ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಿಒಗಳ ವಿರುದ್ಧ ತಾ.ಪಂ. ಸದಸ್ಯರ ಆಕ್ರೋಶ

ಪಂಚಾಯಿತಿಗಳಲ್ಲಿ ಕಾಮಗಾರಿ ಗಮನಕ್ಕೆ ತರಲು ಸೂಚನೆ
Last Updated 12 ನವೆಂಬರ್ 2020, 16:07 IST
ಅಕ್ಷರ ಗಾತ್ರ

ಬೆಳಗಾವಿ: ‘ಅಧಿಕಾರದ ಅವಧಿ ಪೂರ್ಣಗೊಂಡ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಕಾಮಗಾರಿ ತೆಗೆದುಕೊಳ್ಳುವ ಮುನ್ನ ತಾಲ್ಲೂಕು ಪಂಚಾಯಿತಿ ಸದಸ್ಯರ ಗಮನಕ್ಕೆ ತರಬೇಕು’ ಎಂದು ಅಧ್ಯಕ್ಷ ಶಂಕರಗೌಡ ಪಾಟೀಲ ಸೂಚಿಸಿದರು.

ಇಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸದಸ್ಯರಿಲ್ಲದಿರುವುದರಿಂದ ಪಿಡಿಒಗಳು ತಮಗೆ ಬೇಕಾದ ರೀತಿಯಲ್ಲಿ ಲಂಚ ಪಡೆದುಕೊಂಡು ವಸತಿ ಮನೆಗಳು, ಪ್ರವಾಹ ಹಾನಿಯಾಗಿರುವ ಮನೆಗಳ ಪಟ್ಟಿ ಸಿದ್ಧಪಡಿಸುತ್ತಿರುವುದು ಗಮನಕ್ಕೆ ಬಂದಿದೆ. ಹೇಳುವವರು, ಕೇಳುವವರು ಯಾರೂ ಇಲ್ಲವೆಂದು ಭಾವಿಸಿದಂತಿದೆ. ಹೀಗಾಗಿ, ಪಿಡಿಒಗಳು ತಾಲ್ಲೂಕು ಪಂಚಾಯಿತಿ ಸದಸ್ಯರ ಸಲಹೆ–ಸೂಚನೆ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಇಒ ಗಮನಹರಿಸಬೇಕು’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಯಲ್ಲಪ್ಪ ಕೋಳೆಕರ, ‘ಪ್ರತಿ ಪಂಚಾಯಿತಿಗೆ ₹ 70-80 ಲಕ್ಷ ಅನುದಾನ ಬಿಡುಗಡೆಯಾಗುತ್ತಿದೆ. ಇದರಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರ ಗಮನಕ್ಕೆ ತಾರದೆ ಕಾಮಗಾರಿ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಸದಸ್ಯರ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಕಳಪೆ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಪ್ರಶ್ನಿಸಿದರೆ, ಅದೇನು ಮಾಡಿಕೊಳ್ಳುತ್ತಿರೋ ಮಾಡಿಕೊಳ್ಳಿ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ದೂರಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಸುನೀಲ ಅಷ್ಟೇಕರ, ‘ಸುಳೇಬಾವಿ ಗ್ರಾಮದೇವತೆ ದೇವಸ್ಥಾನ ಸಂಪರ್ಕ ರಸ್ತೆ ಸುಧಾರಣೆ ಮಾಡುವಂತೆ ಅನೇಕ ಬಾರಿ ಪಿಡಿಒಗೆ ತಿಳಿಸಿದ್ದೇನೆ. ಆದರೂ ಕೆಲಸ ಆಗಿಲ್ಲ. ತಾ.ಪಂ. ಒ ಮತ್ತು ಆಡಳಿತಾಧಿಕಾರಿಗೆ ಹೇಳಿದರೂ ಸ್ಪಂದಿಸಿಲ್ಲ. ಇನ್ನೆರಡು ದಿನದಲ್ಲಿ ರಸ್ತೆ ಸುಧಾರಣೆ ಆಗದಿದ್ದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಗ್ರಾಮಸ್ಥರೆಲ್ಲರೂ ಸೇರಿ ಕಟ್ಟಿ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಉಪಾಧ್ಯಕ್ಷ ಮಾರುತಿ ಸನದಿ, ಇಒ ಮಲ್ಲಿಕಾರ್ಜುನ ಕಲಾದಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT