ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಸಹಾಯ; ‘ಸ್ಮಾರ್ಟ್’ ಆಯ್ತು ಈ ಸರ್ಕಾರಿ ಶಾಲೆ!

ದಾನಿಗಳ ನೆರವಿನಿಂದ ಸೈನ್ಸ್ ಲ್ಯಾಬ್‌ ವ್ಯವಸ್ಥೆ
Last Updated 7 ಜುಲೈ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಶಿಕ್ಷಕರ ಇಚ್ಛಾಶಕ್ತಿ, ಊರಿನವರ ಸಹಕಾರ, ದಾನಿಗಳು, ಫೇಸ್‌ಬುಕ್‌ ಮತ್ತು ಹಳೆಯ ವಿದ್ಯಾರ್ಥಿಗಳ ಸಹಾಯದಿಂದಾಗಿ ತಾಲ್ಲೂಕಿನ ಭೂತರಾಮನಹಟ್ಟಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯು ‘ಸ್ಮಾರ್ಟ್‌’ ರೂಪಗೊಂಡಿದೆ. ಅತ್ಯಾಧುನಿಕ ಸೈನ್ಸ್‌ ಲ್ಯಾಬ್‌ವುಳ್ಳ ಕೆಲವೇ ಶಾಲೆಗಳ ಪಟ್ಟಿಯಲ್ಲಿ ಹೆಸರು ಗಳಿಸಿದೆ.

ಶಾಲೆಯಲ್ಲಿ ನಡೆಯುವ ಬೆಳವಣಿಗೆಗಳನ್ನು ಸಾಮಾಜಿಕ ಮಾಧ್ಯಮ ‘ಫೇಸ್‌ಬುಕ್‌’ನಲ್ಲಿ ಶಿಕ್ಷಕರು ಪೋಸ್ಟ್ ಮಾಡುತ್ತಿದ್ದರು. ಇದನ್ನು ಗಮನಿಸಿದ ದಾನಿಗಳು ಸಹಾಯಹಸ್ತ ಚಾಚಿ ಶಾಲೆಯು ಅತ್ಯಾಧುನಿಕ ಸೌಲಭ್ಯಗಳನ್ನು ಕಂಡುಕೊಳ್ಳಲು ನೆರವಾಗಿದ್ದಾರೆ. ಪರಿಣಾಮ, ಗ್ರಾಮೀಣ ಪ್ರದೇಶದ ಈ ಮಕ್ಕಳಿಗೆ ಸ್ಮಾರ್ಟ್‌ ವ್ಯವಸ್ಥೆಯಲ್ಲಿ ಕಲಿಯುವುದು ಸಾಧ್ಯವಾಗಿದೆ.

‘ಪರಮಾಣು’ ಎನ್ನುವ ವಿಜ್ಞಾನ ಪ್ರಯೋಗಾಲಯವನ್ನು ಈಚೆಗೆ ಉದ್ಘಾಟಿಸಲಾಗಿದ್ದು, ಮಕ್ಕಳಿಗೆ ಚಟುವಟಿಕೆಗಳ ಮೂಲಕ ವಿಜ್ಞಾನದ ವಿಷಯವನ್ನು ಕಲಿಸಲಾಗುತ್ತಿದೆ. ಅವರನ್ನು ಪ್ರಯೋಗಗಳತ್ತ ಆಸಕ್ತಿ ಮೂಡಿಸಿ ಮೂಲವಿಜ್ಞಾನದತ್ತ ಸೆಳೆಯಲಾಗುತ್ತಿದೆ.

ಖಾತೆಯಿಂದಾಗಿ:

‘ನಮ್ಮೂರ ಸರ್ಕಾರಿ ಶಾಲೆ ಭೂತರಾಮನಹಟ್ಟಿ’ ಎಂಬ ಅಕೌಂಟ್‌ನಲ್ಲಿ, ಶಾಲೆಯ ಮಾಹಿತಿಯನ್ನು ಹಲವು ವರ್ಷಗಳಿಂದಲೂ ಹಂಚಿಕೊಳ್ಳುತ್ತಿದ್ದೇವೆ. ಇದರಿಂದ ಬಹಳ ಅನುಕೂಲವಾಗುತ್ತಿದೆ. ಸಮುದಾಯದಿಂದ ಆರ್ಥಿಕ ಸಹಾಯ ದೊರೆತಿದ್ದರಿಂದ ಪ್ರಾಥಮಿಕ ಶಾಲೆಯೊಂದು ಖಾಸಗಿ ಕಾನ್ವೆಂಟ್‌ಗೆ ಯಾವ ರೀತಿಯಲ್ಲೂ ಕಡಿಮೆ ಇಲ್ಲದಂತೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಇಲ್ಲಿ ‘ಪರಮಾ‌ಣು’ ಹೆಸರಿನ ವಿಜ್ಞಾನ ಪ್ರಯೋಗಾಲಯ, ಪ್ರೊಜೆಕ್ಟರ್, ಪ್ರಿಂಟರ್, ಕಂಪ್ಯೂಟರ್, 6ಸಾವಿರಕ್ಕೂ ಹೆಚ್ಚಿನ ಪುಸ್ತಕಗಳುಳ್ಳ ಗ್ರಂಥಾಲಯ ಸೌಲಭ್ಯ ಇವೆ. ಇಲ್ಲಿನ ಪ್ರಗತಿಯು ಇಲಾಖೆಯ ಅಧಿಕಾರಿಗಳ ಮೆಚ್ಚುಗೆಗೂ ಪಾತ್ರವಾಗಿದೆ’ ಎಂದು ಶಿಕ್ಷಕ ಬಸವರಾಜ ಸುಂಗಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ಸಾಲಿನಿಂದ ಪಠ್ಯಕ್ರಮ ಬದಲಾಗಿದೆ. ಚುಟವಟಿಕೆ ಆಧಾರಿತ ಬೋಧನೆ ಅತ್ಯಗತ್ಯವಾಗಿದೆ. ಇದಕ್ಕೆ ಪೂರಕವಾಗಿ ನಾವು ಪಾಠ ಮಾಡಬೇಕಾಗುತ್ತದೆ. ಇದಕ್ಕೆ ಇಲ್ಲಿರುವ ಪ್ರಯೋಗಾಲಯ ಮೊದಲಾದ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಸ್ಮಾರ್ಟ್‌ ತರಗತಿಗಳನ್ನು ನಡೆಸುವುದಕ್ಕೆ ಸಾಧ್ಯವಾಗಿದೆ’ ಎನ್ನುತ್ತಾರೆ ಅವರು.

ಕಲಿಕೆಗೆ ಅನುಕೂಲವಾಗುವಂತೆ:

ಇಲ್ಲಿ 1ರಿಂದ 8ನೇ ತರಗತಿಗಳಿದ್ದು, 300 ಮಕ್ಕಳು ಕಲಿಯುತ್ತಿದ್ದಾರೆ. ಮುಖ್ಯಶಿಕ್ಷಕಿ ಭಾರತಿ ಕುಡಬಾಳೆ ಸೇರಿದಂತೆ 9 ಮಂದಿ ಶಿಕ್ಷಕರಿದ್ದಾರೆ. ಬೆಳಗಾವಿಯ ಕುಲಗೋಡ ದಂಪತಿ ನೇತೃತ್ವದ ರಾಜಲಕ್ಷ್ಮಿ ಮಕ್ಕಳ ಪ್ರತಿಷ್ಠಾನದವರು ₹ 2 ಲಕ್ಷ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಕೊಠಡಿಯಲ್ಲಿ ಸೈನ್ಸ್ ಲ್ಯಾಬ್ ಸಿದ್ಧಪಡಿಸಲಾಗಿದೆ. ಪಂಚಾಯತ್‌ರಾಜ್‌ ಇಲಾಖೆಯಿಂದ ದೊರೆತ ₹ 1 ಲಕ್ಷ, ಮೂವರು ಹಳೆಯ ವಿದ್ಯಾರ್ಥಿಗಳು ತಲಾ ₹ 10ಸಾವಿರ ಆರ್ಥಿಕ ನೆರವು ಒದಗಿಸಿದ್ದಾರೆ. ಶಿಕ್ಷಕರು ಹಾಗೂ ಗ್ರಾಮದವರು ಕೈಗೂಡಿಸಿ ಒಟ್ಟು ₹ 3.40 ಲಕ್ಷ ವೆಚ್ಚದಲ್ಲಿ ಲ್ಯಾಬ್ ಸ್ಥಾಪಿಸಲಾಗಿದೆ.

ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ವಿಜ್ಞಾನದ ವಿಷಯಗಳನ್ನು ಕಲಿಸಲು ಬೇಕಾಗುವ, ಪ್ರಯೋಗಗಳನ್ನು ನಡೆಸಲು ಅಗತ್ಯವಾಗುವ ಕೆಮಿಕಲ್ಸ್, ಟೆಲಿಸ್ಕೋಪ್, ಸ್ಕೆಲಿಟನ್, ಒಮ್ಮೆಯೇ 15ರಿಂದ 20 ಮಕ್ಕಳು ವೀಕ್ಷಿಸಬಹುದಾದ ಪ್ರೊಜೆಕ್ಷನ್ ಮೈಕ್ರೋಸ್ಕೋಪ್, ಅಕ್ವೇರಿಯಂ ಮೊದಲಾದವುಗಳಿವೆ. ಪ್ರಖ್ಯಾತ 25 ಮಂದಿ ವಿಜ್ಞಾನಿಗಳ ಫೋಟೊಗಳನ್ನು ಅವರ ಅನ್ವೇಷಣೆಗೆ ವಿಷಯದ ಸಮೇತ ಗೋಡೆಯಲ್ಲಿ ಹಾಕಲಾಗಿದೆ.

‘ಸೈನ್ಸ್‌ ಲ್ಯಾಬ್ ನಿರ್ಮಿಸಬೇಕು ಎನ್ನುವುದು ಶಾಲೆಯ ಶಿಕ್ಷಕರು ತೆಗೆದುಕೊಂಡಿದ್ದ ಉಪಕ್ರಮ. ಆವರಣದಲ್ಲಿದ್ದ ಜಾಗದಲ್ಲಿ ನಾವು ₹ 2 ಲಕ್ಷ ವೆಚ್ಚದಲ್ಲಿ ಕೊಠಡಿ ಕಟ್ಟಿಸಿಕೊಟ್ಟಿದ್ದೇವೆ. ಸರ್ಕಾರಿ ಶಾಲೆಗಳು ಉಳಿಯಬೇಕು; ಇದಕ್ಕಾಗಿ ಅತ್ಯಾಧುನಿಕ ವ್ಯವಸ್ಥೆಗಳು ಇರಬೇಕಾಗುತ್ತದೆ. ಹೀಗಾಗಿ, ನಾವು ಸಹಕಾರ ನೀಡುತ್ತಿದ್ದೇವೆ’ ಎಂದು ರಾಜಲಕ್ಷ್ಮಿ ಮಕ್ಕಳ ಪ್ರತಿಷ್ಠಾನದ ಡಾ.ಶಶಿಕಾಂತ ಕುಲಗೋಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT