ಸೋಮವಾರ, ಜನವರಿ 25, 2021
20 °C

‘ದೇವದಾಸಿ ಪದ್ಧತಿ ಕಿತ್ತೊಗೆಯಬೇಕು’: ಬೆಳಗಾವಿಯಲ್ಲಿ ಜಾಗೃತಿ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುತ್ತಿದೆ’ ಎಂದು ಇಲ್ಲಿನ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸಿಸ್ಟರ್ ಲೂರ್ದ್ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಚಿಲ್ಡ್ರನ್ ಆಫ್ ಇಂಡಿಯಾ ಪ್ರತಿಷ್ಠಾನ ಹಾಗೂ ಬೆಳಗಾವಿ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದೇವದಾಸಿ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಕುರಿತ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಏಕ ಪೋಷಕ, ಅನಾಥ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ, ಲೈಂಗಿಕ ಚಟುವಟಿಯೆಲ್ಲಿ ತೊಡಗಿದ್ದ ಮಹಿಳೆಯ ಮಕ್ಕಳು ಹಾಗೂ ಎಚ್‌ಐವಿ ಬಾಧಿತ ಮಕ್ಕಳಿಗೆ ಸರ್ಕಾರಿಂದ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳ ಕಲ್ಯಾಣ ಸಮಿತಿಗೆ ಬಂದ ಮಕ್ಕಳನ್ನು ಪೋಷಕರಿಗೆ ಒಪ್ಪಿಸುವವರೆಗೆ ಕಾರ್ಯ ನಿರ್ವಹಿಸಲಾಗುತ್ತಿದೆ’ ಎಂದರು.

‘ಜಿಲ್ಲೆಯಲ್ಲಿ 68 ಮಕ್ಕಳು ಸಮಿತಿಯು ಆಪ್ತಸಮಾಲೋಚನೆ ನೀಡಿದೆ. ಸರ್ಕಾರಿ ಸೌಲಭ್ಯ ಕಲ್ಪಿಸಲು, ಶಿಕ್ಷಣ ಒದಗಿಸಿ ಪೋಷಿಸುವ ಕಾರ್ಯವೂ ನಡೆದಿದೆ. ಮಹಿಳೆಯರು ಮತ್ತು ಮಕ್ಕಳು ಧೈರ್ಯದಿಂದ ಮುಂದೆ ಬಂದಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ದೇವದಾಸಿ ಪುನರ್ವಸತಿ ಯೋಜನೆ ಅಧಿಕಾರಿ ಎಂ.ಕೆ. ಕುಲಕರ್ಣಿ ಮಾತನಾಡಿ, ‘ದೇವದಾಸಿಯರ ಹೆಣ್ಣು ಮಕ್ಕಳನ್ನು ಮದುವೆಯಾದವರಿಗೆ ₹ 5 ಲಕ್ಷ ಮತ್ತು  ಗಂಡು ಮಕ್ಕಳಿಗೆ ₹ 3 ಲಕ್ಷವನ್ನು ಸರ್ಕಾರದಿಂದ ನೀಡಲಾಗುತ್ತಿದೆ. 2007ರಲ್ಲಿ ನಡೆದ ಸಮೀಕ್ಷೆಯಂತೆ, 1,224 ದೇವದಾಸಿಯರಿರುವುದು ತಿಳಿದುಬಂದಿದೆ. ಅವರಿಗೆ ಮಾಸಾಶನ, ಆಶ್ರಯ ಯೋಜನೆಯಡಿ ಮನೆ ನೀಡಲಾಗಿದೆ. 50 ಮಂದಿಗೆ ಮನೆ ಮತ್ತು ನಿವೇಶನವನ್ನು ಶೀಘ್ರವೇ ಒದಗಿಸಲಾಗುವುದು’ ಎಂದರು.

‘ಸೇವಕ ಸಂಸ್ಥೆ’ ಕಾರ್ಯದರ್ಶಿ ಆನಂದ ಲೋಬೊ, ‘ಜಿಲ್ಲೆಯಲ್ಲಿ 27 ಗ್ರಾಮಗಳಲ್ಲಿ ನಡೆದ ಸಮೀಕ್ಷೆಯಲ್ಲಿ 608 ಮಕ್ಕಳು ವಿವಾಹಕ್ಕೆ ಒಳಗಾಗಿದ್ದಾರೆ. 13 ವರ್ಷದವರನ್ನು ಮದುವೆ ಮಾಡುವುದು ಕಂಡುಬರುತ್ತಿದೆ. ಅಂತಹ ಮಕ್ಕಳು ಅಪೌಷ್ಟಿಕತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ತಾಯಿ ಮರಣಕ್ಕೆ ಬಾಲ್ಯ ವಿವಾಹವೆ ಕಾರಣವಾಗಿದೆ. ಈ ಸಾಮಾಜಿಕ ಪಿಡುಗನ್ನು ಶಿಕ್ಷಣದಿಂದ ದೂರ ಮಾಡಬಹುದು. ಹೀಗಾಗಿ, ಸರ್ಕಾರವು ಶಿಕ್ಷಣಕ್ಕೆ ಹಚ್ಚಿನ ಒತ್ತು ನೀಡಬೇಕು’ ಎಂದು ತಿಳಿಸಿದರು.

ರಾಯಬಾಗದ ‘ಅಮ್ಮ ಪ್ರತಿಷ್ಠಾನ’ದ ಕಾರ್ಯದರ್ಶಿ ಶೋಭಾ ಗಸ್ತಿ, ‘ದೇವದಾಸಿ ಪದ್ಧತಿ ಮೂಢನಂಬಿಕೆಯಿಂದ ಬಂದಿದೆ. ಅದನ್ನು ಬೇರು ಸಮೇತ ಕಿತ್ತೊಗೆಯಬೇಕು. ಮರು ಸಮೀಕ್ಷೆ ನಡೆಸಿ ಅವರಿಗೆ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಶೈಲ ಮಠದ ಮಾತನಾಡಿದರು.

ದೇವದಾಸಿಯರು ಹಾಗೂ ಅವರ ಮಕ್ಕಳು ಸಮಸ್ಯೆಗಳ ಕುರಿತು ತಿಳಿಸಿದರು. ಮಕ್ಕಳ ರಕ್ಷಣಾಧಿಕಾರಿ ರವೀಂದ್ರ ರತ್ನಾಕರ, ಸಿಆರ್‌ಟಿ ಸಂಸ್ಥೆಯ ವೆಂಕಟೇಶ ಟಿ., ಸುಂದರವ್ವ, ಪತ್ರಕರ್ತ ಗೋಪಾಲ ಕಟಾವಕರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು