ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ: ಕಲ್ಲಂಗಡಿ ಬೆಳೆದು ಖುಷಿ ಕಂಡ ಯುವರೈತ

ಬಿಇ, ಎಂಬಿಎ ಪದವಿ ಮಾಡಿ ಕೃಷಿ ಮಾಡುತ್ತಿರುವ ಓಂಕಾರ ಕುಲಕರ್ಣಿ
Published 26 ಜನವರಿ 2024, 5:24 IST
Last Updated 26 ಜನವರಿ 2024, 5:24 IST
ಅಕ್ಷರ ಗಾತ್ರ

ಮೂಡಲಗಿ: ಬಿಇ ಸಿವಿಲ್‌ ಮತ್ತು ಎಂಬಿಎ ಪದವಿಗಳನ್ನು ಓದಿಕೊಂಡಿರುವ ತಾಲ್ಲೂಕಿನ ಹಳ್ಳೂರ ಗ್ರಾಮದ ಓಂಕಾರ ಉದಯ ಕುಲಕರ್ಣಿ ಕಾರ್ಪೋರೇಟ್‌ ಕಂಪನಿಗಳಲ್ಲಿ ಕೆಲಸ ಹುಡಕಿಕೊಂಡು ಹೋಗದೆ ತಮ್ಮದೆ 2 ಎಕರೆ ಕೃಷಿ ಭೂಮಿಯಲ್ಲಿ ಕಲ್ಲಂಗಡಿ ಹಣ್ಣು ಬೆಳೆದು ಕೇವಲ ಎರಡೇ ತಿಂಗಳದಲ್ಲಿ ₹5 ಲಕ್ಷ ಲಾಭ ಮಾಡಿಕೊಂಡ ಯಶೋಗಾಥೆ ಇಲ್ಲಿದೆ.

ಹಳ್ಳೂರ ಗ್ರಾಮದ ಕಪ್ಪಲಗುದ್ದಿ ಹದ್ದಿಯಲ್ಲಿರುವ ಓಂಕಾರ ಕುಲಕರ್ಣಿಯ ತೋಟದಲ್ಲಿ ಕಾಲಿಡುತ್ತಿದ್ದಂತೆ ದಪ್ಪಣೆಯ ಕಲ್ಲಂಗಡಿ ಕಾಯಿಗಳ ಹಾಸು ಕಣ್ಣಿಗೆ ರಾಚುತ್ತವೆ. ಒಂದೊಂದು ಬಳ್ಳಿಗೆ 2ರಿಂದ 3 ಕಲ್ಲಂಗಡಿಯ ಕಾಯಿಗಳು ಇದ್ದು, ಅಂದಾಜು ನಾಲ್ಕೂವರೆ ಕೆಜಿಯಿಂದ 5 ಕೆಜೆಯವರೆಗೆ ತೂಗುತ್ತವೆ.

‘ಎರಡು ತಿಂಗಳ ಹಿಂದೆ ಮೆಲೋಡಿ ತಳಿಯ ಕಲ್ಲಂಗಡಿ ಸಸಿಗಳನ್ನು ₹3ರಂತೆ ಒಟ್ಟು 13 ಸಾವಿರ ಸಸಿಗಳನ್ನು ತಂದು ಎರಡು ಎಕರೆ ಭೂಮಿಯಲ್ಲಿ ನಾಟಿ ಮಾಡಿದ್ದೆ. ನೋಡು ನೋಡುತ್ತಿದ್ದಂತೆ ಕೇವಲ ಎರಡೇ ತಿಂಗಳದಲ್ಲಿ ಬಂಪರ್‌ ಇಳುವರಿ ಬಂದಿದೆ. ಸದ್ಯ ಕಲ್ಲಂಗಡಿಯು ಮಾರುಕಟ್ಟೆಗೆ ಹೊರಟಿದೆ’ ಎಂದು ಓಂಕಾರ ತನ್ನ ಖುಷಿಯನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ಸಿದ್ಧತೆ ಹೇಗೆ: ಭೂಮಿಯನ್ನು ಉಳುಮೆ ಮಾಡಿ ಎಕರೆಗೆ ನಾಲ್ಕು ಟ್ರಾಲಿಯಷ್ಟು ತಿಪ್ಪೆ ಗೊಬ್ಬರ ಮತ್ತು ಪೋಷಕಾಂಶಗಳನ್ನು ಹಾಕಿರುವರು. ಮಲ್ಚಿಂಗ್ ನಾಟಿ ಪದ್ಧತಿಯಲ್ಲಿ ಒಂದು ಅಡಿ ಅಂತರದಲ್ಲಿ ನರ್ಸರಿಯಿಂದ ತಂದಿರುವ ಸಸಿಗಳನ್ನು ನೆಟ್ಟಿದ್ದಾರೆ. ಹನಿ ನೀರಾವರಿಯ ಮೂಲಕ ಸಸಿಗಳಿಗೆ ನೀರೂಣಿಸಿದ್ದಾರೆ.

‘ಕೇವಲ 30ರಿಂದ 35 ದಿನಗಳಲ್ಲಿ ಹೂವು ಮತ್ತು ಮಿಡಿ ಬಿಡುತ್ತವೆ. ಪ್ಲಾಸ್ಟಿಕ್‌ ಮಲ್ಚಿಂಗ್‌ ಪ್ರಯೋಗದಿಂದ ಕೀಟ ಬಾಧೆ ಮತ್ತು ಕಳೆ ಸಮಸ್ಯೆ ಕಡಿಮೆಯಾಗಿ ಅಧಿಕ ಇಳುವರಿ ದೊರೆಯತ್ತದೆ’ ಎಂದು ಓಂಕಾರ ಹೇಳಿದರು.

‘ಉಳುಮೆ, ಗೊಬ್ಬರ, ಪೋಷಕಾಂಶಗಳು, ಮಲ್ಚಿಂಗ್‌ ಪದ್ಧತಿ ಮತ್ತು ಕೀಟನಾಶಕ ದ್ರಾವಣ, ಕೂಲಿ ಆಳು ಖರ್ಚು ಹೀಗೆ ಎರಡು ಎಕರೆ ಸೇರಿ ಅಂದಾಜು ₹1.50 ಲಕ್ಷ ಖರ್ಚು ಬಂದಿದೆ. ಸದ್ಯ ಎಕರೆಗೆ 25 ಟನ್‌ ಮೇಲ್ಪಟ್ಟು ಕಲ್ಲಂಗಡಿ ಇಳುವರಿ ಬಂದಿದ್ದು, ಪ್ರತಿ ಟನ್‌ಗೆ ₹14,500 ದರವಿರುವುದರಿಂದ ಎಕರೆಗೆ ಖರ್ಚು ತೆಗೆದು ₹2.80 ಲಕ್ಷ ಆದಾಯಕ್ಕೆ ಕೊರತೆ ಇಲ್ಲ’ ಎನ್ನುತಾರೆ.

‘ಕೃಷಿಯಲ್ಲಿ ಯಶಸ್ಸು ಕಾಣುವಲ್ಲಿ ತಂದೆ ಉದಯ ಮತ್ತು ತಾಯಿ ಸಂಪದಾ ಇವರ ಪ್ರೇರಣೆ ಇದೆ. ಕಲ್ಲಂಗಡಿ ತೆಗೆದು ಫೆಬ್ರುವರಿ ಪ್ರಾರಂಭದಲ್ಲಿ ಸೌತೆ ಹಾಕುತ್ತಿದ್ದು ಅದು ಕೂಡ ಎರಡು ತಿಂಗಳ ಬೆಳೆಯಾಗಿದ್ದು ಅದರಿಂದಲೂ ಆದಾಯ ಬರುತ್ತದೆ. ಎರಡು ತಿಂಗಳ ನಂತರ ಅದೇ ಭೂಮಿಯಲ್ಲಿ ಅರಿಸಿನ ನಾಟಿ ಮಾಡುತ್ತೇನೆ. ಹೊಲವನ್ನು ಖಾಲಿ ಇಡದೆ, ವರ್ಷವಿಡಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದೇನೆ’ ಎನ್ನುವ ಓಂಕಾರ, ಉಳಿದ ಹತ್ತಾರು ಎಕರೆ ಭೂಮಿಯಲ್ಲಿ ಕಬ್ಬು, ಅರಿಸಿನ ಸೇರಿದಂತೆ ಮಿಶ್ರ ಬೇಸಾಯ ಮಾಡುವ ಮೂಲಕ ಯುವಕರಿಗೆ ಪ್ರೇರಣೆಯಾಗಿದ್ದಾರೆ. ಸಂಪರ್ಕಕ್ಕೆ ಮೊಬೈಲ್‌ ಫೋನ್‌ 9731177333.

ಉನ್ನತ ಶಿಕ್ಷಣದ ಜ್ಞಾನವನ್ನು ಕೃಷಿಯಲ್ಲಿ ಬಳಸಿದರೆ ದೊಡ್ಡ ಸಾಧನೆ ಮಾಡಬಹುದು. ತಿಂಗಳ ಸಂಬಳಕ್ಕಾಗಿ ಅಲೆಯುವುದಕ್ಕಿಂತ ಸ್ವಂತ ಹೊಲದಲ್ಲಿ ಬಂಗಾರ ತೆಗೆಯಬಹುದು
-ಓಂಕಾರ ಕುಲಕರ್ಣಿ ಯುವ ರೈತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT