ಶುಕ್ರವಾರ, ಡಿಸೆಂಬರ್ 4, 2020
22 °C
ಆರ್‌ಟಿಐನಲ್ಲಿ ಕೊಟ್ಟ ಮಾಹಿತಿಯಿಂದ ಅರ್ಜಿದಾರರಿಗೇ ಅಚ್ಚರಿ

ವರ್ಷಕ್ಕೆ ₹ 41.07 ಕೋಟಿ ಕಾನೂನು ಶುಲ್ಕ ಕೊಟ್ಟ ವಿಟಿಯು!

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ವಿಶ್ವವಿದ್ಯಾಲಯವೊಂದು ತನ್ನ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ವಾದ ಮಂಡಿಸುವ ವಕೀಲರಿಗೆ ವಾರ್ಷಿಕವಾಗಿ ಎಷ್ಟು ಶುಲ್ಕ ಕೊಡಬಹುದು ಅಥವಾ ಖರ್ಚು ಮಾಡಬಹುದು? ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ವು 2019–20ನೇ ಸಾಲಿನಲ್ಲಿ ಬರೋಬ್ಬರಿ ₹ 41.07 ಕೋಟಿ ವ್ಯಯಿಸಿರುವುದು ಹುಬ್ಬೇರುವಂತೆ ಮಾಡಿದೆ.

ಇಲ್ಲಿನ ವಕೀಲ ಸುರೇಂದ್ರ ಎಸ್. ಉಗಾರೆ ಅವರು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಲ್ಲಿ ಸಲ್ಲಿಸಿದ್ದ ಈಚೆಗೆ ಮೇಲ್ಮನವಿಗೆ ವಿಟಿಯು ನೀಡಿರುವ ಮಾಹಿತಿ ನೋಡಿ ಸ್ವಂತಃ ಅರ್ಜಿದಾರರೇ ಬೆಚ್ಚಿ ಬಿದ್ದಿದ್ದಾರೆ.

‘ಲಭ್ಯವಿರುವ ದಾಖಲೆಗಳನ್ನು ಹಾಗೂ ಅರ್ಜಿದಾರರು ಸಲ್ಲಿಸಿದ ಮೇಲ್ಮನವಿಯನ್ನು ಈ ಪ್ರಾಧಿಕಾರವು ಪರಿಶೀಲಿಸಿದೆ. ವಿವರಗಳನ್ನು ಪರಿಶೀಲಿಸಿದ ನಂತರ ಮಾಹಿತಿ ಒದಗಿಸಲಾಗಿದೆ’ ಎಂದು ಕುಲಪತಿಯ ಕಾರ್ಯದರ್ಶಿ ಅರ್ಜಿದಾರರಿಗೆ ಪತ್ರ ಕಳುಹಿಸಿದ್ದಾರೆ. ಪ್ರತಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಯಾವ್ಯಾವ ವರ್ಷದಲ್ಲಿ ಎಷ್ಟೆಷ್ಟು?: ವಿಶ್ವವಿದ್ಯಾಲಯದಿಂದ ಒದಗಿಸಿರುವ ಮಾಹಿತಿ ಪ್ರಕಾರ, ವೃತ್ತಿಪರ ಹಾಗೂ ಕಾನೂನು ಶುಲ್ಕವಾಗಿ ಕೋಟ್ಯಂತರ ರೂಪಾಯಿ ಕೊಟ್ಟಿರುವುದು ಬಹಿರಂಗಗೊಂಡಿದೆ. 2013–14ರಲ್ಲಿ ₹ 67.91 ಲಕ್ಷ, 2014–15ರಲ್ಲಿ ₹ 66.20 ಲಕ್ಷ, 2015–16ರಲ್ಲಿ ₹ 1 ಕೋಟಿ, 2016–17ರಲ್ಲಿ ₹ 1.06 ಕೋಟಿ, 2017–18ರಲ್ಲಿ ₹ 72.90 ಲಕ್ಷ, 2018–19ರಲ್ಲಿ ₹ 73.36 ಲಕ್ಷ ಪಾವತಿಸಲಾಗಿದೆ. 2020–21ನೇ ಸಾಲಿನ ಆರ್ಥಿಕ ವರ್ಷ  ಪ್ರಗತಿಯಲ್ಲಿರುವುದರಿಂದ ಅಂಕಿ–ಅಂಶ ನೀಡಲಾಗಿಲ್ಲ’ ಎಂದು ತಿಳಿಸಲಾಗಿದೆ.

‘ವಿಶ್ವವಿದ್ಯಾಲಯ ನೀಡಿರುವ ಮಾಹಿತಿ ನೋಡಿ ಒಂದು ಕ್ಷಣ ದಿಗ್ಭ್ರಮೆಯಾಯಿತು. ಒಂದು ವರ್ಷದಲ್ಲಿ ₹ 41 ಕೋಟಿ ಕಾನೂನು ಶುಲ್ಕ ಕಟ್ಟುವಂತಹ ವ್ಯಾಜ್ಯವಿದ್ದರೆ ಅದರ ಸ್ವರೂಪ ಎಂಥದು!. ಎಷ್ಟು ಮಂದಿ ವಕೀಲರಿಗೆ ಹಣ ನೀಡಲಾಗಿದೆ. ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆಯೇ ಎಂಬಿತ್ಯಾದಿ ಪ್ರಶ್ನೆಗಳು ಮೂಡುತ್ತಿವೆ’ ಎಂದು ವಕೀಲ ಸುರೇಂದ್ರ ತಿಳಿಸಿದರು.

ಮೇಲ್ಮನವಿ ಅರ್ಜಿ: ‘2015–16 ಹಾಗೂ 2016–17ನೇ ಸಾಲಿನ ಆಡಿಟ್ ವರದಿ ಸಿಕ್ಕಿತ್ತು. ಅದರಲ್ಲಿ ಕಾನೂನು ಶುಲ್ಕವಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದು ನೋಡಿ  ಅಚ್ಚರಿಯಾಗಿತ್ತು. ಹೀಗಾಗಿ, ಯಾವ್ಯಾವ ವರ್ಷದಲ್ಲಿ ಎಷ್ಟೆಷ್ಟು ಖರ್ಚಾಗಿದೆ ಎನ್ನುವುದನ್ನು ತಿಳಿಯುವುದಕ್ಕೋಸ್ಕರ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದೆ. ಮೊದಲ  ಅರ್ಜಿಗೆ ಪ್ರತಿಕ್ರಿಯೆ ಬಂದಿರಲಿಲ್ಲ. ಮೇಲ್ಮನವಿ ಸಲ್ಲಿಸಿದ ಬಳಿಕ ವಿಶ್ವವಿದ್ಯಾಲಯವು ಮಾಹಿತಿ ಕೊಟ್ಟಿದ್ದೆ. ಬಂದಿರುವ ಮಾಹಿತಿ ನೋಡಿ ಮತ್ತಷ್ಟು ಅಚ್ಚರಿಯಾಯಿತು. ಮೇಲ್ಮನವಿ ಅರ್ಜಿ ಇದಾಗಿರುವುದರಿಂದ ಅಂಕಿ–ಅಂಶಗಳು ತಪ್ಪಾಗಿರುವ ಸಾಧ್ಯತೆ ಕಡಿಮೆ’ ಎನ್ನುತ್ತಾರೆ ಅವರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕುಲಪತಿ ಪ್ರೊ.ಕರಿಸಿದ್ದಪ್ಪ, ‘ಕಾನೂನು ಶುಲ್ಕವಾಗಿ ವರ್ಷಕ್ಕೆ ಅಷ್ಟೊಂದು ಕೊಡುವುದಕ್ಕೆ ಸಾಧ್ಯವೇ ಇಲ್ಲ. ಕುಲಪತಿಯ ಕಾರ್ಯದರ್ಶಿ ಈ ರೀತಿಯ ಮಾಹಿತಿ ಕೊಡಲು ಬರುವುದಿಲ್ಲ. ಅದು ಫೋರ್ಜರಿ ಮಾಡಿದ್ದೂ ಆಗಿರಬಹುದು. ಅದೇನೇ ಇದ್ದರೂ ವಿಚಾರಿಸುತ್ತೇನೆ’ ಎಂದು ಹೇಳಿದರು.

***

ವಿಟಿಯು ವರ್ಷಕ್ಕೆ ₹ 41 ಕೋಟಿಯನ್ನು ಯಾವ್ಯಾವ ವ್ಯಾಜ್ಯಗಳಿಗೆ, ಎಷ್ಟು ಮಂದಿ ವಕೀಲರಿಗೆ ನೀಡಿದೆ ಎಂಬಿತ್ಯಾದಿ ವಿವರವಾದ ಮಾಹಿತಿ ಕೋರಿ ಆರ್‌ಟಿಐನಲ್ಲೇ ಮತ್ತೊಂದು ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇನೆ
- ಸುರೇಂದ್ರ ಉಗಾರ, ವಕೀಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು