ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮರು ಮೌಲ್ಯಮಾಪನ ಶುಲ್ಕ ಮರಳಿಸದಿರಲು ತೀರ್ಮಾನ

Published : 9 ಆಗಸ್ಟ್ 2024, 14:31 IST
Last Updated : 9 ಆಗಸ್ಟ್ 2024, 14:31 IST
ಫಾಲೋ ಮಾಡಿ
Comments

ಬೆಳಗಾವಿ: ವಿದ್ಯಾರ್ಥಿಗಳು ಗಳಿಸಿದ ಅಂಕಗಳಲ್ಲಿ ಬದಲಾವಣೆಯಾದರೂ ಇನ್ಮುಂದೆ ಮರು ಮೌಲ್ಯಮಾಪನದ ಶುಲ್ಕ ಮರುಪಾವತಿ ಮಾಡದಿರಲು ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ನಿರ್ಧರಿಸಿದೆ.

ವಿವಿಧ ಕೋರ್ಸ್‌ಗಳಿಗೆ ಸಂಬಂಧಿಸಿ, ವಿಟಿಯುನಲ್ಲಿ ಪ್ರತಿ ಸೆಮಿಸ್ಟರ್‌ನಲ್ಲಿ ಸುಮಾರು 12 ಲಕ್ಷ ಉತ್ತರ ಪತ್ರಿಕೆಗಳು ಮೌಲ್ಯಮಾಪನಕ್ಕೆ ಬರುತ್ತಿದ್ದವು. ಈ ಪೈಕಿ ಮರು ಮೌಲ್ಯಮಾಪನಕ್ಕೆ ಶೇ 6ರಷ್ಟು ಅರ್ಜಿ ಸಲ್ಲಿಕೆ ಆಗುತ್ತಿದ್ದವು. ಅದರಲ್ಲಿ ಶೇ 2ರಿಂದ 3ರಷ್ಟು ಉತ್ತರ ಪತ್ರಿಕೆಗಳಲ್ಲಿ ಅಂಕಗಳ ಬದಲಾವಣೆ ಆಗಿರುವುದು ಕಂಡುಬರುತ್ತಿತ್ತು. ಮರು ಮೌಲ್ಯಮಾಪನದಲ್ಲಿ ಶೇ 15ಕ್ಕಿಂತ ಅಧಿಕ ಅಂಕ ಬಂದಿದ್ದರೆ, ಮರು ಮೌಲ್ಯಮಾಪನ ಶುಲ್ಕ ಮರುಪಾವತಿಸಲಾಗುತ್ತಿತ್ತು.

ಆದರೆ, ಹೀಗೆ ಮರುಪಾವತಿಸಿದ್ದ ಶುಲ್ಕವನ್ನು ವಿದ್ಯಾರ್ಥಿಗಳು ಕ್ಲೇಮ್‌ ಮಾಡಿಕೊಳ್ಳದ್ದರಿಂದ ಆಯಾ ಎಂಜಿನಿಯರಿಂಗ್‌ ಕಾಲೇಜುಗಳ ಖಜಾನೆಯಲ್ಲೇ ಉಳಿದಿದೆ. ಹಾಗಾಗಿ ವಿದ್ಯಾರ್ಥಿಗಳ ಅಂಕಗಳಲ್ಲಿ ಬದಲಾವಣೆಯಾದರೂ, ಮರು ಮೌಲ್ಯಮಾಪನ ಶುಲ್ಕ ಮರುಪಾವತಿಸದಿರಲು ನಿರ್ಧರಿಸಲಾಗಿದೆ.

‘ರಾಜ್ಯದ ವಿವಿಧ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕ್ಲೇಮ್‌ ಮಾಡದ ಮೊತ್ತ ಎಷ್ಟು ಉಳಿದಿದೆ ಎಂದು ತಿಳಿಯಲು ಆಡಿಟ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆಡಿಟ್ ವರದಿ ಸಲ್ಲಿಕೆಯಾದ ನಂತರ,  ಆ ಹಣವನ್ನು ವಿಶ್ವವಿದ್ಯಾಲಯಕ್ಕೆ ವರ್ಗಾಯಿಸುವಂತೆ ಆಯಾ ಕಾಲೇಜಿನವರಿಗೆ ಪತ್ರ ಬರೆಯುತ್ತೇವೆ’ ಎಂದು ವಿಟಿಯು ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್‌.ಶ್ರೀನಿವಾಸ ‘ಪ‍್ರಜಾವಾಣಿ’ಗೆ ತಿಳಿಸಿದರು. 

ಶುಲ್ಕ ಕಡಿತ: ‘ಮರು ಮೌಲ್ಯಮಾಪನ ಸಮಯದಲ್ಲಿ ಅಂಕಗಳಲ್ಲಿ ಬದಲಾವಣೆಯಾದರೂ, ಹೆಚ್ಚಿನ ವಿದ್ಯಾರ್ಥಿಗಳು ಶುಲ್ಕವನ್ನು ಮರುಪಾವತಿ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಹಾಗಾಗಿ ಈ ವರ್ಷದಿಂದ ಅದನ್ನು ನೀಡದಿರಲು ತೀರ್ಮಾನಿಸಿದ್ದೇವೆ. ಸ್ನಾತಕೋತ್ತರ ಮತ್ತು ಪಿಎಚ್‌.ಡಿ ಕೋರ್ಸ್‌ಗಳ ಮರು ಮೌಲ್ಯಮಾಪನಕ್ಕೆ ವಿಧಿಸುತ್ತಿದ್ದ ಶುಲ್ಕ ಕಡಿತಗೊಳಿಸಿದ್ದೇವೆ’ ಎಂದು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್ ಹೇಳಿದರು.

‘ಸ್ನಾತಕೋತ್ತರ ಕೋರ್ಸ್‌ನ ಪ್ರತಿ ಉತ್ತರ ಪತ್ರಿಕೆಯ ಮರು ಮೌಲ್ಯಮಾಪನ ಶುಲ್ಕ ₹3 ಸಾವಿರ ಇತ್ತು. ಈಗ ಅದನ್ನು ₹2 ಸಾವಿರಕ್ಕೆ ಇಳಿಸಿದ್ದೇವೆ. ಪಿಎಚ್‌.ಡಿ ಕೋರ್ಸ್‌ನ ಉತ್ತರ ಪತ್ರಿಕೆಯ ಮರು ಮೌಲ್ಯಮಾಪನ ಶುಲ್ಕವೂ ₹10 ಸಾವಿರದಿಂದ ₹5 ಸಾವಿರಕ್ಕೆ ಇಳಿದಿದೆ’ ಎಂದು ವಿವರಿಸಿದರು.

‘ಸ್ನಾತಕ ಕೋರ್ಸ್‌ಗಳ ಮರು ಮೌಲ್ಯಮಾಪನ ಶುಲ್ಕವು ಪ್ರತಿ ಉತ್ತರ ಪತ್ರಿಕೆಗೆ ₹600 ಇತ್ತು. ಅಂಕಗಳಲ್ಲಿ ಬದಲಾವಣೆಯಾದರೆ, ₹250 ಮರು ಪಾವತಿಸಲಾಗುತ್ತಿತ್ತು. ಸ್ನಾತಕ ಕೋರ್ಸ್‌ನ ಮರು ಮೌಲ್ಯಮಾಪನ ಶುಲ್ಕ ಈಗಾಗಲೇ ಕಡಿಮೆ ಇರುವುದರಿಂದ ಅದನ್ನು ಇಳಿಸಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT