ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರ ಸೇವೆ ಕಾಯಂಗೊಳಿಸಲು ಒತ್ತಾಯ

Published 7 ಡಿಸೆಂಬರ್ 2023, 10:30 IST
Last Updated 7 ಡಿಸೆಂಬರ್ 2023, 10:30 IST
ಅಕ್ಷರ ಗಾತ್ರ

ಬೆಳಗಾವಿ: ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಿವಿಧೋದ್ದೇಶ, ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಕಾರ್ಯಕರ್ತರ ರಾಜ್ಯ ಒಕ್ಕೂಟದವರು ತಾಲ್ಲೂಕಿನ ಹಲಗಾ ಗ್ರಾಮದ ಸುವರ್ಣ ವಿಧಾನಸೌಧ ಬಳಿ ಗುರುವಾರ ಪ್ರತಿಭಟಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಮ್ಮ ಹಕ್ಕೊತ್ತಾಯ ಮಂಡಿಸಿದರು.

‘ನಮ್ಮ ಸೇವೆ ಕಾಯಂಗೊಳಿಸುವವರೆಗೆ ಕನಿಷ್ಠ ವೇತನ ಸೌಲಭ್ಯ ಒದಗಿಸಬೇಕು. ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ಅಂಗವಿಕಲರ ಕಲ್ಯಾಣಕ್ಕಾಗಿ ಪ್ರತ್ಯೇಕ ನಿಗಮ ಆರಂಭಿಸಬೇಕು. ಸರ್ಕಾರದ ವಿವಿಧ ಹಂತಗಳಲ್ಲಿ ನಮ್ಮ ಬೇಡಿಕೆಗಳ ಕಡತಗಳು ಬಾಕಿ ಇವೆ. ಅವುಗಳನ್ನು ವಿಲೇವಾರಿಗೊಳಿಸಿ, ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ಇಂದಿನ ದುಬಾರಿ ಯುಗದಲ್ಲಿ ಅತ್ಯಲ್ಪ ವೇತನದಲ್ಲಿ ಬದುಕು ಸಾಗಿಸುವುದೇ ಕಷ್ಟವಾಗಿದೆ. ಆದರೆ, ಪ್ರತಿವರ್ಷ ಹೋರಾಟ ನಡೆಸಿ ಮನವಿ ಸಲ್ಲಿಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕೆ.ಸುಬ್ರಮಣ್ಯಂ, ಪ್ರಧಾನ ಕಾರ್ಯದರ್ಶಿ ಎಸ್‌.ಕೃಷ್ಣಪ್ಪ, ಸಂಚಾಲಕ ಜೆ.ದೇವರಾಜ್‌ ಇತರರಿದ್ದರು.

ಸೇವಾಭದ್ರತೆ ಒದಗಿಸಿ

ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದ ಸುವರ್ಣ ವಿಧಾನಸೌಧ ಬಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಹೊರಗುತ್ತಿಗೆ ಮತ್ತು ಸಿಡಿಸಿ ನೌಕರರ ಸಂಘದವರು ಗುರುವಾರ ಪ್ರತಿಭಟನೆ ನಡೆಸಿದರು‌

ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದ ಸುವರ್ಣ ವಿಧಾನಸೌಧ ಬಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಹೊರಗುತ್ತಿಗೆ ಮತ್ತು ಸಿಡಿಸಿ ನೌಕರರ ಸಂಘದವರು ಗುರುವಾರ ಪ್ರತಿಭಟನೆ ನಡೆಸಿದರು‌

‘ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನ್‌ಸ್ಕಿಲ್ಡ್‌ ನೌಕರರಾಗಿ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ(ಸಿಡಿಸಿ) ಮೂಲಕ ನೇಮಕಗೊಂಡು ಸ್ವಚ್ಛತೆ ಮತ್ತು ಇತರೆ ಕೆಲಸಗಳನ್ನು ನಿರ್ವಹಿಸುತ್ತಿರುವ ನಮಗೆ ಸೇವಾಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಹೊರಗುತ್ತಿಗೆ ಮತ್ತು ಸಿಡಿಸಿ ನೌಕರರ ಸಂಘದವರು ಪ್ರತಿಭಟಿಸಿದರು.

‘ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ, ಉನ್ನತ ಶಿಕ್ಷಣ ಇಲಾಖೆಯಿಂದಲೇ ನಮ್ಮನ್ನು ನೇರವಾಗಿ ನೇಮಕ ಮಾಡಿಕೊಳ್ಳಬೇಕು. ಹಲವು ವರ್ಷಗಳಿಂದ ಕಾಲೇಜುಗಳಲ್ಲಿ ದುಡಿಯುತ್ತಿರುವವರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು. ಎಸ್ಸೆಸ್ಸೆಲ್ಸಿ ಉತ್ತೀರ್ಣವಾಗಿರಬೇಕೆಂಬ ಮಾನದಂಡ ಕೈಬಿಡಬೇಕು’ ಎಂದು ಆಗ್ರಹಿಸಿದರು.

ಬಿ.ಜಿ.ಹನುಮಂತಪ್ಪ, ಶಿವಶಂಕರ ಅಂಗಡಿ, ಮಲ್ಲಿಕಾರ್ಜುನ ಮುಳವಾಡ, ಎಚ್‌.ಚನ್ನಮೂರ್ತಿ, ಚೇತನ ನುನ್ನಾ, ನೇತ್ರಾವತಿ, ರಂಗಮ್ಮ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT