ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ: ಅರಿಸಿನ ಬೆಳೆಗಾರರು ಕಂಗಾಲು

ಮಳೆಯಿಂದಾಗಿ ಕೊಳೆಯುತ್ತಿರುವ ಬೆಳೆ
Last Updated 22 ಅಕ್ಟೋಬರ್ 2020, 5:01 IST
ಅಕ್ಷರ ಗಾತ್ರ

ಮೂಡಲಗಿ: ಉತ್ತಮವಾಗಿ ಬೆಳೆದಿದ್ದ ಅರಿಸಿನ ಬೆಳೆಯು ಅತಿವೃಷ್ಟಿಯಿಂದ ಅಪಾಯದಲ್ಲಿದ್ದು, ರೈತರು ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ಕಬ್ಬು ಬೆಳೆಯ ನಂತರ ಅರಿಸಿನವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ಬಾರಿ 4,200 ಎಕರೆ ಬೆಳೆಯಿದೆ. ಮೇ ಮತ್ತು ಜೂನ್‌ ಮೊದಲ ವಾರದಲ್ಲಿ ಬಿತ್ತಿರುವ ಅರಿಸಿನ ಜನವರಿ ಅಂತ್ಯಕ್ಕೆ ಕೊಯ್ಲಿಗೆ ಸಜ್ಜಾಗಲಿತ್ತು. ವಾರದಿಂದ ಬಿಟ್ಟೂ ಬಿಟ್ಟು ಮಳೆ ಸುರಿಯುತ್ತಿರುವುದರಿಂದ ಬೆಳೆಗಳೆಲ್ಲ ಜಲಾವೃತಗೊಂಡಿವೆ. ಅಲ್ಲಲ್ಲಿ ಕೊಳೆಯುತ್ತಿವೆ.

‘ಈ ವರ್ಷ ಅರಿಸಿನ ಬೆಳೆ ಬಂಪರ ಇತ್ತರೀ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗೈತ್ರಿ‘ ಎಂದು ಹಳ್ಳೂರಿನ ರೈತ ಲಕ್ಷ್ಮಣ ಸಪ್ತಸಾಗರ ಕಷ್ಟವನ್ನು ಹಂಚಿಕೊಂಡರು.

ಕ್ವಿಂಟಲ್‌ ಅರಿಸಿನಕ್ಕೆ ₹8ರಿಂದ ₹10 ಸಾವಿರ ದರ ದೊರೆಯತ್ತಿದೆ. ಇದರಿಂದಾಗಿ ಮೂಡಲಗಿ ಭಾಗದ ರೈತರು ಒಂದು ದಶಕದಿಂದ ಕಬ್ಬಿಗೆ ಪರ್ಯಾಯವಾಗಿ ಅರಿಸಿನ ಬೆಳೆಯುತ್ತಿದ್ದಾರೆ. ಈ ವರ್ಷ ಕಳೆದ ವರ್ಷಕ್ಕಿಂತ ಅರಿಸಿನವನ್ನು ಅಧಿಕ ಬೆಳೆದಿದ್ದು, ರೈತರ ಖುಷಿಯನ್ನು ಮಳೆಯು ಕಿತ್ತುಕೊಂಡಿದೆ.

ವಿಜ್ಞಾನಿಗಳಿಂದ ಸಲಹೆ:‘ಅತಿಯಾದ ಮಳೆಯಿಂದ ಅರಿಸಿನಕ್ಕೆ ಕೊಳೆ ರೋಗ ಬರುವ ಸಂಭವ ಇರುತ್ತದೆ. ಮೊದಲಿಗೆ ತೋಟದಲ್ಲಿ ನಿಂತಿರುವ ನೀರನ್ನು ಬಸಿಗಾವಲಿನ ಮೂಲಕ ಹೊರಕ್ಕೆ ಹಾಕಬೇಕು. ಎಲೆಗಳು ಹಳದಿ ಆಗುವುದನ್ನು ತಡೆಯಲು ನೀರಿನಲ್ಲಿ ಕರಗುವ ಗೊಬ್ಬರವಾದ 19:19:19ವನ್ನು ಪ್ರತಿ ಲೀಟರ್‌ ನೀರಿಗೆ 5 ಗ್ರಾಂ. ನಂತೆ ಮಿಶ್ರಣ ಮಾಡಿ ಸಿಂಪಡಿಸಬೇಕು. ಮಳೆ ಕಡಿಮೆಯಾದ ನಂತರ ಕಾಪರ್‌ ಆಕ್ಸಿಕ್ಲೋರೈಡ್‌ 3 ಗ್ರಾಂ. ಮತ್ತು ಸ್ಟೈಪ್ಟೋಸೈಕ್ಲಿನ್‌ 0.5 ಗ್ರಾಂ. ಪ್ರತಿ ಲೀಟರ್‌ ನೀರಿಗೆ ಬೆರಸಿ ಗಿಡಗಳ ಬುಡಕ್ಕೆ ಡ್ರೈಂಚಿಂಗ್‌ ಮಾಡಬೇಕು. ಪೋಷಕಾಂಶಗಳ ಕೊರತೆಗಾಗಿ 4.5 ಗ್ರಾಂ. ಟರ್ಮರಿಕ್‌ ಬೂಸ್ಟರ್‌ ಸಿಂಪಡಿಸಬೇಕು’ ಎಂದು ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಕಾಲೇಜಿನ ವಿಜ್ಞಾನಿ ಡಾ.ಕಾಂತರಾಜು ವಿ. ತಿಳಿಸಿದರು. ಸಂಪರ್ಕಕ್ಕೆ: ಮೊ:94485 84749.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT