ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಗ ಮಾಡಿದವರೆಲ್ಲರಿಗೂ ಸಚಿವ ಸ್ಥಾನ ಸಿಗಬೇಕು: ರಮೇಶ ಜಾರಕಿಹೊಳಿ

Last Updated 30 ನವೆಂಬರ್ 2020, 9:25 IST
ಅಕ್ಷರ ಗಾತ್ರ

ಬೆಳಗಾವಿ: ‘ಶಾಸಕ ಸ್ಥಾನ ತ್ಯಾಗ ಮಾಡಿ ಬಿಜೆಪಿಗೆ ಬಂದಿರುವ ಎಲ್ಲ 17 ಮಂದಿಗೂ ಸಚಿವ ಸ್ಥಾನ ನೀಡಬೇಕು. ಅಂತೆಯೇ, ಸರ್ಕಾರ ರಚನೆಗೆ ಶ್ರಮಿಸಿದ ಸಿ.ಪಿ. ಯೋಗೀಶ್ವರ್ ಮೊದಲಾದವರನ್ನೂ ಪರಿಗಣಿಸಬೇಕು’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಶ್ರೀಮಂತ ಪಾಟೀಲ ಅವರನ್ನು ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ. ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರನ್ನು ಮುಂದಿನ ದಿನಗಳಲ್ಲಿ ಪರಿಗಣಿಸುತ್ತಾರೆ. ಈಗಿಲ್ಲ’ ಎಂದು ತಿಳಿಸಿದರು.

‘ಸಂಪುಟ ವಿಸ್ತರಣೆ ಆಗಬೇಕು ಎನ್ನುವುದು ನಮ್ಮ ಬೇಡಿಕೆ. ಗ್ರಾಮ ‍ಪಂಚಾಯಿತಿ ಚುನಾವಣೆ ಘೋಷಣೆ ಆಗಿರುವುದರಿಂದ ನೀತಿಸಂಹಿತೆ ಕಾರಣದಿಂದಾಗಿ ಒಂದು ತಿಂಗಳು ಮುಂದೂಡಿಕೆ ಆಗಲಿದೆ. ಮುಖ್ಯಮಂತ್ರಿ ಏನಾದರೂ ವಿಶೇಷ ಅನುಮತಿ ಪಡೆದು, ವಿಸ್ತರಣೆ ಮಾಡುತ್ತಾರೆಯೇ ನೋಡಬೇಕು’ ಎಂದರು.

‘ಸೋತವರ ಪರ ಲಾಬಿ ನಡೆಸುವವರು ತ್ಯಾಗ ಮಾಡಲಿ’ ಎಂಬ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ತ್ಯಾಗ ಮಾಡುವಂಥ ಸಂದರ್ಭ ಬಂದರೆ ಮಾಡುತ್ತೇನೆ. ಅವರು ನನಗೇ ಹೇಳಿದ್ದಾರೆಂದು ಏಕೆ ಭಾವಿಸುತ್ತೀರಿ? ಬೇರೆ ಅರ್ಥದಲ್ಲಿ ಮಾತನಾಡಿರಬಹುದು’ ಎಂದು ತಿಳಿಸಿದರು.

‘ಸಿ.‍ಪಿ. ಯೋಗೀಶ್ವರ್‌ಗೆ ಸಚಿವ ಸ್ಥಾನ ಸಿಗಬೇಕು. ಈಗಲೂ ನನ್ನದು ಇದೇ ಆಗ್ರಹವಾಗಿದೆ’ ಎಂದು ಪರೋಕ್ಷವಾಗಿ ರೇಣುಕಾಚಾರ್ಯ ಅವರಿಗೆ ಟಾಂಗ್ ನೀಡಿದರು.

‘ಸೋತವರಿಗೆ ಸಚಿವ ಸ್ಥಾನ ನೀಡಬಾರದು’ ಎಂದು ರೇಣುಕಾಚಾರ್ಯ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ, ‘ಅವರ ಆಗ್ರಹವೂ ಸರಿಯಾಗಿದೆ. ನಮ್ಮದೂ ಸರಿ ಇದೆ. ಇದೆಲ್ಲವನ್ನೂ ವರಿಷ್ಠರು ಬಗೆಹರಿಸುತ್ತಾರೆ’ ಎಂದು ಉತ್ತರಿಸಿದರು.

‘ಬಿ.ಎಸ್. ಯಡಿಯೂರಪ್ಪ ಅಧಿಕಾರದ ಅವಧಿ ಪೂರ್ಣಗೊಳಿಸುತ್ತಾರೆ. ಮುಂದಿನ ಚುನಾವಣೆಯನ್ನೂ ಅವರ ನೇತೃತ್ವದಲ್ಲೆ ನಡೆಸುತ್ತೇವೆ. ಇಲಾಖೆಯ ಯೋಜನೆಗಳ ವಿಷಯವಾಗಿ ದೆಹಲಿಗೆ ಹೋಗುತ್ತಿರುತ್ತೇನೆ. ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನೂ ಭೇಟಿಯಾಗಿದ್ದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಮುಖ್ಯಮಂತ್ರಿ ಬದಲಾವಣೆ, ಮೂಲ–ವಲಸಿಗರು ಎನ್ನುವುದು ಮಾಧ್ಯಮದ ಸೃಷ್ಟಿಯಷ್ಟೆ’ ಎಂದು ಪ್ರತಿಕ್ರಿಯಿಸಿದರು.

‘ನನ್ನ ಮೇಲೆ ಶಾಸಕರಿಗೆ ಪ್ರೀತಿ ಇದೆ. ಹೀಗಾಗಿ, ಭೇಟಿಯಾಗಲು ನಮ್ಮ ಮನೆಗೆ ಬರುತ್ತಾರೆ. ಇದರಲ್ಲಿ ವಿಶೇಷತೆ ಏನಿಲ್ಲ. ನಾನೇನು ಮಹಾನಾಯಕನಲ್ಲ. ನನ್ನ ಮನೆ ಪವರ್‌ ಸೆಂಟರ್‌ ಕೂಡ ಅಲ್ಲ. ಇದೆಲ್ಲವನ್ನೂ ನೀವು (ಮಾಧ್ಯಮದವರು) ಸೃಷ್ಟಿಸುತ್ತಿದ್ದೀರಿ’ ಎಂದರು.

‘ರಮೇಶ ಜಾರಕಿಹೊಳಿ ಮುಖ್ಯಮಂತ್ರಿ ಆಗುತ್ತಾರಾ’ ಎಂಬ ಪ್ರಶ್ನೆಗೆ, ‘ಬೆಂಕಿ ಹಚ್ಚಬೇಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT