ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನಿಸುವವರನ್ನು ಗುಂಡಿಟ್ಟು ಕೊಲ್ಲುವ ಭಯದ ವಾತಾವರಣವಿದೆ: ನಿಜಗುಣ ಸ್ವಾಮೀಜಿ

Last Updated 29 ಜೂನ್ 2019, 12:45 IST
ಅಕ್ಷರ ಗಾತ್ರ

ಬಸವರಾಜ ಕಟ್ಟೀಮನಿ ವೇದಿಕೆ (ಗೋಕಾಕ): ‘ದೇಶದಲ್ಲಿ ಇಂದು ಪ್ರಶ್ನೆ ಕೇಳುವವರನ್ನು ಗುಂಡಿಟ್ಟು ಕೊಲ್ಲುವ ಭಯದ ವಾತಾವರಣವಿದೆ’ ಎಂದು ಮುಂಡರಗಿ–ಬೈಲೂರು ತೋಂಟದಾರ್ಯ ಮಠದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.

ವೈಚಾರಿಕ ಗೋಷ್ಠಿಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಪ್ರಶ್ನಿಸುವವರನ್ನು ಅಪರಾಧಿಗಳಂತೆ ಬಿಂಬಿಸಲಾಗುತ್ತಿದೆ. ವ್ಯವಸ್ಥಿತ ಜಾಲದಲ್ಲಿ ಸಿಕ್ಕಿಸಿ ಮೂಲೆಗುಂಪು ಮಾಡಲಾಗುತ್ತಿದೆ. ಈ ಅನುಭವ ಸ್ವತಃ ನನಗೂ ಆಗಿದೆ’ ಎಂದರು.

‘ವಾಸ್ತವ ವಾದವನ್ನು ಒಪ್ಪುವುದೇ ವೈಚಾರಿಕತೆ. ಪ್ರಶ್ನೆ ಮಾಡಿದರೇ ಮಾತ್ರ ಜೀವನದಲ್ಲಿ ಏನನ್ನಾದರು ಪಡೆಯಲು ಸಾಧ್ಯ. ಪ್ರಶ್ನೆ ಕೇಳುವ ಪರಿಪಾಠ ಆರಂಭವಾಗಿದ್ದು 12ನೇ ಶತಮಾನದಲ್ಲಿ. ಬಸವಾದಿ ಶರಣರ ಚಳವಳಿಯ ಪ್ರಭಾವದಿಂದ ರಾಜ್ಯದಲ್ಲಿ ಹಂತಹಂತವಾಗಿ ಮೂಢನಂಬಿಕೆ ಕಡಿಮೆಯಾಗುತ್ತಾ ಬಂದಿದೆ’ ಎಂದು ಅಭಿಪ್ರಾಯಪಟ್ಟರು.

ದೇಶದ್ರೋಹಿಯ ಪಟ್ಟ:‘ವೈಚಾರಿಕ ಅಭಿಪ್ರಾಯ ವ್ಯಕ್ತಿಪಡಿಸುವವರನ್ನು ಹಾಗೂ ಮೂಢನಂಬಿಕೆಗಳ ಬಗ್ಗೆ ಜಾಗೃತಿ ಮೂಡಿಸುವವರನ್ನು ಧರ್ಮ ವಿರೋಧಿ, ದೇಶ ವಿರೋಧಿ, ಸಂಪ್ರದಾಯ ವಿರೋಧಿಗಳು ಎಂದು ಜರಿಯಲಾಗುತ್ತಿದೆ. ಸಂಪ್ರದಾಯದ ವಿರೋಧವಾಗಿ ಮಾತನಾಡುತ್ತೇನೆ ಎಂಬ ಭಯದಿಂದ ನನ್ನನ್ನು ಅನೇಕ ಕಾರ್ಯಕ್ರಮಗಳಿಗೆ ಆಹ್ವಾನಿಸುವುದಿಲ್ಲ’ ಎಂದು ಹೇಳಿದರು.

‘ನಮ್ಮನ್ನು ನಾವು ಅರಿತುಕೊಳ್ಳುವುದು ಮುಖ್ಯ. ಬದುಕು ಕಟ್ಟಿಕೊಳ್ಳಲು ಹಾಗೂ ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸಲು ವೈಚಾರಿಕತೆ ಅಗತ್ಯ. ಪ್ರಶ್ನೆ ಹುಟ್ಟದಿದ್ದರೇ ಆತ ಮನುಷ್ಯನೇ ಅಲ್ಲ.ಧರ್ಮ, ದೇವರ ಭಯದಿಂದ ನಾವು ಮುಕ್ತರಾಗಬೇಕಿದೆ’ ಎಂದರು.

ರಾಜಕಾರಣಿಗಳಿಗೆ ವಿಷಮಶೀತ ಜ್ವರ:ರಾಜಕಾರಣಿಗಳಿಗೆ ವಿಷಮಶೀತ ಜ್ವರ ಆವರಿಸಿದೆ. ಯಾವ ಮಾತ್ರೆ ತೆಗೆದುಕೊಂಡರೂ ಅದು ವಾಸಿಯಾಗುವುದಿಲ್ಲ. ಒಂದು ಪಕ್ಷ ಧರ್ಮಕ್ಕೆ ಅಂಟಿಕೊಂಡರೇ, ಇನ್ನೊಂದು ಪಕ್ಷ ಜಾತಿಯ ಆಧಾರದಲ್ಲಿ ರಾಜಕಾರಣ ಮಾಡುತ್ತದೆ. ಮತ್ತೊಂದು ಪಕ್ಷ ಅಧಿಕಾರದಾಸೆಗೆ ಯಾವ ಹಂತಕ್ಕಾದರೂ ಇಳಿಯುತ್ತದೆ. ಹೀಗೆ ಇನ್ನಿತರೇ ಪಕ್ಷಗಳು ಕೂಡ ಒಂದೊಂದು ವಿಷಯಕ್ಕೆ ಸೀಮಿತವಾಗಿವೆ’ ಎಂದು ವಾಗ್ದಾಳಿ ನಡೆಸಿದರು.ಸಂವಿಧಾನದ ಆಶಯಗಳಿಗೆ ತಕ್ಕಂತೆ ರಾಜಕಾರಣ ಮಾಡಿದರೇ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ತಾಲ್ಲೂಕು ಘಟಕದ ಅಧ್ಯಕ್ಷ ಮಹಾಂತೇಶ ತಾಂವಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT