ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯೇಂದ್ರ ಗಾಡಿ ಬಹಳ ದಿನ ಓಡದು: ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ

Published 30 ಆಗಸ್ಟ್ 2024, 13:49 IST
Last Updated 30 ಆಗಸ್ಟ್ 2024, 13:49 IST
ಅಕ್ಷರ ಗಾತ್ರ

ಬೆಳಗಾವಿ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಗಾಡಿ ಬಹಳ ದಿನ ಓಡುವುದಿಲ್ಲ. ಯತ್ನಾಳ, ರಮೇಶ ಜಾರಕಿಹೊಳಿ, ಆರ್.ಅಶೋಕ, ಬೊಮ್ಮಾಯಿ ಸೇರಿದಂತೆ ಯಾರೂ ಅವರ ನಾಯಕತ್ವ ಒ‍ಪ್ಪಿಕೊಂಡಿಲ್ಲ. ತಮ್ಮ ಸ್ಥಾನವೇ ಅಲುಗಾಡುತ್ತಿರುವಾಗ ಸಿದ್ದರಾಮಯ್ಯ ಮೇಲೆ ಆರೋಪ ಮಾಡುತ್ತಿದ್ದಾರೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ದೂರಿದರು.

‘ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ತಪ್ಪು ಏನೂ ಇಲ್ಲ ಎಂಬುದು ನಮಗೆ ಖಾತ್ರಿಯಾಗಿದೆ. ನ್ಯಾಯಾಲಯವೂ ಪ್ರಕರಣ ಪಕ್ಕಕ್ಕಿರಿಸಲಿದೆ. ಆಗ ಬಿಜೆಪಿಯರು ಪೇಚಾಟಕ್ಕೆ ಸಿಲುಕುತ್ತಾರೆ. ಸಿದ್ದರಾಮಯ್ಯ ಮತ್ತಷ್ಟು ಪ್ರಬಲ ನಾಯಕರಾಗಿ ಹೊರಹೊಮ್ಮುತ್ತಾರೆ’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಇನ್ನೊಬ್ಬ ದಲಿತ ನಾಯಕನ್ನೇ ಎತ್ತಿಕಟ್ಟಲಾಗಿದೆ. ಹೀಗೆ ಒಂದು ಸಮಾಜವನ್ನು ತುಳಿಯಲಿ ಅದೇ ಸಮಾಜದ ನಾಯಕರನ್ನು ಎತ್ತಿಕಟ್ಟುವುದು ಬಿಜೆಪಿ, ಆರ್‌ಎಸ್‌ಎಸ್‌ ಅಜೆಂಡ. ಲಿಂಗಾಯತ ನಾಯಕರನ್ನೇ ಎತ್ತಿಕಟ್ಟಿ ಯಡಿಯೂರಪ್ಪ ಅವರನ್ನು ಬಲಿ ಕೊಟ್ಟಿದ್ದು ಇದೇ ತಂತ್ರದಿಂದ’ ಎಂದೂ ಹೇಳಿದರು.

‘ಛಲವಾದಿ ನಾರಾಯಣಸ್ವಾಮಿ ಅವರಿಗೆ ನಾನು ಅವಮಾನ ಮಾಡಿಲ್ಲ. ಅವರು ಮೈಸೂರು ಬಳಿ ಸಾಫ್ಟ್‌ವೇರ್‌ ತಂತ್ರಜ್ಞಾನ ಅಭಿವೃದ್ಧಿಪಡಿಸಲು 8029 ಚದರ್‌ ಮೀಟರ್ ಭೂಮಿ ಪಡೆದಿದ್ದಾರೆ. ಅಲ್ಲಿ ಶೆಡ್‌ ಮಾತ್ರ ಕಟ್ಟಿದ್ದಾರೆ. ಆ ದೃಷ್ಟಿಯಲ್ಲಿ ಅವರನ್ನು ‘ಶೆಡ್‌ ಗಿರಾಕಿ’ ಎಂದು ಕರೆದಿದ್ದೇನೆ ಅಷ್ಟೇ’ ಎಂದು ಸ್ಪಷ್ಟಪಡಿಸಿದರು.

‘ಶಾಮನೂರು ಶಿವಶಂಕರಪ್ಪ ಅವರ ಜೊತೆಗೆ ಸಂಬಂಧ ಬೆಳೆಸಿದ ಬಳಿಕ ಲಿಂಗಾಯತ ಧರ್ಮದ ಹೋರಾಟದಿಂದ ಹಿಂದೆ ಸರಿದಿದ್ದೇನೆ ಎಂಬುದು ಸುಳ್ಳು. ಅವರ ತತ್ವ ಅವರಿಗೆ ನಮ್ಮ ತತ್ವ ನಮಗೆ. ಮುಂದೊಂದು ದಿನ ವೀರಶೈವ ಮಹಾಸಭೆಯವರೇ ಲಿಂಗಾಯತ ಧರ್ಮಕ್ಕೆ ಮುದ್ರೆ ಒತ್ತಲಿದ್ದಾರೆ’ ಎಂದೂ ಅವರು ‍ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT