ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ನೇಕಾರರಿಂದ ಸೀರೆ ಖರೀದಿ; ಈಡೇರದ ಸಚಿವರ ವಾಗ್ದಾನ !

Last Updated 20 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಲಾಕ್‌ಡೌನ್‌ ಅವಧಿಯಲ್ಲಿ ಮಾರಾಟವಾಗದೇ ನೇಕಾರರ ಬಳಿ ಉಳಿದಿರುವ ಸೀರೆಗಳನ್ನು ಸರ್ಕಾರದ ವತಿಯಿಂದ ಖರೀದಿಸಲು ಪ್ರಯತ್ನಿಸುವುದಾಗಿ ಹೇಳಿಕೆ ನೀಡಿದ್ದ ಜವಳಿ ಸಚಿವ ಶ್ರೀಮಂತ ಪಾಟೀಲ ಆಶ್ವಾಸನೆ ಎರಡೂವರೆ ತಿಂಗಳು ಕಳೆದರೂ ಸಾಕಾರಗೊಂಡಿಲ್ಲ. ಒಂದೆಡೆ ಸಚಿವರ ಆಶ್ವಾಸನೆ ಈಡೇರಿಲ್ಲ, ಇನ್ನೊಂದೆಡೆ ಮತ್ತೆ ಪ್ರವಾಹದ ನೀರು ಮನೆಯೊಳಗೆ ನುಗ್ಗುತ್ತಿದ್ದು ನೇಕಾರರ ಬದುಕು ಅತಂತ್ರಗೊಳಿಸಿದೆ.

ಕಳೆದ ವರ್ಷ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಜಿಲ್ಲೆಯ ಸುಮಾರು ಒಂದು ಲಕ್ಷ ನೇಕಾರರು ಸಂಕಷ್ಟಕ್ಕೆ ಒಳಗಾಗಿದ್ದರು. ನದಿ ನೀರು ಇಳಿದು, ಇನ್ನೇನು ಪರಿಸ್ಥಿತಿ ಸುಧಾರಿಸುತ್ತಿದೆ ಎನ್ನುವುದರಲ್ಲಿ ಮಾರ್ಚ್‌ನಿಂದ ಲಾಕ್‌ಡೌನ್‌ ಹೇರಲಾಗಿದೆ. ಮದುವೆ, ಜಾತ್ರೆ, ಹಬ್ಬ ಹಾಗೂ ಅದ್ಧೂರಿ ಸಮಾರಂಭಗಳ ಮೇಲೆ ನಿರ್ಬಂಧ ಹೇರಿರುವುದರಿಂದ ಯಾರೂ ಬಟ್ಟೆ ಬರೆ ಖರೀದಿಸಲು ಮುಂದಾಗಲಿಲ್ಲ. ಇದರಿಂದಾಗಿ ನೇಕಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಮದುವೆ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿದ್ದ ಮಾರ್ಚ್‌, ಏಪ್ರಿಲ್‌, ಮೇ ತಿಂಗಳಿನಲ್ಲಿಯೇ ಲಾಕ್‌ಡೌನ್‌ ವಿಧಿಸಿದ್ದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆಗಳು ಮಾರಾಟವಾಗದೆ ಹಾಗಯೇ ಉಳಿದಿವೆ. ಬೆಳಗಾವಿಯ ವಡಗಾಂವ, ಶಹಾಪುರ, ಖಾಸಬಾಗ, ಅನಗೋಳ, ರಾಮದುರ್ಗ, ಸವದತ್ತಿ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ನೇಕಾರರ ಗೋದಾಮುಗಳಲ್ಲಿ ಸೀರೆಗಳು ಉಳಿದುಕೊಂಡಿವೆ. ಕಳೆದ ವರ್ಷ ನೇಯ್ದಿಟ್ಟ ಸೀರೆಗಳ ದಡಿ ಹಾಗೆಯೇ ಉಳಿದಿವೆ. ಈಗ ಮಳೆ ಜೋರಾಗಿ ಸುರಿಯುತ್ತಿದ್ದು, ನೀರು ಮನೆಯೊಳಗೆ ನುಗ್ಗುತ್ತಿದೆ. ಎಲ್ಲಿ ಸೀರೆಗಳು ಹಾಳಾಗುತ್ತವೆಯೋ ಎಂದು ನೇಕಾರರು ಆತಂಕದಲ್ಲಿ ದಿನದೂಡುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಅಂದಾಜು ₹ 10 ಲಕ್ಷಕ್ಕೂ ಮೀರಿದ ಸೀರೆಗಳು ಉಳಿದುಕೊಂಡಿವೆ. ಕೊರೊನಾ ಸೋಂಕು ಹರಡುವಿಕೆ ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮದುವೆ, ಜಾತ್ರೆ, ಹಬ್ಬ, ದೊಡ್ಡ ದೊಡ್ಡ ಸಮಾರಂಭಗಳ ಮೇಲೆ ನಿರ್ಬಂಧ ಮುಂದುವರಿದಿದೆ. ಕೊರೊನಾ ಆತಂಕ ದೂರವಾಗುವವರೆಗೆ ಇದು ಮುಂದುವರಿಯಲಿದ್ದು, ಅಲ್ಲಿಯವರೆಗೆ ಸೀರೆಗಳ ಮಾರಾಟ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ.

6 ತಿಂಗಳಿನಿಂದ ಬಂದ್‌

‘ಕಳೆದ ವರ್ಷ ಕೈಮಗ್ಗಗಳ ಮನೆಯೊಳಗೆ ಪ್ರವಾಹದ ನೀರು ನುಗ್ಗಿದ್ದರಿಂದ ಬಂದ್‌ ಆಗಿದ್ದವು. ಈಗ ಲಾಕ್‌ಡೌನ್‌ನಿಂದ ಪುನಃ 6 ತಿಂಗಳಿನಿಂದ ಮಗ್ಗಗಳು ಬಂದ್‌ ಮಾಡಿದ್ದೇವೆ. ಈಗಾಗಲೇ ನೇಯ್ದು ಇಟ್ಟಿರುವ ಸೀರೆಗಳು ಮಾರಾಟವಾಗದೇ ಗೋದಾಮುಗಳಲ್ಲಿ ಉಳಿದುಕೊಂಡಿವೆ. ಇವು ಮಾರಾಟವಾಗದಿದ್ದರಿಂದ ನೇಕಾರರ ಹೊಟ್ಟೆಗೆ ಹಿಟ್ಟು ಇಲ್ಲದಂತಾಗಿದೆ’ ಎಂದು ನೇಕಾರರ ರಮೇಶ ಸೊಂಟಕ್ಕಿ ಹತಾಶದಿಂದ ನುಡಿದರು.

‘ಸರ್ಕಾರದಿಂದ ನಿರೀಕ್ಷೆಯಷ್ಟು ಸಹಕಾರ ಸಿಕ್ಕಿಲ್ಲ. ಲಾಕ್‌ಡೌನ್‌ ಪರಿಹಾರವಾಗಿ ₹ 2 ಸಾವಿರ ಎಲ್ಲರಿಗೂ ಸಿಕ್ಕಿಲ್ಲ. ಸೀರೆ ಖರೀದಿ ಮಾಡುವ ಭರವಸೆ ಈಡೇರಿಲ್ಲ. ಮದುವೆ, ಹಬ್ಬ, ಸಮಾರಂಭಗಳ ಮೇಲಿನ ನಿರ್ಬಂಧ ಇನ್ನೂ ಮುಂದುವರಿದಿದೆ. ನೇಕಾರರ ಆರ್ಥಿಕ ಇನ್ನು ಯಾವಾಗ ಸುಧಾರಿಸುವುದೋ? ಇನ್ಯಾವಾಗ ಮಗ್ಗಗಳು ಆರಂಭಗೊಳ್ಳುವುದೋ’ ಎಂದು ಆತಂಕ ವ್ಯಕ್ತಪಡಿಸಿದರು.

ನಮ್ಮ ಗಮನಕ್ಕೆ ಇಲ್ಲ

‘ಸೀರೆ ಖರೀದಿಸುವ ಬಗ್ಗೆ ಸಚಿವರು ಹೇಳಿಕೆ ನೀಡಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೆ. ಇದರ ಹೊರತಾಗಿ ಹೆಚ್ಚೇನೂ ಮಾಹಿತಿ ಇಲ್ಲ. ಈ ತೀರ್ಮಾನ ಸರ್ಕಾರದ ಮಟ್ಟದಲ್ಲಿ ಆಗಬೇಕಾಗಿದೆ’ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ವಾಸುದೇವ ದೊಡ್ಡಮನಿ ಪ್ರತಿಕ್ರಿಯಿಸಿದರು.

ಸಚಿವ ಶ್ರೀಮಂತ ಪಾಟೀಲ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT