ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ

ಜನ ವಿರೋಧಿ ನೀತಿಗೆ ಖಂಡನೆ
Last Updated 26 ನವೆಂಬರ್ 2020, 13:07 IST
ಅಕ್ಷರ ಗಾತ್ರ

ಬೆಳಗಾವಿ: ಕೇಂದ್ರ ಸರ್ಕಾರದ ರೈತ, ಕಾರ್ಮಿಕ ಹಾಗೂ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಗುರುವಾರ ಕರೆ ನೀಡಿದ್ದ ಮುಷ್ಕರ ಬೆಂಬಲಿಸಿ, ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಕಾರ್ಮಿಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದ ನೂರಾರು ಮಂದಿ, ಸರ್ಕಾರಗಳ ಧೋರಣೆಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

‘ಲಾಭದಾಯಕ ಎಲ್‌ಐಸಿ, ಬ್ಯಾಂಕ್, ರೈಲ್ವೆ, ಬಿಎಸ್‌ಎನ್ಎಲ್ ಮೊದಲಾದ ಸಂಸ್ಥೆಗಳನ್ನು ಬಂಡವಾಳಶಾಹಿಗಳ ವಶಕ್ಕೆ ನೀಡುತ್ತಿರುವುದು ಖಂಡನೀಯ’ ಎಂದು ತಿಳಿಸಿದರು.

‘ಔಷಧಿಗಳ ಬೆಲೆ ಇಳಿಸಿ:

‘ಔಷಧಿಗಳ ಬೆಲೆ ಇಳಿಸಬೇಕು ಮತ್ತು ಜಿಎಸ್‌ಟಿ ವಿಧಿಸಬಾರದು. ನೂತನ ಶಿಕ್ಷಣ ನೀತಿ–2020 ಜಾರಿಗೊಳಿಸುವಾಗ ಬಿಸಿಯೂಟ ಯೋಜನೆ ಬಲಪಡಿಸಿ, ಆ ನೌಕರರಿಗೆ ಕೆಲಸದ ಭದ್ರತೆ ಒದಗಿಸಬೇಕು. ಬಿಸಿಯೂಟ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಆರೋಗ್ಯ ಸೌಲಭ್ಯ ಮತ್ತು ನಿವೃತ್ತಿ ವೇತನ ಕಲ್ಪಿಸಬೇಕು. ಕೇಂದ್ರೀಕೃತ ಅಡುಗೆ ಮನೆ ವ್ಯವಸ್ಥೆ ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆ ಹಿಂಪಡೆಯಬೇಕು. ಶಿಕ್ಷಣ ಮತ್ತು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಬಾರದು. ಗ್ರಾಮ ಪಂಚಾಯಿತಿ ನೌಕರರ ವಾರ್ಷಿಕ ₹ 382 ಕೋಟಿ ಬಾಕಿ ಬಿಡುಗಡೆ ಮಾಡಬೇಕು. ₹ 21ಸಾವಿರ ಕನಿಷ್ಠ ವೇತನ ನಿಗದಿಪ‌ಡಿಸಬೇಕು. ಎಲ್ಲರಿಗೂ ಪಿಂಚಣಿ ನೀಡಬೇಕು. ಪಂಚಾಯತ್‌ರಾಜ್‌ ಸಂಸ್ಥೆಗಳಿಗೆ ಅನುದಾನ ಕಡಿತಗೊಳಿಸಬಾರದು. ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಸೇವಾ ನಿಯಮಾವಳಿ ರಚಿಸಬೇಕು. ಕೇಂದ್ರ ಸರ್ಕಾರ ಕಡಿತಗೊಳಿಸಿರುವ ಅನುದಾನ ವಾಪಸ್ ಕೊಡಬೇಕು. ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಪಿಂಚಣಿ ನೀಡಬೇಕು’ ಎಂದು ಹಕ್ಕೊತ್ತಾಯ ಮಂಡಿಸಿದರು.

ಬೆಲೆ ಏರಿಕೆಗೆ ಕಡಿವಾಣ ಹಾಕಿ:

‘ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಬೇಕು. ಸರ್ಕಾರಿ ಭೂಮಿಯನ್ನು ಭೂರಹಿತ ಕೃಷಿ ಕಾರ್ಮಿಕರಿಗೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ನೀಡಬೇಕು. ಸರ್ಕಾರಿ ನೌಕರರ ಮತ್ತು ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕರ ಬಲವಂತದ ನಿವೃತ್ತಿ ಯೋಜನೆ ವಾಪಸ್ ಪಡೆಯಬೇಕು. ನೂತನ ಪಿಂಚಣಿ ವ್ಯವಸ್ಥೆ ರದ್ದುಪಡಿಸಬೇಕು. ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ವಿದ್ಯುತ್‌ ದರ ಏರಿಕೆ ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ದೊಡ್ಡ ಉದ್ದಿಮೆದಾರರಿಂದ ಬರಬೇಕಾದ ಕೋಟ್ಯಂತರ ರೂಪಾಯಿ ಸಾಲ ವಾಪಸ್ ಪಡೆಯಲು ತುರ್ತು ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು. ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೂಡಲೇ ಪ್ರಕ್ರಿಯೆ ಆರಂಭಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ನಾಗೇಶ ಸಾತೇರಿ, ಜಿ.ವಿ. ಕುಲಕರ್ಣಿ, ಮಂದಾ ನೇವಗಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT