ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ನೀಡಿದ ಕಾಂಗ್ರೆಸ್‌ ಸರ್ಕಾರ ರಕ್ಷಿಸುವ ಕೆಲಸ ಮಾಡಿ: ಸತೀಶ ಜಾರಕಿಹೋಳಿ

Published 13 ಮಾರ್ಚ್ 2024, 14:32 IST
Last Updated 13 ಮಾರ್ಚ್ 2024, 14:32 IST
ಅಕ್ಷರ ಗಾತ್ರ

ನಿಪ್ಪಾಣಿ: ‘ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ರಕ್ಷಣೆ ಮಾಡಿದೆ. ಈಗ ನೀವು ನಮ್ಮ ಸರ್ಕಾರವನ್ನು ರಕ್ಷಿಸುವ ಕೆಲಸ ಮಾಡಬೇಕಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ನಗರಸಭೆ ವತಿಯಿಂದ ಸ್ಥಳೀಯ ಛತ್ರಪತಿ ಶಿವಾಜಿ ಮಹಾರಾಜ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ನಿಪ್ಪಾಣಿ ಹೋಬಳಿ ಮತ್ತು ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಿಪ್ಪಾಣಿ ತಾಲೂಕಿನಲ್ಲಿ ಇಲ್ಲಿಯವರೆಗೆ 58.34 ಲಕ್ಷ ಮಹಿಳೆಯರು ₹ 37.31 ಕೋಟಿ ವೆಚ್ಚದ ಶಕ್ತಿ ಯೋಜನೆಯ ಲಾಭ ಪಡೆದಿದ್ದಾರೆ. ಗೃಹಲಕ್ಷ್ಮೀ ಯೋಜನೆಯಲ್ಲಿ 65,346 ಮಹಿಳೆಯರಿಗೆ ₹78 ಕೋಟಿ ಅನುದಾನವನ್ನು ಅವರ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಲಾಗಿದೆ.₹ 22 ಕೋಟಿ ಅನುದಾನದ ಅನ್ನಭಾಗ್ಯ ಯೋಜನೆಯ ಲಾಭ ಪಡೆದಿದ್ದಾರೆ. ಗೃಹಜ್ಯೋತಿ ಯೋಜನೆಯಲ್ಲಿ 12 ಸಾವಿರಕ್ಕೂ ಹೆಚ್ಚು ವಿದ್ಯುತ್ ಸಂಪರ್ಕಗಳಿಗೆ ₹ 1.35 ಕೋಟಿ ಅನುದಾನ ನೀಡಲಾಗಿದೆ. ನಿರುದ್ಯೋಗಿ ಪದವೀಧರರಿಗೆ ₹ 3 ಸಾವಿರ ಮತ್ತು ಡಿಪ್ಲೊಮಾ ಹೊಂದಿದವರಿಗೆ ₹ 1500 ಧನಸಹಾಯ ನೀಡಲಾಗಿದೆ’ ಎಂದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವ ವೀರಕುಮಾರ ಪಾಟೀಲ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷಣರಾವ ಚಿಂಗಳೆ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರಾಜೇಂದ್ರ ವಡ್ಡರ, ಸುಪ್ರಿಯಾ ಪಾಟೀಲ, ಸುಮಿತ್ರಾ ಉಗಳೆ ಮಾತನಾಡಿದರು.

ಚಿಕ್ಕೋಡಿ ಉಪವಿಭಾಗಾಧಿಕಾರಿ ಮಹಬೂಬಿ, ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಂಕಜ ಪಾಟೀಲ, ಅಣ್ಣಾಸಾಹೇಬ ಹಾವಲೆ, ಬಸವರಾಜ ಪಾಟೀಲ, ರಾಜೇಶ ಕದಮ, ರೋಹನ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಫಲಾನುಭವಿಗಳು ಇದ್ದರು. ತಹಶೀಲ್ದಾರ್‌ ಮುಜಫ್ಫರ್‌ ಬಳಿಗಾರ ಸ್ವಾಗತಿಸಿದರು. ಜಿ.ಜಿ. ಗಳಬಿ, ವಿ.ಸಿ. ವಾಕ್ಪಟ್ಟೆ ಕಾರ್ಯಕ್ರಮ ನಿರೂಪಿಸಿದರು. ತಾಲ್ಲೂಕು ಪಂಚಾಯಿತಿ ಸಿ.ಇ.ಒ. ಸುನೀಲ ಮತಿನ ವಂದಿಸಿದರು.

ಸಮಾವೇಶದಲ್ಲಿ ಪಾಲ್ಗೊಂಡ ಫಲಾನುಭವಿ ಮಹಿಳೆಯರು.
ಸಮಾವೇಶದಲ್ಲಿ ಪಾಲ್ಗೊಂಡ ಫಲಾನುಭವಿ ಮಹಿಳೆಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT