ಸೋಮವಾರ, ಜೂನ್ 21, 2021
29 °C

ಗೋಕಾಕ: ಕೋವಿಡ್‌ ಸೋಂಕಿತರ ಮನೆಗೇ ತೆರಳಿ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ (ಬೆಳಗಾವಿ): ಇಲ್ಲಿನ ಸರ್ಕಾರಿ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ವೈದ್ಯ ಡಾ.ಜಗದೀಶ ಜಿಂಗಿ ಅವರು ಕೋವಿಡ್ ಸೋಂಕಿತರ ಮನೆಗಳಿಗೇ ತೆರಳಿ ಚಿಕಿತ್ಸೆ, ಸಲಹೆ ನೀಡಿ ಗಮನಸೆಳೆದಿದ್ದಾರೆ.

‘ರೋಗಿಯೇ ದೇವರು ಎಂದು ಭಾವಿಸಿ ಸುಶ್ರೂಷೆಯಲ್ಲಿ ತೊಡಗುವುದು ವೈದ್ಯಕೀಯ ವೃತ್ತಿ ಧರ್ಮ. ಅದನ್ನೇ ನೆಚ್ಚಿಕೊಂಡು ರೋಗಿಗಳ ಸೇವೆ ಮಾಡುವುದು ನನ್ನ ಮುಖ್ಯ ಧ್ಯೇಯವಾಗಿದೆ’ ಎನ್ನುತ್ತಾರೆ.

‘ವಿದೇಶಗಳಲ್ಲಿ ವೈದ್ಯರು ರೋಗಿಗಳ ಮನೆ ಮನೆಗೆ ತೆರಳಿ ಸೇವೆ ಮಾಡುತ್ತಾರೆ. ಅದೇ ತತ್ವ ಅಳವಡಿಸಿಕೊಂಡು ರೋಗಿಗಳ ಸೇವೆಗೆ ನನ್ನೊಂದಿಗೆ ಆರೋಗ್ಯ ಇಲಾಖೆಯ ಹಲವು ಆಸಕ್ತರನ್ನು ಜೊತೆಗೂಡಿಸಿಕೊಂಡು, ಸರ್ಕಾರಿ ಆಸ್ಪತ್ರೆಯ ಕೆಲಸ ಮುಗಿದ ನಂತರ ರೋಗಿಗಳ ಮನೆಗಳಿಗೆ ಭೇಟಿ ಕೊಟ್ಟು ಚಿಕಿತ್ಸೆ ಒದಗಿಸುತ್ತಿದ್ದೇನೆ’ ಎಂದು ಮಾಹಿತಿ ನೀಡಿದರು.

‘ಕೋವಿಡ್ ಬಾಧಿತರು ಚಿಕಿತ್ಸೆಗೆ ಸರ್ಕಾರಿ ಇಲ್ಲವೇ ಖಾಸಗಿ ಆಸ್ಪತ್ರೆಗಳತ್ತ ಬರುತ್ತಾರೆ. ಆದರೆ, ಕೆಲವರು ಅಂಗವೈಕಲ್ಯ ಅಥವಾ ವಯೋಮಾನ ಮತ್ತಿತರ ಕಾರಣಗಳಿಂದ ಮನೆಯಿಂದ ಹೊರ ಹೋಗುವ ಸ್ಥಿತಿಯಲ್ಲಿ ಇರುವುದಿಲ್ಲ. ಅಂತಹ ಸೋಂಕಿತರ ಮಾಹಿತಿ ಕಲೆ ಹಾಕಿ ಅವರಿರುವ ಮನೆಗಳಿಗೆ ನಾನು ತಂಡದೊಂದಿಗೆ ತೆರಳುವ ಪರಿಪಾಠ ಮಾಡಿಕೊಂಡಿದ್ದೇನೆ. ಈ ಕೆಲಸಕ್ಕೆ ಇಲಾಖೆಯಿಂದ ಬೆಂಬಲವೂ ಇದೆ. ಹೀಗೆ ನೀಡಲಾದ ಚಿಕಿತ್ಸೆಯ ಮಾಹಿತಿಯನ್ನು ಇಲಾಖೆಯ ಮುಖ್ಯಸ್ಥರಿಗೂ ನೀಡಲಾಗುತ್ತಿದೆ. ಇದರಿಂದ ಆಸ್ಪತ್ರೆಯ ಮೇಲಿನ ಅವಲಂಬನೆಯನ್ನು ಸ್ವಲ್ಪ ಮಟ್ಟಿಗಾದರೂ ತಪ್ಪಿಸಿದ ನೆಮ್ಮದಿ ನಮ್ಮ ತಂಡಕ್ಕಿದೆ’ ಎನ್ನುತ್ತಾರೆ ಅವರು.

‘ತುರ್ತು ಕರೆ ಬಂದಲ್ಲಿ ನಮ್ಮ ತಂಡದವರು ಅಲ್ಲಿಗೆ ತೆರಳುತ್ತಾರೆ. ಅತ್ಯವಶ್ಯವಿದ್ದರೆ ನಾನೂ ತೆರಳಿ ಚಿಕಿತ್ಸೆ ನೀಡುತ್ತೇನೆ’ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು