ಶುಕ್ರವಾರ, ಅಕ್ಟೋಬರ್ 30, 2020
23 °C

ನಂಬಿಕೆ, ವಿಶ್ವಾಸ ಕಳೆದುಕೊಳ್ಳಬಾರದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ//ಧರೆ ಹತ್ತಿ ಉರಿದಡೆ ನಿಲಲುಬಾರದು//ಏರಿ ನೀರುಂಬಡೆ, ಬೇಲಿಕೆಯ್ಯ ಮೇವಡೆ//ನಾರಿ ತನ್ನ ಮನೆಯಲ್ಲಿ ಕಳುವಡೆ// ತಾಯ ಮೊಲೆವಾಲು ನಂಜಾಗಿ ಕೊಲುವಡೆ// ಇನ್ನಾರಿಗೆ ದೂರುವೆ ಕೂಡಲಸಂಗಮ ದೇವಾ...

ನಂಬಿಕೆ ಮತ್ತು ವಿಶ್ವಾಸ ಮಾನವನ ಜೀವನದ ಅವಿಭಾಜ್ಯ ಅಂಗಗಳು. ಯಾವ ವ್ಯಕ್ತಿಯು ನಂಬಿಕೆಗೆ ಅರ್ಹನಾಗಿರುತ್ತಾನೋ ಅವನು ಸದಾ ಕಾಲ  ಒಳ್ಳೆಯವನೆಂದು ಹೆಸರು ಗಳಿಸಿರುತ್ತಾನೆ. ಈ ಜಗತ್ತು ನಿಂತಿರುವುದೇ ನಂಬಿಕೆ–ವಿಶ್ವಾಸದ ಆಧಾರದ ಮೇಲೆ. ಬಸವಣ್ಣನವರು ನಂಬಿಕೆಯ ಮಹತ್ವವನ್ನು ಈ ವಚನದಲ್ಲಿ ತಿಳಿಸಿದ್ದಾರೆ.

ಒಲೆಯ ಬೆಂಕಿ ಜಾಸ್ತಿಯಾದರೆ ನಂದಿಸಬಹುದು. ಆದರೆ, ಈ ಭೂಮಿಗೇ ಬೆಂಕಿ ಬಿದ್ದರೆ ನಂದಿಸಲಾಗುವುದಿಲ್ಲ. ಕೆರೆಯ ನೀರನ್ನು ಕೆರೆಯೇ ಕುಡಿದರೆ, ನೀರನ್ನು ಎಲ್ಲಿಂದ ತರುವುದು? ಗದ್ದೆಯಲ್ಲಿರುವ ಫಸಲನ್ನು ಬೇಲಿಯೆ ಕಬಳಿಸಿದರೆ ಬೆಳೆಯ ಗತಿಯೇನು? ಮನೆ ಸಂರಕ್ಷಿಸುವ ಒಡತಿಯೆ ಮನೆಯಲ್ಲಿ ಕಳವು ಮಾಡಿದರೆ ಮನೆಯ ಉದ್ಧಾರ ಹೇಗೆ ಸಾಧ್ಯ? ಹಾಗೆಯೇ ಮಗುವಿಗೆ ಆಹಾರವಾದ ತಾಯಿಯ ಎದೆ ಹಾಲು ವಿಷವಾದರೆ ಮಗು ಬದುಕುವುದೇ? ಭೂಮಿ, ಕೆರೆ, ಬೇಲಿ, ಒಡತಿ, ತಾಯಿ ಇವೆಲ್ಲವೂ ಅಪರಿಮಿತ ನಂಬಿಕೆ ಒಳಗೊಂಡಿರುವಂಥವು. ಇವುಗಳಿಂದಲೇ ದ್ರೋಹವಾದರೆ ನಂಬಿಕೆಯ ಅಸ್ತಿತ್ವವೇ ಇಲ್ಲದಂತಾಗುತ್ತದೆ. ಬೇರೆಯವರಿಂದ ತಪ್ಪುಗಳಾದರೆ ಅಲಕ್ಷ್ಯ ಮಾಡಬಹುದು. ನಂಬಿದವರಿಂದಲೇ ನೋವುಗಳಾದರೆ ಯಾರ ಹತ್ತಿರವೂ ಹೇಳಿಕೊಳ್ಳಲಾಗುವುದಿಲ್ಲ. ಈ ವಚನದ ಮೂಲಕ ಬಸವಣ್ಣ ಅವರು ನಂಬಿಕೆ ತುಂಬಾ ಮುಖ್ಯ ಎಂಬುದನ್ನು ತಿಳಿಸಿದ್ದಾರೆ. ಹೀಗಾಗಿ, ನಂಬಿಕೆ–ವಿಶ್ವಾಸ ಕಳೆದುಕೊಳ್ಳಬಾರದು.

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.