ಬುಧವಾರ, ಜನವರಿ 22, 2020
21 °C
ಹಿತಚಿಂತಕ ಅಭಿಯಾನ ಕಾರ್ಯಕ್ರಮ

ಗೋ ರಕ್ಷಕರ ವಿರುದ್ಧವೇ ದೂರು ದಾಖಲು: ಹೆಗಡೆ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಗೋ ಹತ್ಯೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಗೋವುಗಳ ರಕ್ಷಣೆ ಮಾಡುವವರ ವಿರುದ್ಧವೇ ದೂರುಗಳು ದಾಖಲಾಗುತ್ತಿವೆ’ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ವಿಷಾದ ವ್ಯಕ್ತಪಡಿಸಿದರು.

ಇಲ್ಲಿನ ಮರಾಠಾ ಮಂದಿರ ‌ಕಾರ್ಯಾಲಯದಲ್ಲಿ ವಿಎಚ್‌ಪಿ ಹಾಗೂ ಬಜರಂಗ ದಳ‌ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಮಂಗಳವಾರ ‌ಆಯೋಜಿಸಿದ್ದ ಹಿತಚಿಂತಕ ಅಭಿಯಾನ ಹಾಗೂ ಸ್ವಾಮೀಜಿಗಳು ಮತ್ತು ಸಮಾಜದ ಪ್ರಮುಖರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಹಿಂದೂಗಳು ಜಾಗೃತಿಯೊಂದಿಗೆ ಸಂಘಟಿತರೂ ಆಗಬೇಕು. ಈ ಕಾರ್ಯವನ್ನು ವಿಎಚ್‌ಪಿ, ಬಜರಂಗ ದಳ 55 ವರ್ಷಗಳಿಂದ ಮಾಡುತ್ತಿದೆ. ಹಿಂದೂ ಸಮಾಜ ನಿದ್ರಿಸುತ್ತಿದ್ದು ಅದನ್ನು ಎಚ್ಚರಿಸುವ ಕಾರ್ಯವಾಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಸಿಎಎ, ಎನ್‌ಆರ್‌ಸಿಯು ಯಾವುದೇ ಜಾತಿ, ಧರ್ಮ, ಜನಾಂಗದ ವಿರೋಧಿಯಲ್ಲ. ಮುಸ್ಲಿಮರನ್ನು ದಾರಿ ತಪ್ಪಿಸುವ ಕೆಲಸವ್ನು ಕೆಲವರು ಮಾಡಿದ್ದಾರೆ. ಇದರಿಂದ ದೇಶದಲ್ಲಿ ವಿರೋಧಿ ಅಲೆ ಹೆಚ್ಚಾಗಿದೆ. ಸಿಎಎ ಮತ್ತು ಎನ್‌ಆರ್‌ಸಿಯನ್ನು ರಾಷ್ಟ್ರ ರಕ್ಷಣೆಗೆ ಹಾಗೂ ಬಲಗೊಳಿಸುವುದಕ್ಕೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಹಿಂದೂ ಸಂಸ್ಕೃತಿ, ಧರ್ಮ, ದೇಶಕ್ಕಾಗಿ ನಿರ್ಮಾಣಕ್ಕೆ ವಿಎಚ್‌ಪಿ, ಬಜರಂಗ ದಳ ಕೆಲಸ ಮಾಡುತ್ತಿವೆ. ಆದರೆ ಕೆಲ ಮಾಧ್ಯಮಗಳು ಅಪಪ್ರಚಾರ ಮಾಡುತ್ತಿವೆ. ಸಂಘಟನೆಯು ಗೋ ಹತ್ಯೆ, ಲವ್‌ ಜಿಹಾದ್, ಮತಾಂತರ ತಡೆಯುವ ಕೆಲಸ ಮಾಡುತ್ತಿದೆ. ಭಾರತೀಯ ಮಹಿಳೆಯರು ಜಾಗೃತರಾಗಬೇಕು’ ಎಂದು ಸಲಹೆ ನೀಡಿದರು.

ಮುಖಂಡ ಕೃಷ್ಣ ಭಟ್‌ ಮಾತನಾಡಿ, ‘ಎಲ್ಲಾ ಸಮಾಜದವರನ್ನು ಒಟ್ಟಿಗೆ ಸೇರಿಸುವ ಕಾರ್ಯವನ್ನು ವಿಎಚ್‌ಪಿ ಮಾಡುತ್ತಿದೆ. ಮತಾಂತರ, ಲವ್ ಜಿಹಾದ್ ನಿಲ್ಲಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಹಿತಚಿಂತಕ ಅಭಿಯಾನ ನಡೆಸಲಾಗುತ್ತಿದೆ’ ಎಂದರು.

‘ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ. ಅವರ ರಕ್ಷಣೆಗೆ ನಾವು ಹಿತಚಿಂತಕರಾಗಬೇಕು. ಲವ್ ಜಿಜಾದ್, ಗೋ ಹತ್ಯೆ, ಮತಾಂತರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು’ ಎಂದು ಹೇಳಿದರು.

ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೆಳಗಾವಿ ರುದ್ರಕೇಸರಿ ಮಠಾಧೀಶ ಹರಿಗುರು ಮಹಾರಾಜ, ನಾಗನಾಥ ಸ್ವಾಮೀಜಿ, ಯೋಗ ತಜ್ಞ ಸಂಗಮೇಶ ಸವದತ್ತಿಮಠ, ವಿಎಚ್‌ಪಿ ಉತ್ತರ ಪ್ರಾಂತದ ಸಹ ಸಂಘಟನಾ ಮಂತ್ರಿ ಮನೋಹರ ಮಠದ, ಹಿರಿಯ ವಕೀಲ ಎಸ್.ಎಂ. ಕುಲಕರ್ಣಿ, ವಿಜಯ ಜಾಧವ ಇದ್ದರು.

ರೇಖಾ ಹೆಗಡೆ ಪ್ರಾರ್ಥಿಸಿದರು. ಶ್ರಿಕಾಂತ ಕದಂ ಸ್ವಾಗತಿಸಿದರು. ಹೇಮಂತ ಹವಳ, ಬಸವರಾಜ ಹಳಿಂಗಳಿ ನಿರೂಪಿಸಿದರು. ಡಾ.ಬಸವರಾಜ ಭಾಗೋಜಿ ವಂದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು