ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರ ನೆಮ್ಮದಿ ಕಸಿದುಕೊಂಡ ‘ತ್ಯಾಜ್ಯ ವಿಲೇವಾರಿ ಘಟಕ’

ನಮ್ಮ ನಗರ– ನಮ್ಮ ಧ್ವನಿ
Last Updated 13 ಜನವರಿ 2020, 7:09 IST
ಅಕ್ಷರ ಗಾತ್ರ
ADVERTISEMENT
""

ಬೆಳಗಾವಿ ನಗರದ ತ್ಯಾಜ್ಯವನ್ನು ಸಂಸ್ಕರಿಸಲು ಸ್ಥಾಪನೆಯಾಗಿರುವ ಘಟಕವನ್ನು ಬೇರೆಡೆ ಸ್ಥಳಾಂತರಿಸುವಂತೆ ತುರಮುರಿ ಗ್ರಾಮಸ್ಥರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಹಲವು ಬಾರಿ ಶಾಸಕರಿಗೆ, ಸಚಿವರಿಗೆ ಮನವಿ ನೀಡಿದ್ದಾರೆ. ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದಾರೆ. ಇತ್ತೀಚೆಗೆ ತ್ಯಾಜ್ಯ ಸುರಿಯಲು ಬಂದಿದ್ದ ವಾಹನಗಳನ್ನು ವಾಪಸ್‌ ಕಳುಹಿಸಿದ್ದಾರೆ. ತ್ಯಾಜ್ಯ ವಿಲೇವಾರಿ ಘಟಕದಿಂದ ಗ್ರಾಮಸ್ಥರು ಅನುಭವಿಸುತ್ತಿರುವ ನೋವು– ಬವಣೆ ಕುರಿತು ‘ನಮ್ಮ ನಗರ– ನಮ್ಮ ಧ್ವನಿ’ ಬೆಳಕು ಹರಿಸಿದೆ. ಪ್ರತಿಕ್ರಿಯಿಸಿ– 9980204200

ಸ್ಮಾರ್ಟ್‌ ಸಿಟಿ ಬೆಳಗಾವಿ ತೀವ್ರ ಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ನಗರ ಬೆಳೆದಂತೆ ವಿವಿಧ ಸಮಸ್ಯೆಗಳು ತಲೆದೋರುತ್ತಿವೆ. ಇವುಗಳಲ್ಲಿ ಘನ ತ್ಯಾಜ್ಯ ವಿಲೇವಾರಿಯು ದೊಡ್ಡ ಸಮಸ್ಯೆಯಾಗಿ ಬೆಳೆದುನಿಂತಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತ್ಯಾಜ್ಯವನ್ನು ಹೇಗೆ ನಿಭಾಯಿಸುವುದು ಎಂದು ಪಾಲಿಕೆಯ ಸಿಬ್ಬಂದಿ ತಲೆಕೆಡಿಸಿಕೊಂಡಿದ್ದರೆ, ಇನ್ನೊಂದೆಡೆ, ತಮ್ಮ ಗ್ರಾಮದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಬೇರೆಡೆ ಸ್ಥಳಾಂತರಿಸುವಂತೆ ತುರಮುರಿ ಗ್ರಾಮಸ್ಥರು ತೀವ್ರ ಒತ್ತಡ ಹೇರುತ್ತಿದ್ದಾರೆ.

ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಕಂಟೋನ್ಮೆಂಟ್‌ ಪ್ರದೇಶ ಸೇರಿದಂತೆ ನಗರದಲ್ಲಿ ಸುಮಾರು 8 ಲಕ್ಷ ಜನಸಂಖ್ಯೆ ಇದೆ. ಪ್ರತಿದಿನ 240 ಟನ್‌ನಿಂದ 250 ಟನ್‌ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಈ ತ್ಯಾಜ್ಯವನ್ನು ತುರಮುರಿ ಗ್ರಾಮದ ಹೊರವಲಯದ ಘಟಕದಲ್ಲಿ ಸಂಸ್ಕರಿಸಲಾಗುತ್ತಿದೆ. ಸಂಸ್ಕರಣೆಯ ಪ್ರಕ್ರಿಯೆಯು ವೈಜ್ಞಾನಿಕವಾಗಿಲ್ಲ, ಬೇಕಾಬಿಟ್ಟಿ ಮಾಡಲಾಗುತ್ತಿದೆ. ಹೀಗಾಗಿ ಗ್ರಾಮದ ತುಂಬ ದುರ್ಗಂಧ ಉಂಟಾಗುತ್ತಿದೆ. ರೋಗ– ರುಜಿನಿಗಳು ಹರಡುತ್ತಿವೆ. ಇದನ್ನು ಇಲ್ಲಿಂದ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

ಆಗಾಗ ಪ್ರತಿಭಟನೆ ನಡೆಸುತ್ತಾರೆ, ರಸ್ತೆ ತಡೆ ನಡೆಸುತ್ತಾರೆ, ಬೆಳಗಾವಿಯ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರಿಗೆ ಬಂದು ಮನವಿ ನೀಡುತ್ತಾರೆ. ಮೊದ ಮೊದಲು ಮನವಿ ನೀಡುತ್ತಿದ್ದ ಗ್ರಾಮಸ್ಥರು ಇತ್ತೀಚೆಗೆ ಉಗ್ರ ಸ್ವರೂಪಕ್ಕೆ ಇಳಿದಿದ್ದಾರೆ. ಮೊನ್ನೆ ತ್ಯಾಜ್ಯ ತುಂಬಿಕೊಂಡು ಬಂದಿದ್ದ ವಾಹನವನ್ನು ವಾಪಸ್‌ ಕಳುಹಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಸಲು ಸಜ್ಜಾಗುತ್ತಿದ್ದಾರೆ.

ಆರೋಗ್ಯದ ಮೇಲೆ ಪರಿಣಾಮ:ಘನ ತ್ಯಾಜ್ಯ ಹಾಗೂ ಹಸಿ ತ್ಯಾಜ್ಯ ಎರಡನ್ನೂ ಇಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಹಸಿ ತ್ಯಾಜ್ಯವು ಕೊಳೆಯುವುದರಿಂದ ದುರ್ಗಂಧ ಉಂಟಾಗಿ, ಇಡೀ ವಾತಾವರಣ ಗಬ್ಬೆದು ಹೋಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಈ ಘಟಕದಿಂದಾಗಿ ನಮಗೆ ನೆಮ್ಮದಿ ಇಲ್ಲದಂತಾಗಿದೆ. ದುರ್ಗಂಧ ತಡೆಯಲಾಗದೆ ಮೂಗು ಮುಚ್ಚಿಕೊಂಡೇ ತಿರುಗಾಡಬೇಕಾಗಿದೆ. ಈ ಘಟಕ ಇರುವುದರಿಂದ ನಮ್ಮ ಗ್ರಾಮ ಅಭಿವೃದ್ಧಿಯಾಗುತ್ತಿಲ್ಲ. ಯಾವುದೇ ವ್ಯಾಪಾರ ವಹಿವಾಟುಗಳು ನಡೆಯುತ್ತಿಲ್ಲ. ಅಕ್ಕಪಕ್ಕದ ಗ್ರಾಮಸ್ಥರು ಈ ಕಡೆ ಹಾಯುತ್ತಿಲ್ಲ’ ಎಂದು ಗ್ರಾಮದ ಹಿರಿಯ ತಾನಾಜಿ ಪಾಟೀಲ ಅಳಲು ತೋಡಿಕೊಂಡರು.

‘ತ್ಯಾಜ್ಯದಿಂದ ಹೊರಬರುವ ಬ್ಯಾಕ್ಟೀರಿಯಾಗಳು ವಾತಾವರಣದಲ್ಲಿ ಸೇರಿಕೊಂಡು, ನಮ್ಮ ದೇಹದೊಳಗೆ ಪ್ರವೇಶಿಸುತ್ತಿವೆ. ಹೀಗಾಗಿ ಮಕ್ಕಳು ಹಾಗೂ ವೃದ್ಧರ ಆರೋಗ್ಯವು ಕೆಟ್ಟುಹೋಗಿದೆ. ತಕ್ಷಣ ಇದನ್ನು ಬೇರೆಡೆ ಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿದರು.

2007ರಲ್ಲಿ ಸ್ಥಾಪನೆ:ಘನ ತ್ಯಾಜ್ಯವನ್ನು ತಂದು ಸುರಿಯುವುದು, ಸಂಸ್ಕರಿಸುವುದು, ಇದರಿಂದ ಉತ್ಪಾದನೆಯಾಗುವ ಗೊಬ್ಬರವನ್ನು ಮಾರಾಟ ಮಾಡುವುದು ಹಾಗೂ ಸಂಸ್ಕರಣೆಯಾಗದೆ ಉಳಿಯುವ ತ್ಯಾಜ್ಯವನ್ನು ನೆಲದಲ್ಲಿ ಅಗೆದು, ಮುಚ್ಚಲು ಎನ್‌ಜಿಒ ಸಂಸ್ಥೆಯ ಜೊತೆ 2007ರಲ್ಲಿ ಪಾಲಿಕೆಯು ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದವು 2024ರವರೆಗೆ ಇದೆ.

ತುರಮುರಿಯಲ್ಲಿ ಘಟಕ ಸ್ಥಾಪಿಸುವ ವೇಳೆ ಉತ್ಪಾದನೆಯಾಗುತ್ತಿದ್ದ ತ್ಯಾಜ್ಯದ ಪ್ರಮಾಣಕ್ಕೂ ಈಗ ಉತ್ಪಾದನೆಯಾಗುವ ತ್ಯಾಜ್ಯದ ಪ್ರಮಾಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ಪ್ರಮಾಣ ಇಂದು ಎರಡು ಪಟ್ಟು ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಸಂಸ್ಕರಣೆಯಾಗದೆ ಉಳಿಯುವ ತ್ಯಾಜ್ಯದ ಪ್ರಮಾಣವೂ ಹೆಚ್ಚಾಗಿದೆ. ಇದನ್ನು ಭೂಮಿಯಲ್ಲಿ ಹೂಳುವುದು ಸಮಸ್ಯೆಯಾಗಿದೆ.

ಗ್ರಾಮದ ಸುತ್ತಮುತ್ತ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಎಸೆದುಹೋಗುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ಜಾಗವನ್ನು 2018ರ ಡಿಸೆಂಬರ್‌ನಲ್ಲಿ ಅಂದಿನ ಆರೋಗ್ಯ ಸಚಿವ ಶಿವಾನಂದ ಪಾಟೀಲ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಅವರು ಮೂಗು ಮುಚ್ಚಿಕೊಂಡು ವೀಕ್ಷಿಸಿದ್ದರು.

ಮತ್ತೊಂದು ಘಟಕ ಸ್ಥಾಪನೆಗೆ ಯತ್ನ:ಕೇವಲ ತುರಮುರಿ ಘಟಕವೊಂದೇ ಸಾಕಾಗುವುದಿಲ್ಲವೆಂದು ಮತ್ತೊಂದು ಘಟಕ ಸ್ಥಾಪಿಸಲು ಪಾಲಿಕೆಯು ಹಲವು ಬಾರಿ ಪ್ರಯತ್ನಿಸಿದೆ. ಆದರೆ, ಸ್ಥಳೀಯರ ವಿರೋಧದಿಂದಾಗಿ ಇದುವರೆಗೆ ಸಾಕಾರಗೊಂಡಿಲ್ಲ. 2011ರಲ್ಲಿ ಮಚ್ಚೆ ಬಳಿಯ ನಾವಗೆ ಗ್ರಾಮದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ಸ್ಥಳ ಪರಿಶೀಲನೆಗೆಂದು ಅಧಿಕಾರಿಗಳು ಅಲ್ಲಿಗೆ ತೆರಳಿದ್ದಾಗ, ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಾವಗೆ ಜೊತೆ ಅಕ್ಕಪಕ್ಕದ ಸಂತಿ ಬಸ್ತವಾಡ ಹಾಗೂ ಕಾರ್ಲೆ ಗ್ರಾಮಸ್ಥರು ಕೂಡ ಕೈಜೋಡಿಸಿದರು. ಹೋರಾಟ ತೀವ್ರ ರೂಪ ಪಡೆಯುತ್ತಿದ್ದಂತೆ, ಪಾಲಿಕೆಯು ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಿತು. ತ್ಯಾಜ್ಯ ಘಟಕ ಸ್ಥಾಪಿಸುವ ನಿರ್ಧಾರವನ್ನು ಕೈಬಿಟ್ಟಿತ್ತು.

ಹೊಸ ಜಾಗಕ್ಕಾಗಿ ಹುಡುಕಾಟ:ಮತ್ತೊಂದು ತ್ಯಾಜ್ಯ ಘಟಕ ಸ್ಥಾಪಿಸಲು ಬೇಕಾದ ಜಾಗವನ್ನು ಪಾಲಿಕೆ ಅಧಿಕಾರಿಗಳು ವಿವಿಧ ಕಡೆ ಹುಡುಕಾಟ ನಡೆಸಿದ್ದಾರೆ. ವಿಸ್ತಾರವಾದ ಜಾಗ ಹಾಗೂ ಜನವಸತಿಯಿಂದ ದೂರ ಇರುವಂತಹ ಸ್ಥಳ ದೊರಕುತ್ತಿಲ್ಲ. ಕೆಲವು ಕಡೆ ಜಾಗವಿದ್ದರೆ, ಅಲ್ಲಿನ ಸ್ಥಳೀಯರು ಒಪ್ಪುತ್ತಿಲ್ಲ. ಜನಪ್ರತಿನಿಧಿಗಳ ಮೂಲಕ ಒತ್ತಡ ತಂದು, ಆ ಜಾಗವನ್ನು ಕೈಬಿಡುವಂತೆ ಮಾಡುತ್ತಿದ್ದಾರೆ. ಹೀಗಾಗಿ ಜಾಗ ಇದುವರೆಗೆ ಅಂತಿಮಗೊಂಡಿಲ್ಲ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT