ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ದಿನಗಳ ಅಂತರದಲ್ಲಿ ದೂರಾದ ‘ಆಸರೆ’

ತಂದೆ, ತಾಯಿ, ಚಿಕ್ಕಪ್ಪ, ಅಜ್ಜಿ ಸಾವಿನಿಂದ ನೋವು
Last Updated 9 ಜುಲೈ 2021, 19:30 IST
ಅಕ್ಷರ ಗಾತ್ರ

ಖಾನಾಪುರ (ಬೆಳಗಾವಿ ಜಿಲ್ಲೆ): ಕೋವಿಡ್‌–19ನಿಂದಾಗಿ ತಂದೆ-ತಾಯಿ, ಚಿಕ್ಕಪ್ಪ ಮತ್ತು ಅಜ್ಜಿಯನ್ನು ಕಳೆದುಕೊಂಡ ತಾಲ್ಲೂಕಿನಗೋಟಗಾಳಿ ಗ್ರಾಮದ ಮಕ್ಕಳಿಬ್ಬರ ಭವಿಷ್ಯ ಅತಂತ್ರವಾಗಿದೆ.

ಶುಭಂ ಸಂಜಯ ಕರಲೇಕರ (17) ಮತ್ತು ಸಂಜನಾ ಸಂಜಯ ಕರಲೇಕರ (15) ಎಂಬ ಮಕ್ಕಳ ಆಸರೆಯನ್ನು ಕೊರೊನಾ ಕಸಿದುಕೊಂಡಿದೆ.

ಮೇನಲ್ಲಿ ಸೊಂಕಿನಿಂದಾಗಿ ಶುಭಂ ಮತ್ತು ಸಂಜನಾರ ತಂದೆ ಸಂಜಯ, ತಾಯಿ ಶೀತಲ, ಅಜ್ಜಿ ಶಾಂತಾಬಾಯಿ ಮತ್ತು ಚಿಕ್ಕಪ್ಪ ಅನಿಲ ಮೃತರಾದರು. ಸಂಜಯ ಕೃಷಿ ಕೂಲಿ ಮತ್ತು ಟ್ರ್ಯಾಕ್ಟರ್‌ ಚಾಲನೆ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಸಂಜಯ ಅವರ ತಂದೆ ವೆಂಕಪ್ಪ ಬಹಳ ವರ್ಷಗಳ ಹಿಂದೆಯೇ ಅನಾರೋಗ್ಯದಿಂದ ನಿಧನರಾಗಿದ್ದರು. ಒಟ್ಟು 9 ಸದಸ್ಯರ ಕುಟುಂಬದಲ್ಲಿ ನಾಲ್ವರು ಪ್ರಮುಖರು ತೀರಿಕೊಂಡಿದ್ದಾರೆ.

ಸದ್ಯ ಈ ಕುಟುಂಬದಲ್ಲಿ ಸಂಜಯ ಮತ್ತು ಅನಿಲ ಅವರ ತಲಾ ಇಬ್ಬರು ಮಕ್ಕಳು ಮತ್ತು ಅನಿಲ ಅವರ ಪತ್ನಿ ಮಾತ್ರ ಇದ್ದಾರೆ. ಕರಲೇಕರ ಕುಟುಂಬದ ಒಟ್ಟು ನಾಲ್ವರು 20 ದಿನಗಳ ಅಂತರದಲ್ಲಿ ಅಗಲಿದ್ದರಿಂದಾಗಿ ಉಳಿದವರು ತೊಂದರೆಗೆ ಸಿಲುಕಿದ್ದಾರೆ. ಶುಭಂ ಐಟಿಐ ಮೊದಲ ವರ್ಷದಲ್ಲಿದ್ದರೆ, ಸಂಜನಾ 7ನೇ ತರಗತಿ ಓದುತ್ತಿದ್ದಾರೆ. ಚಿಕ್ಕಮ್ಮನೇ ಈಗ ಅವರಿಗೆ ಆಸರೆಯಾಗಿದ್ದಾರೆ.

ಈ ಕುಟುಂಬವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಭೇಟಿಯಾಗಿ ಈಚೆಗೆ ಸಾಂತ್ವನ ಹೇಳಿದ್ದಾರೆ.

‘ಜೂನ್‌ 23ರಂದು ರಾತ್ರಿ ಸಚಿವರು ನಮ್ಮ ಮನೆಗೇ ಬಂದು ವಿಚಾರಿಸಿದರು. ಪಡಸಾಲೆಯಲ್ಲಿ ಕುಳಿತು ನಮ್ಮನ್ನು ಮಾತನಾಡಿಸಿ ನಮ್ಮ ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡರು. ಪರಿಸ್ಥಿತಿಯನ್ನು ವೀಕ್ಷಿಸಿದರು. ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಏನಾದರೂ ಸಮಸ್ಯೆ ಇದ್ದರೆ ಕರೆ ಮಾಡಿ ತಿಳಿಸುವಂತೆ ಹೇಳಿ ಮೊಬೈಲ್ ಫೋನ್‌ ಸಂಖ್ಯೆ ನೀಡಿ ಹೋದರು. ಅಧಿಕಾರಿಗಳೂ ಮಾಹಿತಿ ಪಡೆದು ಹೋಗಿದ್ದಾರೆ. ಸರ್ಕಾರದಿಂದ ಶೀಘ್ರವೇ ಸಹಾಯ ಸಿಗಲಿದೆ ಎಂದಿದ್ದಾರೆ. ಈ ಹಣದಲ್ಲಿ ಶಿಕ್ಷಣ ಮುಂದುವರಿಸುತ್ತೇವೆ’ ಎಂದು ಶುಭಂ ಮತ್ತು ಸಂಜನಾ ತಿಳಿಸಿದರು.

‘ಅನಾಥ ಮಕ್ಕಳ ಸಮಸ್ಯೆ ಅರಿತ ಸಚಿವರು ನೆರವಿಗೆ ದಾವಿಸಿದ್ದಾರೆ. ಸರ್ಕಾರದಿಂದ ಆರ್ಥಿಕ ಸಹಾಯ ಸಿಕ್ಕರೆ ಆ ಕುಟುಂಬಕ್ಕೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಚಿವರು ಪ್ರಯತ್ನಿಸುತ್ತಿದ್ದಾರೆ’ ಎನ್ನುತ್ತಾರೆ ಬಿಜೆಪಿ ಮುಖಂಡ ವಿಠ್ಠಲ ಹಲಗೇಕರ.

ಇಲಾಖೆಯ ಉಪ ನಿರ್ದೇಶಕ ಬಸವರಾಜ ವರವಟ್ಟಿ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ರವೀಂದ್ರ ರತ್ನಾಕರ, ಜಿಲ್ಲಾ ನಿರೂಪಣಾಧಿಕಾರಿ ನವೀನಕುಮಾರ ಹಾಗೂ ಇತರರು ಕೂಡ ಸಚಿವರೊಂದಿಗೆ ಬಂದಿದ್ದರು. ಮಕ್ಕಳ ಶಿಕ್ಷಣಕ್ಕಾಗಿ ಮಾಸಿಕ ₹ 3,500, ಉನ್ನತ ಶಿಕ್ಷಣಕ್ಕೆ ಅನುಕೂಲ, ಉಚಿತ ಲ್ಯಾಪ್‌ಟಾಪ್ ನೀಡುವುದು, ಇವರಿಬ್ಬರ ಯೋಗ ಕ್ಷೇಮ ನೋಡಿಕೊಳ್ಳುವ ಸಂಬಂಧಿಕರಿಗೆ ಮಾಸಾಶನ ಸೇರಿದಂತೆ ವಿವಿಧ ಸಹಾಯಗಳನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT