ಭಾನುವಾರ, ಸೆಪ್ಟೆಂಬರ್ 19, 2021
30 °C
ಕ್ರಾಂತಿ ದಿನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ

ಸ್ವಾತಂತ್ರ್ಯ ಯೋಧರ ತ್ಯಾಗ ಸ್ಮರಿಸೋಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಸ್ವಾತಂತ್ರ್ಯ ಯೋಧರು ಹಾಗೂ ಉತ್ತರಾಧಿಕಾರಿಗಳ ಸಂಘ ಮತ್ತು ಭಾರತ ಸೇವಾದಳ ಸಹಯೋಗದಲ್ಲಿ ಇಲ್ಲಿನ ಸೈನಿಕರ ಭವನದಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ಅಂಗವಾಗಿ ನಡೆದ ಕ್ರಾಂತಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಚಳವಳಿಯಲ್ಲಿ ಜಿಲ್ಲೆ ಅಗ್ರಗಣ್ಯ ಸ್ಥಾನ ಹೊಂದಿದೆ. ವೀರ ರಾಣಿ ಕಿತ್ತೂರು ಚನ್ನಮ್ಮ ಅವರು ಹೋರಾಟದ ಕಿಡಿ ಹೊತ್ತಿಸಿದರು. ಸಂಗೊಳ್ಳಿ ರಾಯಣ್ಣ, ಗಂಗಾಧರರಾವ ದೇಶಪಾಂಡೆ, ಅಣ್ಣೂ ಗುರೂಜಿ ಹೀಗೆ... ನೂರಾರು ಯೋಧರನ್ನು ಪಡೆದ ಹೆಮ್ಮೆ ಬೆಳಗಾವಿಗಿದೆ. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಸ್ವಾತಂತ್ರ್ಯ ಯೋಧರನ್ನು ನಾವೆಲ್ಲರೂ ಸ್ಮರಿಸಬೇಕು’ ಎಂದರು.

‘ಕ್ರಾಂತಿ ದಿನ ಅಂಗವಾಗಿ ಪ್ರತಿ ವರ್ಷ ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ವಾತಂತ್ರ ಯೋಧರಿಗೆ ಚಹಾಕೂಟವನ್ನು ರಾಷ್ಟ್ರಪತಿ ಅವರು ಏರ್ಪಡಿಸಿ ಪ್ರತಿ ರಾಜ್ಯದಿಂದ ಸ್ವಾತಂತ್ರ್ಯ ಯೋಧರನ್ನು ಆಮಂತ್ರಿಸಿ ಗೌರವಿಸುತ್ತಿದ್ದರು. ಆದರೆ, ಈ ವರ್ಷ ಕೋವಿಡ್ ಕಾರಣ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತದಿಂದ ಇಲ್ಲೇ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಸ್ವಾತಂತ್ರ್ಯ ಯೋಧರನ್ನು ಆಯ್ಕೆ ಮಾಡಿ ಸನ್ಮಾನಿಸಲಾಗಿದೆ. ಸ್ವಾತಂತ್ರ್ಯ ಯೋಧರ ಸಂಘದ ಅಧ್ಯಕ್ಷ ರಾಜೇಂದ್ರ ಕಲಘಟಗಿ ಅವರ ಸಲಹೆಯಂತೆ ಸೈನಿಕ ಭವನದಲ್ಲಿಯೇ ನಡೆಸಲಾಯಿತು’ ಎಂದು ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರರಾದ ಅಪ್ಪಣ್ಣ ಶಿವರಾಯಪ್ಪ ಕರಲಿಂಗಣ್ಣವರ ಅಕ್ಕತಂಗೇರಹಾಳ (ಘಟಪ್ರಭಾ) ಮತ್ತು ಶಿವಪ್ಪ ಅಣ್ಣಿಗೇರಿ (ದಡೇರಕೊಪ್ಪ, ಸವದತ್ತಿ ತಾ.) ಅವರನ್ನು ಗೌರವಿಸಲಾಯಿತು. ಸ್ವಾತಂತ್ರ್ಯ ಯೋಧ ರಂಗನಾಥ ವಡವಿ, ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ವಿಠ್ಠಲ ಹೆಗಡೆ, ಕೇಂದ್ರ ಸಮಿತಿ ಸದಸ್ಯ ರಾಜೇಂದ್ರ ಮಾಳಗಿ ಅವರನ್ನು ಸನ್ಮಾನಿಸಲಾಯಿತು.

ನಮಿತಾ ಪರಮಾಜಿ ಹಾಗೂ ತಂಡದವರು ವಂದೇಮಾತರಂ ಗೀತೆ ಹಾಡಿದರು. ಭಾರತ ಸೇವಾದಳದ ಬಸವರಾಜ ಹಟ್ಟಿಗೌಡರ ಸ್ವಾಗತಿಸಿದರು. ಶ್ರೇಯಾ ಸವ್ವಾಸೇರಿ ನಾಟ್ಯ ಸ್ವಾಗತ ನೀಡಿದರು. ಸುಭಾಷ ಹೊನಗೇಕರ ವಂದಿಸಿದರು. ಸಂತೋಷ ಹೊಂಗಲ ನಿರೂಪಿಸಿದರು.

ಸಂಘದ ಅಧ್ಯಕ್ಷ ರಾಜೇಂದ್ರ ಕಲಘಟಗಿ ಅಧ್ಯಕ್ಷತೆ ವಹಿಸಿದ್ದರು. ಅಪ್ಪಣ್ಣ ಕರಲಿಂಗಣ್ಣವರ, ಶಿವಪ್ಪ ಅಣ್ಣಿಗೇರಿ, ದಿಲೀಪ ಸೋಹ, ಸಂತೋಷ ಬೆಂಡಿಗೇರಿ, ಸುಭಾಷ ಹೊನಗೇಕರ, ವಿ.ಬಿ. ಮರೆಣ್ಣವರ, ವಿವೇಕಾನಂದ ಪೋಟೆ, ಕಿರಣ ಬೇಕವಾಡ, ಸಂಜೀವ ಜಾಧವ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು