ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ನೌಕರರ ವಿರುದ್ಧ ಕ್ರಮಕ್ಕೆ ಮುಂದಾದ ಸಂಸ್ಥೆ

ಮುಂದುವರಿದ ಮುಷ್ಕರ; ಪ್ರಯಾಣಿಕರ ಪರದಾಟ
Last Updated 8 ಏಪ್ರಿಲ್ 2021, 14:06 IST
ಅಕ್ಷರ ಗಾತ್ರ

ಬೆಳಗಾವಿ: ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 2ನೇ ದಿನವಾದ ಗುರುವಾರವೂ ಮುಂದುವರಿಯಿತು. ಅವರು ಕೆಲಸದಿಂದ ದೂರ ಉಳಿದಿದ್ದರಿಂದ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿಯಲಿಲ್ಲ. ಪರಿಣಾಮ, ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.

ಇಲ್ಲಿನ ಕೇಂದ್ರ ಹಾಗೂ ನಗರ ಬಸ್ ನಿಲ್ದಾಣದಿಂದ ಕೆಲವು ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಅವು ಹುಬ್ಬಳ್ಳಿ, ಸಂಕೇಶ್ವರ, ಬೈಲಹೊಂಗಲ, ಗೋವಾ ಮಾರ್ಗಗಳಲ್ಲಿ ಸಂಚರಿಸಿದವು. ಮುಷ್ಕರದ ಮಾಹಿತಿ ಇದ್ದಿದ್ದರಿಂದ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆಯೂ ಗಣನೀಯವಾಗಿ ಕಡಿಮೆ ಆಗಿತ್ತು. ತುರ್ತು ಕೆಲಸಗಳಿಗೆ ಪರಊರಿಗೆ ಹೋಗಬೇಕಾದವರು ಪರ್ಯಾಯ ವ್ಯವಸ್ಥೆಯ ಮೊರೆ ಹೋದರು.

ಈ ನಡುವೆ, ನೌಕರರು ಕೆಲಸಕ್ಕೆ ಹಾಜರಾಗುವಂತೆ ಮಾಡಲು ಅಧಿಕಾರಿಗಳು ನಡೆಸಿದ ಪ್ರಯತ್ನ ಫಲ ನೀಡಲಿಲ್ಲ.

ನೋಟಿಸ್ ಬಿಸಿ:

ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸುತ್ತಿರುವ ನೌಕರರಿಗೆ ನೋಟಿಸ್‌ ಬಿಸಿ ತಟ್ಟಿದೆ. ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿ ಇಲಾಖೆಯ ವಸತಿ ಸಮುಚ್ಛಯದಲ್ಲಿ ಹಂಚಿಕೆಯಾಗಿರುವ ಮನೆ ತೆರವುಗೊಳಿಸುವಂತೆ ನೋಟಿಸ್‌ ಜಾರಿಗೊಳಿಸಲಾಗಿದೆ. ಇಲಾಖೆಯ ಭದ್ರತಾ ಸಿಬ್ಬಂದಿ ಖುದ್ದು ನೌಕರರ ಮನೆಗೆ ಹೋಗಿ ನೀಡಿದರು.

‘ಸಾರಿಗೆ ಸಂಸ್ಥೆಯ ಸೇವೆ ಅವಶ್ಯ ಆಗಿರುವುದರಿಂದ ನೀವು ತುರ್ತು ಸಂದರ್ಭದಲ್ಲಿ ಕರ್ತವ್ಯಕ್ಕೆ ಲಭ್ಯರಾಗಬೇಕು ಎನ್ನುವುದು ಸಂಸ್ಥೆಯ ಅಶಯ. ಕರ್ತವ್ಯಕ್ಕೆ ಬರಬೇಕು ಎಂದು ದೂರವಾಣಿ ಮೂಲಕ ಹಲವು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಮನೆಗೆ ಬಂದು ಕೋರಿದರೂ ನಿಯಮ ಉಲ್ಲಂಘಿಸಿದ್ದೀರಿ. ನಿಮ್ಮ ಕುಟುಂಬದ ವಾಸಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಇಲಾಖೆ ವಸತಿ ಸೌಲಭ್ಯ ನೀಡಿದೆ. ಆದರೆ, ಕೆಲಸಕ್ಕೆ ಅನಧಿಕೃತವಾಗಿ ಗೈರು ಹಾಜರಿ ಆಗಿರುವುದರಿಂದ ಮನೆ ಹಂಚಿಕೆ ರದ್ದು‍ಪಡಿಸಬೇಕಾಗುತ್ತದೆ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

‘ಇಲ್ಲಿ 17 ಮನೆಗಳನ್ನು ನೌಕರರಿಗೆ ಹಂಚಿಕೆ ಮಾಡಿದ್ದೇವೆ. ಅವರು ಕೆಲಸಕ್ಕೆ ಬಾರದಿರುವುದರಿಂದ ನೋಟಿಸ್ ಜಾರಿಗೊಳಿಸಲಾಗಿದೆ. ಮನೆಯಲ್ಲಿ ಇಲ್ಲದವರಿಗೆ, ನೋಟಿಸ್ ಅನ್ನು ಬಾಗಿಲಿಗೆ ಅಂಟಿಸಲಾಗಿದೆ. ಕೆಲಸಕ್ಕೆ ಹಾಜರಾಗುವಂತೆ ಕೊನೆಯ ಎಚ್ಚರಿಕೆ ನೀಡಿದ್ದೇವೆ. ಜನರಿಗೆ ತೀವ್ರ ತೊಂದರೆ ಆಗುತ್ತಿರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ’ ಎಂದು ಎನ್‌ಡಬ್ಲ್ಯುಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ತರಬೇತಿ ನಿರತ 37 ಮಂದಿಗೂ ನೋಟಿಸ್:

‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ನಡೆಸುತ್ತಿರುವ ಅನಿರ್ದಿಷ್ಟಾವಧಿ ಕಾನೂನು ಬಾಹಿರ ಮುಷ್ಕರಕ್ಕೆ ತರಬೇತಿ ಅವಧಿಯಲ್ಲಿ ಬೆಂಬಲ ನೀಡಿ ಗೈರು ಹಾಜರಾಗಿರುವ 36 ತರಬೇತಿ ನೌಕರರಿಗೆ, ಏ.9ರ ಒಳಗಾಗಿ ಹಾಜರಾಗುವಂತೆ ಸೂಚನಾಪತ್ರ ನೀಡಲಾಗಿದೆ. ಬೆಳಗಾವಿ, ಬೈಲಹೊಂಗಲ, ರಾಮದುರ್ಗ, ಹಾಗೂ ಖಾನಾಪುರ ಘಟಕಗಳ ಚಾಲಕ, ತಾಂತ್ರಿಕ ಸಹಾಯಕ, ಚಾಲಕ-ಕಂ-ನಿರ್ವಾಹಕ, ನಿರ್ವಾಹಕ, ಕುಶಲಕರ್ಮಿಗಳು ಇದರಲ್ಲಿ ಸೇರಿದ್ದಾರೆ’ ಎಂದು ಮಾಹಿತಿ ನೀಡಿದರು.

‘ತರಬೇತಿ ಅವಧಿಯಲ್ಲಿ, ಆದೇಶದಲ್ಲಿನ ಷರತ್ತು ಮತ್ತು ನಿಬಂಧನೆಗಳಿಗೆ ವಿರುದ್ಧವಾಗಿ ಅವರು ನಡೆದುಕೊಂಡಿದ್ದಾರೆ. ಹಾಜರಾಗದಿದ್ದಲ್ಲಿ, ಸಂಸ್ಥೆಯ
ನಿಯಮಾವಳಿ ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

***

'ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಎರಡು ದಿನಗಳಿಂದ ಬೆಳಗಾವಿ ವಿಭಾಗಕ್ಕೆ ₹ 1 ಕೋಟಿ ನಷ್ಟ ಉಂಟಾಗಿದೆ. ಗುರುವಾರ ನಮ್ಮ 3 ಬಸ್‌ಗಳು ಮಾತ್ರ ಒಂದೆ ಟ್ರಿಪ್‌ ಹೋಗಿವೆ'

-ಮಹಾದೇವಪ್ಪ ಮುಂಜಿ, ವಿಭಾಗೀಯ ನಿಯಂತ್ರಣಾಧಿಕಾರಿ, ಎನ್‌ಡಬ್ಲ್ಯುಕೆಆರ್‌ಟಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT