ಬುಧವಾರ, ಆಗಸ್ಟ್ 17, 2022
23 °C

ಸರ್ಕಾರಿ ಶಾಲೆಗೆ ‘ಪಾಸಿಟಿವ್’ ನೋಟ: ಲಾಕ್‌ಡೌನ್‌ ಸದ್ಬಳಕೆ ಮಾಡಿಕೊಂಡ ವೀರಣ್ಣ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬೇಸಿಗೆ ರಜೆಯಲ್ಲಿ, ಅದರಲ್ಲೂ ಕೋವಿಡ್ ಲಾಕ್‌ಡೌನ್‌ನಂತಹ ಕಾಲದಲ್ಲಿ ಸರ್ಕಾರಿ ಶಾಲೆಗಳ ನಿರ್ವಹಣೆಗೆ ಗಮನಹರಿಸುವವರು ಕಡಿಮೆ. ಆದರೆ, ಇಲ್ಲೊಬ್ಬ ಶಿಕ್ಷಕರು ಈ ‘ಅವಧಿ’ ಸದ್ಬಳಕೆ ಮಾಡಿಕೊಂಡು ತಮ್ಮ ಶಾಲೆ ಮತ್ತಷ್ಟು ಕಂಗೊಳಿಸುವಂತೆ ಮಾಡಿದ್ದಾರೆ.

ಕವಿಯೂ ಆಗಿರುವ ಮುಖ್ಯಶಿಕ್ಷಕ ವೀರಣ್ಣ ಮಡಿವಾಳರ ತಮ್ಮ ಬಹುತೇಕ ಸಮಯವನ್ನು ಕಟ್ಟಡ ಅಂದಗಾಣಿಸುವ ಕೆಲಸಕ್ಕೆ ಬಳಸಿ ಗಮನಸೆಳೆದಿದ್ದಾರೆ.

ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ರಾಯಬಾಗ ತಾಲ್ಲೂಕು ನಿಡಗುಂಡಿಯ ಅಂಬೇಡ್ಕರ್‌ ನಗರದ ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲವು ಮಹತ್ವದ ಮತ್ತು ಗುಣಾತ್ಮಕ ಕೆಲಸಗಳು ನಡೆದಿವೆ.


ಮುಖ್ಯ ಶಿಕ್ಷಕ ಶಾಲೆಯ ಕಿಟಕಿಗೆ ಬಣ್ಣ ಹಚ್ಚಿದರು

ಬಹು ಭಾಷಾ ಪ್ರಯೋಗಾಲಯ: ಸುಧಾರಿತ ಹಾಗೂ ಆಕರ್ಷಕಗೊಂಡಿರುವ ಶಾಲೆಯು ಮಕ್ಕಳ ಬರುವಿಕೆಗಾಗಿ ಕಾಯುತ್ತಿದೆ. ತಮ್ಮ ವಿದ್ಯಾದೇಗುಲ ನೋಡುತ್ತಿರುವ ಗ್ರಾಮದ ಚಿಣ್ಣರು ಕೂಡ ಭೌತಿಕ ತರಗತಿಗಳನ್ನು ಆರಂಭವಾಗುವ ದಿನಗಳಿಗಾಗಿ ಕಾತರದಿಂದ ಇದ್ದಾರೆ. ಅಷ್ಟರ ಮಟ್ಟಿಗೆ ಕಟ್ಟಡವು ಸೌಂದರ್ಯ ಹೆಚ್ಚಿಸಿಕೊಂಡಿದೆ. ಹಿಂದುಳಿದ ಗ್ರಾಮವೊಂದರ ಕನ್ನಡ ಸರ್ಕಾರಿ ಶಾಲೆಯಲ್ಲಿ ಬಹು ಭಾಷಾ ಪ್ರಯೋಗಾಲಯ ನಿರ್ಮಿಸಿರುವುದು ಮತ್ತೊಂದು ವಿಶೇಷ.

‘ಕೋವಿಡ್ ಸಂದರ್ಭದಲ್ಲಿ ಶಾಲೆಗಾಗಿ ಹತ್ತು ಗುಂಟೆ ಜಾಗವನ್ನು ಕ್ರೌಡ್ ಫಂಡಿಂಗ್ ಮೂಲಕ ಖರೀದಿಸಿದೆವು. ಈ ಜಾಗದಲ್ಲಿ ಶಿವರಾಮ ಕಾರಂತರ ಹೆಸರಿನಲ್ಲಿ ಸುಸಜ್ಜಿತವಾದ ಬಹು ಭಾಷಾ ಪ್ರಯೋಗಾಲಯ ನಿರ್ಮಾಣ ಮಾಡಿದ್ದೇವೆ. ಹಳೆಯ ಶಾಲಾ ತರಗತಿ ಕೋಣೆಗಳಿಗೆ ಆಧುನಿಕ ಸ್ಪರ್ಶ ನೀಡಿ, ಬಣ್ಣ ಬಳಿದು ಹಾಗೂ ಚಿತ್ರಗಳನ್ನು ಬಿಡಿಸಿ ಉತ್ತಮಗೊಳಿಸಿದ್ದೇವೆ. ಹಾಳಾಗಿದ್ದ ವರಾಂಡಕ್ಕೆ ಟೈಲ್ಸ್‌ ಜೋಡಿಸಿ ಮಕ್ಕಳ ಸ್ನೇಹಿಯಾಗಿ ಮಾಡಿದ್ದೇವೆ. ವಿದ್ಯುತ್ ಸಂಪರ್ಕ ವ್ಯವಸ್ಥೆ ಪೂರ್ಣ ದುರಸ್ತಿ ಮಾಡಿಸಿ ಸುಧಾರಿಸಿದ್ದೇವೆ’ ಎನ್ನುತ್ತಾರೆ ವೀರಣ್ಣ.

ಸದುದ್ದೇಶಕ್ಕೆ ವಿನಿಯೋಗ: ‘ಈ ಪ್ರಯೋಗಾಲಯ ಕಟ್ಟಡಕ್ಕೆ ಇದುವರೆಗೆ ₹15 ಲಕ್ಷ ವೆಚ್ಚವಾಗಿದೆ. ನಿರ್ಮಿಸಿಕೊಟ್ಟ ಬೆಂಗಳೂರಿನ ರಾಮ್‌ಮೋಹನ್ ಮಹಾದಾನಿ ಎನ್ನಬಹುದು. ಅಂಥವರ ಕಥೆಗಳು, ಪ್ರೀತಿ ಬಹಳಷ್ಟು ಜನರಿಗೆ ಪ್ರೇರಣೆ ಹುಟ್ಟಿಸಬಲ್ಲವು. ಅವರು ತಮ್ಮ ಲಾಭದ ಅರ್ಧದಷ್ಟು ಹಣವನ್ನು ಶೈಕ್ಷಣಿಕ ಕಾಳಜಿಗಳಿಗೆ ವಿನಿಯೋಗಿಸುತ್ತಾರೆ. ಅವರಂತೆ ಬಹಳಷ್ಟು ದಾನಿಗಳು ನಮ್ಮ ಶಾಲೆಗಾಗಿ ನೆರವಾಗುತ್ತಿದ್ದಾರೆ’ ಎಂದು ನೆನೆದರು.

‘ಶಾಲೆಗೆ ನೂತನ ರೂಪ ಕೊಡಲು ಮೂವರು ಶಿಕ್ಷಕಿಯರೂ ಸಹಕಾರ ನೀಡಿದ್ದಾರೆ. ಪ್ರಯೋಗಾಲಯಕ್ಕಾಗಿ 20 ಕಂಪ್ಯೂಟರ್‌ ಟೇಬಲ್‌ಗಳನ್ನು ಕೂಡ ತಂದಿದ್ದೇವೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸ್ಥಳೀಯ ಹಿರಿಯರಾದ ಶಿವರಾಯಿ ಸಿದ್ರಾಮ ಕರಿಗಾರ ಹಿಂದೆ ಶಾಲೆಗೆ 10 ಗುಂಟೆ ಜಾಗವನ್ನು ದಾನವಾಗಿ ಕೊಟ್ಟಿದ್ದರು. ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾದ್ದರಿಂದ ಹತ್ತು ಗುಂಟೆ ಜಾಗ ನಮಗೆ ಅಗತ್ಯವಿತ್ತು. ಊರಿನ ಹಿರಿಯರೆಲ್ಲರೂ ಸೇರಿ ಖರೀದಿಗೆ ಕೊಡಲು ಒಪ್ಪಿಸಿದರು. 10 ಗುಂಟೆ ಜಾಗಕ್ಕೆ ₹ 3.75 ಲಕ್ಷ ಕೊಟ್ಟು ಖರೀದಿಸಿದ್ದೇವೆ. ದಾನಿಗಳಿಂದ ಸಂಗ್ರಹಿಸಿದ ಹಣವನ್ನು ಇದಕ್ಕೆ ವಿನಿಯೋಗಿಸಲಾಗಿದೆ’ ಎಂದು ತಿಳಿಸಿದರು.


ವೀರಣ್ಣ ಮಡಿವಾಳರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು