ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿಸಿನ ಬೀಜದ ಬೆಲೆ ಹೆಚ್ಚಳ: ರೈತರಿಗೆ ತೊಂದರೆ

Last Updated 12 ಜೂನ್ 2019, 13:26 IST
ಅಕ್ಷರ ಗಾತ್ರ

ಅಥಣಿ: ತಾಲ್ಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಬ್ಬಿಗೆ ಪರ್ಯಾಯವಾಗಿ ಕೆಲವು ರೈತರು ಅರಿಸಿನ ಬೆಳೆಯಲು ಆರಂಭಿಸಿದ್ದಾರೆ. ಆದರೆ, ಅವರು ಸಿದ್ಧಪಡಿಸಿದ ಅರಿಸಿನಕ್ಕೆ ಮಧ್ಯವರ್ತಿಗಳು, ದಳ್ಳಾಳಿಗಳ ಹಾವಳಿಯಿಂದಾಗಿ ಅವರಿಗೆ ಸರಿಯಾದ ಬೆಲೆ ದೊರೆಯುತ್ತಿಲ್ಲ.

ಮುಂಗಾರು ಹಂಗಾಮು ಆರಂಭವಾಗಿದ್ದು, ರೈತರು ಬಿತ್ತನೆಬೀಜಗಳನ್ನು ಸಂಗ್ರಹಿಸಲು ಆರಂಭಿಸಿದ್ದಾರೆ. ಆಂಧ್ರಪ್ರದೇಶದಿಂದ ಬಂದ ಕೆಲವರು ಇಲ್ಲಿ ಅರಿಸಿನ ಬಿತ್ತನೆಬೀಜಗಳನ್ನು ಮಾರಾಟ ಮಾಡುತ್ತಿದ್ದಾರೆ. ಬೆಳೆದ ಬಂತರ ಮಾರುವಾಗ ಅರಿಸಿನಕ್ಕೆ ಇಲ್ಲದ ಬೆಲೆ, ಬಿತ್ತನೆಬೀಜ ಖರೀದಿಸುವಾಗ ಹೆಚ್ಚಾಗಿದೆ. ಇದು ರೈತರಿಗೆ ಹೊರೆಯಾಗಿ ಪರಿಣಮಿಸಿದೆ.

ಸಾಮಾನ್ಯವಾಗಿ ಕ್ವಿಂಟಲ್‌ಗೆ ₹ 2000ದಿಂದ ₹ 2500 ಬೆಲೆ ಇರುತ್ತದೆ. ಆದರೆ, ಮಳೆಯಾದರೆ ₹ 3500ರಿಂದ ₹ 5000ಕ್ಕೆ ಹೆಚ್ಚಿಸುತ್ತಾರೆ. ರೈತರ ಅನಿವಾರ್ಯವನ್ನು ದಲ್ಲಾಳಿಗಳು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಬೇಕಾದಂತೆ ಬೆಲೆ ನಿಗದಿಪಡಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಗಳು ಕೇಳಿಬರುತ್ತಿವೆ.

ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ ತಾಲ್ಲೂಕಿನಲ್ಲಿ 4500 ಎಕರೆ ಪ್ರದೇಶದಲ್ಲಿ ಅರಿಸಿನ ಬೆಳೆಯಲಾಗುತ್ತಿದೆ. ಟನ್‌ ಕಬ್ಬಿಗೆ ಸಕ್ಕರೆ ಕಾರ್ಖಾನೆಯವರು ಗರಿಷ್ಠ ₹ 2500ರಿಂದ ₹ 2800 ಕೊಡುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಅರಿಸಿನ ಕ್ವಿಂಟಲ್‌ಗೆ ₹ 12ಸಾವಿರದಿಂದ ₹ 16ಸಾವಿರದರೆಗೆ ಇರುತ್ತದೆ. ಆದರಲ್ಲೂ ದಲ್ಲಾಳಿಗಳು ಮೋಸ ಮಾಡುತ್ತಾರೆ. ಸರಾಸರಿ ₹ 8ಸಾವಿರಕ್ಕೆ ಖರೀದಿಸುತ್ತಿದ್ದಾರೆ. ರೈತರಿಗೆ ನ್ಯಾಯಯುತ ಬೆಲೆ ದೊರೆಯುತ್ತಿಲ್ಲ ಎಂಬ ದೂರುಗಳಿವೆ.

‘ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕು. ರೈತರಿಗೆ ಅರಿವು ಮೂಡಿಸಬೇಕು. ದಲ್ಲಾಳಿಗಳ ಹಾವಳಿ ತಪ್ಪಿಸಬೇಕು. ಆಗ, ಅರಿಸಿನವು ರೈತರಿಗೆ ಬಂಗಾರದ ಬೆಳೆಯಾಗುವುದರಲ್ಲಿ ಸಂಶಯವಿಲ್ಲ’ ಎನ್ನುತ್ತಾರೆ ಚಿಂತಕ ಚಿದಾನಂದ ಪಾಟೀಲ.

‘ಮಳೆಯಾಗುತ್ತಿದ್ದಂತೆಯೇ ಅರಿಸಿನ ಬಿತ್ತನೆ ಬೀಜದ ದರವನ್ನು ದಲ್ಲಾಳಿಗಳು ಏಕಾಏಕಿ ಹೆಚ್ಚಿಸುತ್ತಾರೆ. ಇದರಿಂದ ರೈತರಿಗೆ ತುಂಬಾ ಕಷ್ಟವಾಗುತ್ತದೆ. ಈ ವಿಷಯವನ್ನು ಶಾಸಕರ ಗಮನಕ್ಕೂ ತಂದಿದ್ದೇವೆ. ಸಮಸ್ಯೆ ಬಗೆಹರಿಸದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಮಡಿವಾಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT