ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಖನ್‌ ಹಿಂದೆ ಸರಿಯುವಂತೆ ಮಾಡಲು ಯಾರೂ ಒತ್ತಡ ಹೇರಿಲ್ಲ: ಬಾಲಚಂದ್ರ ಜಾರಕಿಹೊಳಿ

‘2ನೇ ಪ್ರಾಶಸ್ತ್ಯದ ಮತ ಕಾಂಗ್ರೆಸ್‌ಗೆ ಹಾಕಬೇಡಿ’
Last Updated 27 ನವೆಂಬರ್ 2021, 12:20 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ವಿಧಾನಪರಿಷತ್‌ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತ ಬಿಜೆಪಿಗೆ ಹಾಕಿ. ಆದರೆ, 2ನೇ ಪ್ರಾಶಸ್ತ್ರದ ಮತ ಕಾಂಗ್ರೆಸ್‍ಗೆ ಹಾಕಬೇಡಿ ಎಂದು ಪ್ರಚಾರ ಮಾಡುತ್ತಿದ್ದೇವೆ’ಎನ್ನುವ ಮೂಲಕ ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಬೆಂಬಲಿಸುವಂತೆ ಪರೋಕ್ಷವಾಗಿ ಕೋರಿದರು.

ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ಲಖನ್‌ಗೆ 2ನೇ ಟಿಕೆಟ್‌ ನೀಡುವಂತೆ ನಾನು, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಮಂಗಲಾ ಅಂಗಡಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಕೇಳಿದ್ದೆವು. ರಮೇಶ ಜಾರಕಿಹೊಳಿ ಕೇಳಿರಲಿಲ್ಲ. ಪಕ್ಷ ಸಿಂಗಲ್‌ ಟಿಕೆಟ್‌ ಕೊಟ್ಟಿದ್ದರಿಂದ ಲಖನ್‌ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಅವರು ಕಣದಿಂದ ಹಿಂದೆ ಸರಿಯುವಂತೆ ಮಾಡುವಂತೆ ವರಿಷ್ಠರಾರೂ ನಮ್ಮ ಮೇಲೆ ಒತ್ತಡ ಹೇರಿಲ್ಲ’ಎಂದು ಹೇಳಿದರು.

‘ನಾನು, ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ವಿವೇಕರಾವ್ ಪಾಟೀಲ ಸೇರಿ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕರು, ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕರ ಸಭೆ ನಡೆಸಿದ್ದೇವೆ. ಈ ಚುನಾವಣೆಯಲ್ಲಿ ಸಹಕಾರ ಚಳವಳಿ ಮೂಲಕ ಬಿಜೆಪಿಗೆ ಏನು ಅನುಕೂಲ ಮಾಡಬಹುದೆಂದು ಚರ್ಚಿಸಿದ್ದೇವೆ. ಪಕ್ಷ ಗೆಲ್ಲಿಸುವುದು ನಮ್ಮ ಗುರಿ’ ಎಂದರು.

‘ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸಿದ್ದರಿಂದ, ಗ್ರಾಮ ಪಂಚಾಯಿತಿಗಳ ಸದಸ್ಯರನ್ನು ಎಲ್ಲರೂ ಮಾತನಾಡಿಸುತ್ತಿದ್ದಾರೆ’ಎಂದು ಪ್ರತಿಕ್ರಿಯಿಸಿದರು.

‘ಸಚಿವ ಉಮೇಶ ಕತ್ತಿ ಸೇರಿದಂತೆ ಎಲ್ಲ ನಾಯಕರೂ ನ.30ರಿಂದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತೇವೆ’ ಎಂದು ತಿಳಿಸಿದರು.

‘ಸತೀಶ ಜಾರಕಿಹೊಳಿ ಅವರು ಜಾರಕಿಹೊಳಿ ಕುಟುಂಬಕ್ಕೆ ಕಳಶಪ್ರಾಯ’ ಎಂಬ ಲಕ್ಷ್ಮಿ ಹೆಬ್ಬಾಳಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಸತೀಶ ಹಿಂದಿನಿಂದಲೂ ಮುಂಚೂಣಿಯಲ್ಲಿ ನಿಂತು ರಾಜಕಾರಣ ಮಾಡಿದವರು. ನಾವೂ ಅವರ ದಾರಿಯಲ್ಲಿ ಬಂದಿದ್ದೇವೆ. ಲಕ್ಷ್ಮಿ ಅವರಿಗೆ ಸತೀಶ ಬಗ್ಗೆ ಇದೇ ಗೌರವ ಇರಲಿ. 2023ರ ಚುನಾವಣೆ ಮುಗಿದ ನಂತರವೂ ಇರಲಿ’ ಎಂದು ವ್ಯಂಗ್ಯವಾಗಿ ಹೇಳಿದರು.

‘ಈ ಚುನಾವಣೆ ಲಕ್ಷ್ಮಿ ಹೆಬ್ಬಾಳಕರ ವರ್ಸಸ್‌ ರಮೇಶ ಜಾರಕಿಹೊಳಿ ಅಲ್ಲ. ಇದು ಬಿಜೆಪಿ ವರ್ಸಸ್ ಕಾಂಗ್ರೆಸ್ ನಡುವೆ ಇದೆ. ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪಿಸುವುದು ಬೇಡ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT