‘ವಿಟಿಯು ವಿಭಜಿಸುವುದಾದರೆ ರಾಜ್ಯವನ್ನೇ ವಿಭಜಿಸಿ; ಜನರ ತಾಳ್ಮೆ ಪರೀಕ್ಷಿಸಬೇಡಿ’

7

‘ವಿಟಿಯು ವಿಭಜಿಸುವುದಾದರೆ ರಾಜ್ಯವನ್ನೇ ವಿಭಜಿಸಿ; ಜನರ ತಾಳ್ಮೆ ಪರೀಕ್ಷಿಸಬೇಡಿ’

Published:
Updated:
Prajavani

ಬೆಳಗಾವಿ: ಇಲ್ಲಿನ ವಿಟಿಯು ವಿಭಜಿಸುವ ರಾಜ್ಯ ಸರ್ಕಾರದ ಪ್ರಸ್ತಾವದ ವಿರುದ್ಧ ಹೋರಾಟ ನಡೆಸಲು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮತ್ತು ಮುಖಂಡರು ನಿರ್ಧರಿಸಿದರು. ‘ವಿಟಿಯು ವಿಭಜಿಸುವುದಾದರೆ ರಾಜ್ಯವನ್ನೇ ವಿಭಜಿಸಿ; ಈ ಭಾಗದ ಜನರ ತಾಳ್ಮೆ ಪರೀಕ್ಷಿಸಬೇಡಿ’ ಎಂಬ ಆಕ್ರೋಶದ ಮಾತುಗಳು ವ್ಯಕ್ತವಾದವು.

ವಿಟಿಯು ವಿಭಜಿಸಿ, ಹಾಸನದಲ್ಲಿ ಮತ್ತೊಂದು ವಿಶ್ವವಿದ್ಯಾಲಯ ಸ್ಥಾಪಿಸುವ ಸರ್ಕಾರದ ಕ್ರಮದ ವಿರುದ್ಧ ಹೋರಾಟ ರೂಪಿಸಲು ಫೌಂಡ್ರಿ ಕ್ಲಸ್ಟರ್‌ನಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

‘ವಿಟಿಯು ವಿಭಜನೆಗೆ ಸಮರ್ಥನೆಗಳಿಲ್ಲ. ಇದೊಂದು ರಾಜಕೀಯ ನಿರ್ಧಾರವೇ ಹೊರತು ಶೈಕ್ಷಣಿಕ ಬೆಳವಣಿಗೆ ದೃಷ್ಟಿಯಿಂದ ಪೂರಕವಾಗಿಲ್ಲ. ಹೀಗಾಗಿ, ಉತ್ತರಕರ್ನಾಟಕದವರು ದನಿ ಎತ್ತಬೇಕು ಹಾಗೂ ಪ್ರತಿಭಟಿಸಬೇಕು’ ಎಂದು ತಿಳಿಸಲಾಯಿತು. ಕಾಲೇಜುಗಳ ಬಂದ್‌ಗೆ ಕರೆ ನೀಡುವ ಕುರಿತು ಚರ್ಚಿಸಲಾಯಿತು.

ಮಠಾಧೀಶರನ್ನು:

ಪ್ರಸ್ತಾವ ಕೈಬಿಡುವವರೆಗೂ ಹೋರಾಟದಿಂದ ಹಿಂದೆ ಸರಿಯದಿರಲು ಹಾಗೂ ಮಠಾಧೀಶರನ್ನೂ ಒಳಗೊಳಿಸಿಕೊಳ್ಳಲು ತೀರ್ಮಾನಿಸಲಾಯಿತು.

ನಿರ್ಣಯ ಮಂಡಿಸಿದ ಫೌಂಡ್ರಿ ಕ್ಲಸ್ಟರ್ ಅಧ್ಯಕ್ಷ ರಾಮ್ ಭಂಡಾರೆ, ‘ಒಡೆಯುವುದಾದರೆ ರಾಜ್ಯವನ್ನೇ ಒಡೆಯಿರಿ. ನಿರಂತರ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಶೀಘ್ರವೇ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು. ಮಂಗಳವಾರ (ಫೆ.12) ಬೆಳಿಗ್ಗೆ 11.30ಕ್ಕೆ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಕಾಲೇಜುಗಳ ವಿದ್ಯಾರ್ಥಿಗಳ ಸಂಘಟನೆಗಳ, ಆಡಳಿತ ಮಂಡಳಿಗಳ ಪ್ರತಿನಿಧಿಗಳ, ಮಠಾಧೀಶರ, ಕನ್ನಡ ಸಂಘಟನೆಗಳ ಪ್ರಮುಖರ ಸಭೆ ಕರೆದು ಮುಂದಿನ ಹೋರಾಟದ ರೂಪರೇಷೆ ಸಿದ್ಧಪಡಿಸಲಾಗುವುದು’ ಎಂದು ತಿಳಿಸಿದರು.

ವೃತ್ತಿಪರರ ವೇದಿಕೆ ಅಧ್ಯಕ್ಷ ಬಿ.ಎಸ್. ಪಾಟೀಲ, ‘ವಿಟಿಯು ವಿಭಜನೆ ನಿರ್ಧಾರ ಉತ್ತರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯದ ಮುಂದುವರಿದ ಭಾಗವಾಗಿದೆ. ಇದನ್ನು ಸಹಿಸಲಾಗದು’ ಎಂದರು.

‘ಬಜೆಟ್‌ನಲ್ಲಿ ಉತ್ತರ ಕರ್ನಾಟಕ್ಕೆ ದೊಡ್ಡ ಯೋಜನೆಗಳ ಘೋಷಣೆ ನಿರೀಕ್ಷೆಯಲ್ಲಿದ್ದಾಗ ವಿಟಿಯು ವಿಭಜಿಸುವ ಪ್ರಸ್ತಾವ ಈ ಭಾಗದ ಜನರಿಗೆ ಆಘಾತ ಉಂಟು ಮಾಡಿದೆ. ಸುಮ್ಮನಿದ್ದರೆ ಶೋಷಣೆ ಮುಂದುವರಿಯಲಿದೆ’ ಎಂದು ಪತ್ರಕರ್ತ ಎಂ.ಕೆ. ಹೆಗಡೆ ಹೇಳಿದರು.

ಅಭಿಪ್ರಾಯ ಕೇಳಿಲ್ಲ:

ವಿಟಿಯು ಕಾರ್ಯನಿರ್ವಾಹಕ ಮಂಡಳಿ ಸದಸ್ಯ ವಿಜಯ ಕುಚನೂರೆ, ‘ವಿಶ್ವವಿದ್ಯಾಲಯದ ಅಭಿಪ್ರಾಯವನ್ನೇ ಕೇಳದೆ ಸರ್ಕಾರವು ವಿಭಜಿಸುವ ನಿರ್ಧಾರ ತೆಗೆದುಕೊಂಡಿದೆ’ ಎಂದು ಕಿಡಿಕಾರಿದರು.

ವಕೀಲ ರವಿರಾಜ ಪಾಟೀಲ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್ ಜವಳಿ, ಕ್ರೆಡಾಯ್ ಅಧ್ಯಕ್ಷ ಕ್ವಾಯೀಸ್ ನೂರಾನಿ, ಉದ್ಯಮಿ ರೋಹಿತ್ ದೇಶಪಾಂಡೆ, ನಿಯತಿ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಮಾತನಾಡಿದರು.

ಚೆಂಬರ್ ಆಫ್ ಕಾಮರ್ಸ್ ಚೇರಮನ್ ಮಹೇಶ ಬಾಗಿ, ಪರಾಗ ಭಂಡಾರೆ, ಶಿವಕುಮಾರ ಖಡಬಡಿ, ಉದ್ಯಮಿ ವೈಭವ ವೆರ್ಣೇಕರ್, ಕ್ರೆಡಾಯ್‌ ರಾಜ್ಯ ಉಪಾಧ್ಯಕ್ಷ ಚೈತನ್ಯ ಕುಲಕರ್ಣಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !