ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ಕಾಂಗ್ರೆಸ್ ಕೊಡುಗೆ ಏನು? ಅಮಿತ್‌ ಶಾ ಪ್ರಶ್ನೆ

ಪಟ್ಟಿ ಬಿಡುಗಡೆ ಮಾಡಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲು
Last Updated 17 ಜನವರಿ 2021, 13:59 IST
ಅಕ್ಷರ ಗಾತ್ರ

ಬೆಳಗಾವಿ: ‘ಮನಮೋಹನ್‌ಸಿಂಗ್–ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ 10 ವರ್ಷಗಳಲ್ಲಿ ಕರ್ನಾಟಕಕ್ಕೆ ನೀಡಿದ ಕೊಡುಗೆಗಳೇನು ಮತ್ತು ಎಷ್ಟು ಅನುದಾನ ಕೊಟ್ಟಿತ್ತು ಎನ್ನುವ ಅಂಕಿ ಅಂಶಗಳ ಪಟ್ಟಿ ಬಿಡುಗಡೆ ಮಾಡಲಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಹಿರಂಗ ಸವಾಲು ಹಾಕಿದರು.

ಬಿಜೆಪಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜನಸೇವಕ ಸಮಾವೇಶದ ಸಮಾರೋಪದಲ್ಲಿ ಸಹಸ್ರಾರು ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಸದಾ ಬಿಜೆಪಿ ವಿರುದ್ಧ ಟೀಕಿಸುವುದನ್ನೇ ಕೆಲಸ ಮಾಡಿಕೊಂಡಿರುವ ಕಾಂಗ್ರೆಸ್ ಕರ್ನಾಟಕಕ್ಕೆ ಏನು ಕೊಟ್ಟಿದೆ?’ ಎಂದು ಕೇಳಿದರು.

‘ಈ ರಾಜ್ಯಕ್ಕೆ ಕೊಟ್ಟ ಕೊಡುಗೆಯ ಬಗ್ಗೆ ಕಾಂಗ್ರೆಸ್ ಬಳಿ ದಾಖಲೆಗಳಿಲ್ಲ. ಆದರೆ, ನಮ್ಮ ಬಳಿ ಇವೆ. 10 ವರ್ಷಗಳಲ್ಲಿ ಕಾಂಗ್ರೆಸ್ ಕರ್ನಾಟಕಕ್ಕೆ 13ನೇ ಹಣಕಾಸು ಯೋಜನೆಯಲ್ಲಿ ₹ 88,583 ಕೋಟಿ ಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ 2014ರಿಂದ 2019ರವರೆಗೆ ₹2,19,506 ಕೋಟಿ ನೀಡಲಾಗಿದೆ. ಕಾಂಗ್ರೆಸ್‌ನವರ ಬಳಿ ಇದಕ್ಕೆ ಉತ್ತರವಿದೆಯೇ’ ಎಂದು ಪ್ರಶ್ನಿಸಿದರು.

ಕೊಡಲಿಲ್ಲವೇಕೆ?

ಭಾಷಣದುದ್ದಕ್ಕೂ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಸಾಧನೆ ಪ್ರಸ್ತಾಪಿಸುತ್ತಾ ಕಾಂಗ್ರೆಸ್ ವಿರುದ್ಧ ವಾಗ್ಬಾಣ ಪ್ರಯೋಗಿಸಿದ ಶಾ, ‘ಕಾಂಗ್ರೆಸ್ ಒಮ್ಮೆಯೂ ಬಡವರ ಕಣ್ಣೀರು ಒರೆಸಲಿಲ್ಲ. ಗರೀಬಿ ಹಠಾವೋ ಎನ್ನುವುದು ಘೋಷಣೆಗಳಷ್ಟೇ ಸೀಮಿತ ಮಾಡಿಕೊಂಡಿತು. ಸ್ವಾತಂತ್ರ ಬಂದಾಗಿನಿಂದ ಆಳಿದ ಆ ಪಕ್ಷ ಏಳು ದಶಕಗಳ ಅವಧಿಯಲ್ಲಿ ಬಡವರ ಮನೆಗಳಿಗೆ ಅಡುಗೆ ಅನಿಲ ಸಿಲಿಂಡರ್‌, ವಿದ್ಯುತ್, ಆರೋಗ್ಯ ಸೌಲಭ್ಯ ಮತ್ತು ಮನೆಗಳನ್ನು ಕೊಡಲಿಲ್ಲವೇಕೆ?’ ಎಂದು ಕೇಳಿದರು.

‘ಮೋದಿ ನೇತೃತ್ವದಲ್ಲಿ 7 ಕೋಟಿ ಜನರಿಗೆ ಬ್ಯಾಂಕ್ ಖಾತೆ ತೆರೆಯಲಾಗಿದೆ. 13 ಕೋಟಿ ಜನರ ಮನೆಗಳಿಗೆ ಅಡುಗೆ ಅನಿಲ ನೀಡಲಾಗಿದೆ. 60 ಕೋಟಿ ಜನರಿಗೆ ಆಯುಷ್ಮಾನ್‌ ಭಾರತ ಯೋಜನೆಯಲ್ಲಿ ಆರೋಗ್ಯ ಸೌಲಭ್ಯ ಒದಗಿಸಲಾಗಿದೆ. 2020ರ ವೇಳೆಗೆ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ನೀಡುವ ಸಂಕಲ್ಪ ಮಾಡಿದ್ದೇವೆ’ ಎಂದು ತಿಳಿಸಿದರು.

ಯಡಿಯೂರಪ್ಪಗೆ ಶಹಬ್ಬಾಸ್‌ಗಿರಿ

‘ಕೋವಿಡ್ ನಿಯಂತ್ರಿಸಲು ದೇಶದ ಎಲ್ಲರಿಗೂ ಸುರಕ್ಷಾ ಕವಚ ನೀಡಲಾಗುತ್ತಿದೆ. ಈ ಲಸಿಕೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ನವರ ಮಾತು ನಂಬಬೇಡಿ. ನಿಮ್ಮ ಸರದಿ ಬಂದಾಗ ಅಂಜಿಕೆ ಇಲ್ಲದೆ ಪಡೆಯಿರಿ. ಇದರಿಂದ ನಿಮ್ಮೊಂದಿಗೆ ದೇಶವೂ ಕೊರೊನಾದಿಂದ ಮುಕ್ತವಾಗಲಿದೆ’ ಎಂದು ಹೇಳಿದರು.

ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಹಾಡಿ ಹೊಗಳಿದ ಅವರು, ‘ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಕೊರೊನಾ ಸೋಂಕನ್ನು ಉತ್ತಮವಾಗಿ ನಿಯಂತ್ರಿಸಲಾಗಿದೆ. ಈ ಬಗ್ಗೆ ಸ್ವತಃ ಪ್ರಧಾನಿಯೇ ಸಂಸದರ ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದರು.

‘ಸ್ವಾವಲಂಬಿ (ಆತ್ಮನಿರ್ಭರ್) ಭಾರತ ನಿರ್ಮಾಣ ಪ್ರಧಾನಿಯ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಕೊಪ್ಪಳದಲ್ಲಿ ನಿರ್ಮಾಣವಾಗಲಿರುವ ಆಟಿಕೆ ಕ್ಲಸ್ಟರ್‌ನಿಂದ ಚೀನಾ ಮೇಲಿನ ಅವಲಂಬನೆ ದೂರವಾಗಲಿದೆ. ಪ್ರತಿಯೊಬ್ಬರೂ ದೇಶೀಯ ಉತ್ಪನ್ನಗಳ ಬಳಸಿದರೆ ಜಿಡಿಪಿ ತಾನಾಗಿಯೇ ಹೆಚ್ಚಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಅಮಿತ್ ಶಾ ಅವರಿಗೆ ರುದ್ರಾಕ್ಷಿಗಳಿಂದ ಸಿದ್ಧಪಡಿಸಿದ್ದ ದೊಡ್ಡ ಹಾರ ಹಾಗೂ ಬೆಳ್ಳಿ ಗದೆ ನೀಡಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸ್ವಾಗತಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಕೆ. ಅರುಣಾ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಹಲವು ಸಚಿವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT