ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಅಂಚೆ ಇಲಾಖೆಯಿಂದ ರಾಖಿ ಸೇವೆ

Last Updated 10 ಆಗಸ್ಟ್ 2021, 7:21 IST
ಅಕ್ಷರ ಗಾತ್ರ

ಬೆಳಗಾವಿ: ದೂರದಲ್ಲಿರುವ ಅಣ್ಣ–ತಮ್ಮಂದಿರಿಗೆ ಮತ್ತು ಲಡಾಕ್‌ನಲ್ಲಿ ದೇಶದ ಗಡಿ ಕಾಯುತ್ತಿರುವ ಸೈನಿಕರಿಗೆ ಈಗ ರಾಖಿಯನ್ನು ಮನೆಯಲ್ಲಿ ಕುಳಿತೇ ಕಳುಹಿಸಬಹುದು. ₹ 100ರಲ್ಲಿ (ನೀವು ಆಯ್ಕೆ ಮಾಡಿದ ರಾಖಿ, ಕವರ್ ಮತ್ತು ನೀವು ಬರೆದ ಸಂದೇಶ ಎಲ್ಲವೂ ಸೇರಿ) ಈ ಸೇವೆ ನೀಡಲು ಅಂಚೆ ಇಲಾಖೆಯು ಕಾರ್ಯಕ್ರಮ ರೂಪಿಸಿದೆ.

ಆ.22ರಂದು ರಕ್ಷಾ ಬಂಧನ ಆಚರಣೆ ಇದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಈ ಉಪಕ್ರಮ ಆರಂಭಿಸಿದೆ. ಈ ಬಾರಿ ಹೆಣ್ಣು ಮಕ್ಕಳು ರಾಖಿ ತರುವುದಕ್ಕಾಗಿ ಅಂಗಡಿಗಳಿಗೇ ಹೋಗಬೇಕಿಲ್ಲ. ಅಂಚೆ ಇಲಾಖೆ ಪ್ರಾರಂಭಿಸಿರುವ ಆನ್‌ಲೈನ್‌ ಸೇವೆಯಲ್ಲಿ ಬುಕ್ ಮಾಡಿದರೆ ಅಂಚೆಯಣ್ಣಂದಿರೇ ರಾಖಿಗಳನ್ನು ಆಯಾ ವಿಳಾಸಕ್ಕೆ ಕಳುಹಿಸುತ್ತಾರೆ. ಈ ವಿಶೇಷ ಸೇವೆಯು ಆ.6ರಿಂದ ಶುರುವಾಗಿದ್ದು, ಆ. 16ರವರೆಗೆ ಬುಕ್ ಮಾಡಲು ಅವಕಾಶವಿದೆ. ರಕ್ಷಾಬಂಧನದ ದಿನದೊಳಗೆ ರಾಖಿಯು ನಿಗದಿತ ವಿಳಾಸ ತಲುಪುವಂತೆ ಇಲಾಖೆಯು ವ್ಯವಸ್ಥೆ ಮಾಡಿದೆ ಎಂದು ಇಲ್ಲಿನ ಕೇಂದ್ರ ಅಂಚೆ ಕಚೇರಿಯ ಸೂಪರಿಂಟೆಂಡೆಂಟ್ ಎಚ್‌.ಬಿ. ಹಸಬಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇಲಾಖೆಯ ಜಾಲತಾಣದ ಮೂಲಕ (https://karnatakapost.gov.in) ಸೇವೆ ಪಡೆಯಬಹುದು. ರಕ್ಷಾ ಬಂಧನ/ ರಾಖಿ ಪೋಸ್ಟ್‌ ಎಂದು ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲೂ ಕಾಣಿಸುವ ಐಕಾನ್ ಕ್ಲಿಕ್ ಮಾಡಿ, ಖರೀದಿಸುವವರ ವಿವರ ತುಂಬಬೇಕು. ನಂತರ ಆರು ಬಗೆಯ ರಾಖಿಗಳಲ್ಲಿ ಇಷ್ಟವಾಗಿದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. ಮತ್ತೊಂದು ಕಾಲಂನಲ್ಲಿರುವ ಸಂದೇಶದ ಕವರ್ ಆಯ್ಕೆ ಮಾಡಿಕೊಳ್ಳಬೇಕು. ಮೂರು ಬಗೆಯ ಸಂದೇಶಗಳಿದ್ದು, ಆಯ್ಕೆಗೆ ಅವಕಾಶವಿದೆ. ಬಳಿಕ ರಾಖಿ ಸ್ವೀಕರಿಸುವವರ ವಿವರ ತುಂಬಬೇಕು. ಕೊನೆಯಲ್ಲಿ ಹಣ ಪಾವತಿ ವಿವರ ಭರ್ತಿ ಮಾಡಬೇಕು. ನೀಡಿದ ವಿಳಾಸಕ್ಕೆ ಒಂದೆರಡು ದಿನಗಳಲ್ಲಿ ತಲುಪಿಸಲಾಗುತ್ತದೆ. ದೇಶದಾದ್ಯಂತ ಯಾವ ಸ್ಥಳಕ್ಕಾದರೂ ಆನ್‌ಲೈನ್‌ನಲ್ಲಿ ಬುಕ್‌ ಮಾಡಿ ಕಳುಹಿಸಬಹುದು ಅಥವಾ ತರಿಸಬಹುದು. ಸೈನಿಕರಿಗಾಗಿ ಪ್ರತ್ಯೇಕ ಅಂಚೆ ಲಕೋಟೆಗಳಿವೆ ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT