ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಕಾಕ | ವಾಂತಿ–ಭೇದಿ: ಮಹಿಳೆ ಸಾವು

Published 24 ಜೂನ್ 2024, 13:36 IST
Last Updated 24 ಜೂನ್ 2024, 13:36 IST
ಅಕ್ಷರ ಗಾತ್ರ

ಗೋಕಾಕ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಕನಸಗೇರಿ ಗ್ರಾಮದಲ್ಲಿ ಭಾನುವಾರ ರಾತ್ರಿ ವಾಂತಿ– ಭೇದಿಯಿಂದ ಬಳಲಿದ ಮಹಿಳೆಯೊಬ್ಬರು ಸೋಮವಾರ ಮೃತಪಟ್ಟಿದ್ದಾರೆ.

ಹೊಳೆವ್ವ ಬಾಳಪ್ಪ ಧನದವರ (38) ಮೃತರು. ಗ್ರಾಮದ ಬೋರ್‌ವೆಲ್‌ ನೀರನ್ನು ಈ ಗ್ರಾಮದಲ್ಲಿ ಸರಬರಾಜು ಮಾಡಲಾಗುತ್ತಿದೆ. ಆ ನೀರು ಕುಡಿದು 10 ಜನ ಭಾನುವಾರ ರಾತ್ರಿ ಅಸ್ವಸ್ಥಗೊಂಡಿದ್ದರು. ನಾಲ್ಕೈದು ಬಾರಿ ವಾಂತಿ–ಭೇದಿಯ ಕಾರಣ ಹೊಳೆವ್ವ ತೀವ್ರ ನಿತ್ರಾಣಗೊಂಡರು. ಸೋಮವಾರ ಬೆಳಿಗ್ಗೆ ಅವರನ್ನು ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕರೆತರಲಾಗಿತ್ತು. ಆಸ್ಪತ್ರೆ ಮುಟ್ಟುವ ಮುನ್ನವೇ ಅವರು ಕೊನೆಯುಸಿರೆಳೆದರು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ ತಿಳಿಸಿದ್ದಾರೆ.

‘ಮಹಿಳೆ ಕಲುಷಿತ ನೀರಿನಿಂದಲೇ ಮೃತಪಟ್ಟಿದ್ದಾರೆ ಎಂಬುದು ಖಾತ್ರಿಯಾಗಿಲ್ಲ. ಅವರು ಎಲ್ಲಿಯೂ ತಪಾಸಣೆಗೆ ಒಳಗಾಗಿಲ್ಲ. ಆಸ್ಪತ್ರೆ ತಲುಪುವ ಮುನ್ನವೇ ಮೃತಪಟ್ಟಿದ್ದಾರೆ. ಕುಟುಂಬದವರು ಅಂತ್ಯಕ್ರಿಯೆ ನೆರವೇರಿಸಿದ ಬಳಿಕ ನಮಗೆ ಮಾಹಿತಿ ಬಂದಿದೆ. ಮರಣೋತ್ತರ ಪರೀಕ್ಷೆ ಕೂಡ ಆಗಿಲ್ಲ. ಪೊಲೀಸರಿಗೂ ಕುಟುಂಬದವರು ದೂರು ನೀಡಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕನಸಗೇರಿಯ ಕುಡಿಯುವ ನೀರನ್ನು ಪ್ರಯೋಗಾಲಯದಲ್ಲಿ ತಪಾಸಣೆ ಮಾಡಲಾಗಿದೆ. ನೀರಿನಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಭಾನುವಾರ ವಾಂತಿ– ಭೇದಿ ಕಾಣಿಸಿಕೊಂಡಿದ್ದ ಎಂಟು ಮಂದಿ ಗುಣವಾಗಿದ್ದಾರೆ. ಸೋಮವಾರ ಮಧ್ಯಾಹ್ನ ಮತ್ತೊಬ್ಬ ವ್ಯಕ್ತಿ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಅಪಾಯ ಏನೂ ಇಲ್ಲ’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣಿ ಸ್ಥಳಕ್ಕೆ ಭೇಟಿ ನೀಡಿ, ಕುಟುಂಬದವರಿಂದ ಮಾಹಿತಿ ಸಂಗ್ರಹಿಸಿದರು. ಗ್ರಾಮದ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆಗೆ ಕಳುಹಿಸಿದರು.

ಈ ಬಗ್ಗೆ ಮಾಹಿತಿ ನೀಡಲು ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT