶಿಸಬೇಕು. ವೀರಸೌಧದ ಇತಿಹಾಸವನ್ನು ನಾಡಿನುದ್ದಗಲಕ್ಕೂ ಪರಿಚಯಿಸಬೇಕು. ಅಧಿವೇಶನದ ಶತಮಾನೋತ್ಸವ ಅಂಗವಾಗಿ ನಗರದ ಕೆಲವು ಮುಖ್ಯ ರಸ್ತೆಗಳು ಮತ್ತು ವೃತ್ತಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರು ನಾಮಕರಣ ಮಾಡಬೇಕು’ ಎಂದರು.

ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳ ಆಯೋಜನೆ ಕುರಿತಾಗಿ ಚರ್ಚಿಸಲಾಗಿದೆ. ಇದಕ್ಕೆ ವಿಶೇಷ ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ.
ನಿತೇಶ್‌ ಪಾಟೀಲ, ಜಿಲ್ಲಾಧಿಕಾರಿ, ಬೆಳಗಾವಿ

ತಪ್ಪದ ಪರದಾಟ

ವೀರಸೌಧ ವೀಕ್ಷಣೆಗೆ ರಾಜ್ಯದ ವಿವಿಧೆಡೆಯಿಂದ ಜನರು, ಸಂಶೋಧಕರು ಮತ್ತು ಶಾಲಾ–ಕಾಲೇಜು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಅಲ್ಲಿ ಸಮರ್ಪಕವಾಗಿ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಇಲ್ಲದ್ದರಿಂದ ಅವರು ಪರದಾಡುವಂತಾಗಿದೆ.

‘ಮಳೆಗಾಲದಲ್ಲಿ ವೀರಸೌಧ ಸೋರುತ್ತದೆ. ಹಾಳಾಗಿರುವ ಕಡೆ ಚಾವಣಿ ದುರಸ್ತಿಗೊಳಿಸಬೇಕು. ಸೌಧದೊಳಗಿನ ಶೌಚಗೃಹ ಹಾಳಾಗಿದ್ದು, ಅದನ್ನೂ ಸರಿಪಡಿಸಬೇಕು. ಅಲ್ಲದೆ, ವೀರಸೌಧ ಹಿಂಬದಿಯಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಶೌಚಗೃಹ ನಿರ್ಮಿಸಬೇಕು. ಇದೇ ಆವರಣದಲ್ಲಿನ ಕಾಂಗ್ರೆಸ್‌ ಬಾವಿ ಸ್ವಚ್ಛಗೊಳಿಸಬೇಕು. ಮಹಾನ್‌ ನಾಯಕರ ಉಬ್ಬುಶಿಲ್ಪಗಳಿರುವ ಗೋಡೆಗಳಲ್ಲಿ ಕೆಲವೆಡೆ ಬಿರುಕು ಬಿಟ್ಟಿದೆ. ಅದನ್ನು ಸರಿಪಡಿಸಿ, ಸೌಧವನ್ನು ಇನ್ನಷ್ಟು ಆಕರ್ಷಣೀಯವಾಗಿಸಬೇಕು’ ಎನ್ನುತ್ತಾರೆ ಸುಭಾಷ ಕುಲಕರ್ಣಿ.

ವೀರಸೌಧದಲ್ಲಿ ಏನೇನಿದೆ?

ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿ ಅವರೊಂದಿಗೆ ಮೋತಿಲಾಲ್‌ ನೆಹರೂ ಜವಾಹರಲಾಲ್‌ ನೆಹರೂ ಮೌಲಾನಾ ಮಹಮ್ಮದ್‌ಅಲಿ ಮೌಲಾನಾ ಶೌಕತ್‌ಅಲಿ ಸರೋಜಿನಿ ನಾಯ್ಡು ಲಾಲಾ ಲಜಪತ ರಾಯ್‌ ಅವರಂತಹ ದಿಗ್ಗಜರ ತಂಡ ಪಾಲ್ಗೊಂಡಿತ್ತು. ‘ಕರ್ನಾಟಕ ಸಿಂಹ’ ಖ್ಯಾತಿಯ ಹುದಲಿಯ ಗಂಗಾಧರರಾವ್‌ ದೇಶಪಾಂಡೆ ಪ್ರಯತ್ನದ ಫಲವಾಗಿ ಇಂಥದ್ದೊಂದು ಅಧಿವೇಶನಕ್ಕೆ ಬೆಳಗಾವಿ ಸಾಕ್ಷಿಯಾಗಿತ್ತು. ‘ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ಯಾರೂ ಈ ಹೋರಾಟದಿಂದ ಹಿಂದೆ ಸರಿಯುವಂತಿಲ್ಲ’ ಎಂಬ ಐತಿಹಾಸಿಕ ನಿರ್ಣಯವನ್ನು ಇಲ್ಲಿ ಕೈಗೊಳ್ಳಲಾಗಿತ್ತು. ಅಧಿವೇಶನದಲ್ಲಿ ಪಾಲ್ಗೊಳ್ಳುವ 30 ಸಾವಿರ ಮಂದಿಗೆ ಕುಡಿಯುವ ನೀರಿಗಾಗಿ ಬಾವಿ ಸಹ ತೋಡಲಾಗಿತ್ತು. ಅದು ಇಂದು ‘ಕಾಂಗ್ರೆಸ್‌ ಬಾವಿ’ ಎಂದೇ ಖ್ಯಾತಿ ಪಡೆದಿದೆ. ಗಾಂಧೀಜಿ ಬಾಲ್ಯ ಶಿಕ್ಷಣ ಹೋರಾಟವನ್ನು ಬಿಂಬಿಸುವ ಹಾಗೂ ಅಧಿವೇಶನಕ್ಕೆ ಸಂಬಂಧಿಸಿದ ಅಪರೂಪದ ಚಿತ್ರಗಳನ್ನು ಸೌಧದಲ್ಲಿ ಪ್ರದರ್ಶಿಸಲಾಗಿದೆ. ಗಾಂಧಿ ಕಂಚಿನ ಪ್ರತಿಮೆ ಇದೆ. ಅದರ ಹಿಂಬದಿಯ ಗೋಡೆಯಲ್ಲಿ ಮಹಾನ್‌ ನಾಯಕರ ಉಬ್ಬುಶಿಲ್ಪಗಳಿವೆ.

ಖಾಸಗಿ ನಿರ್ಣಯ ಅಂಗೀಕಾರ

ಅಭಯ ‘ಮಹಾತ್ಮ ಗಾಂಧೀಜಿ ಬೆಳಗಾವಿಗೆ ಭೇಟಿ ನೀಡಿದ ಸವಿನೆನಪಿಗಾಗಿ ಮತ್ತು ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಆಚರಣೆಗಾಗಿ ರಾಜ್ಯ ಸರ್ಕಾರ ವರ್ಷವಿಡೀ ಕಾರ್ಯಕ್ರಮ ಆಯೋಜಿಸಬೇಕು. ಅಲ್ಲದೆ ಗಾಂಧಿ ಭೇಟಿ ಕೊಟ್ಟ ಸ್ಥಳಗಳನ್ನು ಅಭಿವೃದ್ಧಿಪಡಿಸಲು ವಿಶೇಷ ಅನುದಾನ ನೀಡುವಂತೆ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಖಾಸಗಿ ನಿರ್ಣಯ ಮಂಡಿಸಿದ್ದೆ. ಸರ್ಕಾರ ಅದನ್ನು ಅಂಗೀಕರಿಸಿದ್ದು ಮುಂಬರುವ ಬಜೆಟ್‌ನಲ್ಲಿ ವಿಶೇಷ ಅನುದಾನ ಕಲ್ಪಿಸುವುದಾಗಿ ಮತ್ತು ಶತಮಾನೋತ್ಸವದ ಸವಿನೆನಪಿಗೆ ವರ್ಷಪೂರ್ತಿ ಕಾರ್ಯಕ್ರಮ ಆಯೋಜಿಸುವುದಾಗಿ ಭರವಸೆ ನೀಡಿದೆ’ ಎಂದು ಶಾಸಕ ಅಭಯ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಗಾವಿಯ ಟಿಳಕವಾಡಿಯಲ್ಲಿರುವ ವೀರಸೌಧ
–ಪ್ರಜಾವಾಣಿ ಚಿತ್ರ
ಬೆಳಗಾವಿಯ ಟಿಳಕವಾಡಿಯಲ್ಲಿರುವ ವೀರಸೌಧ –ಪ್ರಜಾವಾಣಿ ಚಿತ್ರ
ಬೆಳಗಾವಿಯ ವೀರಸೌಧದ ಗೋಡೆಗಳ ಮೇಲಿರುವ ಅಧಿವೇಶನದ ಚಿತ್ರಗಳು–ಪ್ರಜಾವಾಣಿ ಚಿತ್ರ
ಬೆಳಗಾವಿಯ ವೀರಸೌಧದ ಗೋಡೆಗಳ ಮೇಲಿರುವ ಅಧಿವೇಶನದ ಚಿತ್ರಗಳು–ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT