ಮಂಗಳವಾರ, ಫೆಬ್ರವರಿ 25, 2020
19 °C
ಖಾನಾಪುರದಲ್ಲಿ ದುಃಸ್ಥಿತಿ: ಪರ್ಯಾಯ ವ್ಯವಸ್ಥೆಗೆ ಜನರ ಆಗ್ರಹ

ಆಧಾರ್‌ ತಿದ್ದುಪಡಿ: ರಾತ್ರಿಯಿಡೀ ಬೀದಿಯಲ್ಲಿ ಕಾಯಬೇಕು!

ಪ್ರಸನ್ನ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಖಾನಾಪುರ: ಪಟ್ಟಣದ ಕೆ.ವಿ.ಜಿ ಬ್ಯಾಂಕ್ ಶಾಖೆಯಲ್ಲಿ ತೆರೆದಿರುವ ಆಧಾರ್ ನೋಂದಣಿ ಕೇಂದ್ರದಲ್ಲಿ ಆಧಾರ್ ಕಾರ್ಡ್‌ನ ತಿದ್ದುಪಡಿ ಮಾಡಲು ಬಯಸುವವರಿಗೆ ಸಮಯ ಮತ್ತು ಸಂಖ್ಯೆಯ ಇತಿಮಿತಿ ಹೇರಲಾಗಿದೆ. ಹೀಗಾಗಿ, ಕೇಂದ್ರಕ್ಕೆ ಬರುವ ನಾಗರಿಕರು ಮೈ ಕೊರೆಯುವ ಚಳಿಯಲ್ಲೇ ರಾತ್ರಿಯಿಡೀ ಬೀದಿಯಲ್ಲಿ ಕಾಯುವ ದುಃಸ್ಥಿತಿ ಎದುರಾಗಿದೆ.

ಈಗಾಗಲೇ ಹೊಂದಿರುವ ಆಧಾರ್ ಕಾರ್ಡಿನಲ್ಲಿ ಹೆಸರು, ಅಡ್ಡ ಹೆಸರು, ಜನ್ಮದಿನಾಂಕ, ವಯಸ್ಸು, ಲಿಂಗ, ವಿಳಾಸ ಮತ್ತಿತರ ಅಗತ್ಯ ವಿವರಗಳ ತಿದ್ದುಪಡಿಗಾಗಿ ಆಧಾರ್ ಕೇಂದ್ರದಲ್ಲಿ ದಿನದಿಂದ ದಿನಕ್ಕೆ ದಟ್ಟಣೆ ಹೆಚ್ಚಾಗಿತ್ತು. ಬೆಳಿಗ್ಗೆ 10ಕ್ಕೆ ತೆರೆಯುವ ಆಧಾರ್ ಕೇಂದ್ರದಲ್ಲಿ ತಮ್ಮ ಕಾರ್ಡ್‌ನಲ್ಲಿ ತಿದ್ದುಪಡಿ ಬಯಸುವವರು ಹಿಂದಿನ ದಿನ ಸಂಜೆಯೇ ಪಟ್ಟಣಕ್ಕೆ ಬಂದು, ರಾತ್ರಿಯಿಡೀ ಸರದಿಯಲ್ಲಿ ಬೀದಿಯಲ್ಲಿ ಮಲಗಿ ಕಾಯುವ ದೃಶ್ಯಗಳು ಕಂಡುಬರುತ್ತಿವೆ.

ಚಿಕ್ಕ ಮಕ್ಕಳು, ಮಹಿಳೆಯರು, ಅದರಲ್ಲೂ ಗರ್ಭಿಣಿ, ಬಾಣಂತಿಯರು ಮತ್ತು ವಯಸ್ಸಾದವರಿಗೆ ಇದರಿಂದ ತೊಂದರೆಯಾಗುತ್ತಿದೆ. ಆಧಾರ್ ತಿದ್ದುಪಡಿಗಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ನಾಗರಿಕರ ಆಗ್ರಹವಾಗಿದೆ.

ಆಧಾರ್ ಕೇಂದ್ರದ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ತಾಲ್ಲೂಕಿನ ತೋಪಿನಕಟ್ಟಿ ಗ್ರಾಮದ ಪಾಂಡುರಂಗ ಚಿಕದಿನಕೊಪ್ಪ, 6 ವರ್ಷದ ಪುತ್ರಿಯ ಜೊತೆ ಮಂಗಳವಾರ ರಾತ್ರಿಯೇ ಪಟ್ಟಣಕ್ಕೆ ಬಂದಿದ್ದಾಗಿ ಹಾಗೂ ಕೆ.ವಿ.ಜಿ. ಬ್ಯಾಂಕ್ ಮುಂದೆಯೇ ಕಾದಿರುವುದಾಗಿ ತಿಳಿಸಿದರು. ಶಾಲೆಯಲ್ಲಿ ವಿದ್ಯಾರ್ಥಿ ವೇತನ ಮತ್ತು ಇತರ ಸೌಲಭ್ಯಗಳಿಗಾಗಿ ತಮ್ಮ ಪುತ್ರಿಯ ಆಧಾರ್ ತಿದ್ದುಪಡಿ ಮಾಡಿಸಿಕೊಂಡು ಬರುವಂತೆ ಶಿಕ್ಷಕರು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಬುಧವಾರ ಮುಂಜಾನೆ ತೆರೆಯುವ ಆಧಾರ್ ಕೇಂದ್ರದ ಬಾಗಿಲಲ್ಲೇ ತಮ್ಮ ಪುತ್ರಿಯ ಜೊತೆ ರಾತ್ರಿಯಿಡೀ ಕಳೆಯುತ್ತಿರುವುದಾಗಿ ಹೇಳಿದರು.

ಕಾರ್ಡ್‌ ತಿದ್ದುಪಡಿಗಾಗಿ ಈಗಾಗಲೇ ತಾವು ಮೂರ್ನಾಲ್ಕು ಸಲ ಬಂದಿದ್ದರೂ ತಮ್ಮ ಸರತಿ ಬಾರದಿದ್ದರಿಂದ ನಿರಾಶರಾಗಿ ಮರಳಿರುವುದಾಗಿ ಅವರು ಅಳಲು ತೋಡಿಕೊಂಡರು. ಇದೇ ರೀತಿ ತಾಲ್ಲೂಕಿನ ವಿವಿಧೆಡೆಯಿಂದ ಬಂದಿದ್ದ ಹಲವರಿಗೆ ಅನುಭವಗಳಾಗಿವೆ. ಹೀಗಾಗಿ ಅವರು  ರಾತ್ರಿಯೇ ಬಂದು ಪಾಳಿ ಹಚ್ಚುತ್ತಿದ್ದಾರೆ!

‘ಬ್ಯಾಂಕ್ ಖಾತೆ, ಮೊಬೈಲ್ ಸಿಮ್ ಖರೀದಿ ಹಾಗೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿರುವ ಕಾರಣ ಆಧಾರ್ ನೋಂದಣಿಗೆ ಬರುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಪಟ್ಟಣದಲ್ಲಿ ಇರುವ ಏಕೈಕ ಕೇಂದ್ರದಲ್ಲಿ ಜನದಟ್ಟಣೆ ಹೆಚ್ಚುತ್ತಿದೆ. ಕೂಡಲೇ ಪಟ್ಟಣದಲ್ಲಿ ಮತ್ತು ತಾಲ್ಲೂಕಿನ ಪ್ರಮುಖ ಗ್ರಾಮಗಳಲ್ಲಿ ಹೆಚ್ಚುವರಿ ಕೇಂದ್ರಗಳನ್ನು ಪ್ರಾರಂಭಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಜಿಲ್ಲಾಡಳಿತವನ್ನು ಚೇತನ ಲಕ್ಕೇಬೈಲಕರ ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಿವಾನಂದ ಉಳ್ಳೇಗಡ್ಡಿ, ‘ಆಧಾರ್ ತಿದ್ದುಪಡಿಗೆ ಬರುವವರಿಗೆ ಪಟ್ಟಣ ಪಂಚಾಯ್ತಿ ಸಮುದಾಯ ಭವನದಲ್ಲಿ ರಾತ್ರಿ ತಂಗಲು ವ್ಯವಸ್ಥೆ ಮಾಡಲಾಗುವುದು. ದೂರದ ಊರುಗಳಿಂದ ಬಂದವರಿಗೆ ಮತ್ತು ಚಿಕ್ಕಮಕ್ಕಳು, ಗರ್ಭಿಣಿ, ಬಾಣಂತಿಯರು ಮತ್ತು ವಯಸ್ಸಾದವರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಆಧಾರ್ ತಿದ್ದುಪಡಿ ಕೇಂದ್ರದವರಿಗೆ ಸೂಚಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು