ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ದುಡಿಯುವ ವರ್ಗಕ್ಕೆ ಸಿಗಲಿ ಅಧಿಕಾರ’-ಎಐಡಿಎಸ್‌ಒ

ಭಗತ್ ಸಿಂಗ್‌ ಜನ್ಮದಿನಾಚರಣೆ: ಮಹಾಂತೇಶ ಬಿಳೂರ್ ಆಶಯ
Published 29 ಸೆಪ್ಟೆಂಬರ್ 2023, 6:25 IST
Last Updated 29 ಸೆಪ್ಟೆಂಬರ್ 2023, 6:25 IST
ಅಕ್ಷರ ಗಾತ್ರ

ಬೆಳಗಾವಿ: ‘ಗಾಂಧೀಜಿ, ನೆಹರೂ ಹಾಗೂ ವಲ್ಲಭಭಾಯಿ ಪಟೇಲ್‌ರ ರಾಜಿಪರ ಗುಂಪಿನ ನಾಯಕತ್ವದಲ್ಲಿ ಸ್ವಾತಂತ್ರ್ಯ ಬಂದರೆ ಅದು ಕೇವಲ ಉದ್ಯಮಪತಿಗಳು ಮತ್ತು ಆಗರ್ಭ ಶ್ರೀಮಂತರ ಸ್ವಾತಂತ್ರ್ಯವಾಗಿರುತ್ತದೆ ಎಂದು ಭಗತ್ ಸಿಂಗ್ ಎಚ್ಚರಿಕೆ ನೀಡಿದ್ದರು. ಈಗ ಅದರ ಪ್ರತಿಫಲ ನಾವು ಅನುಭವಿಸುತ್ತಿದ್ದೇವೆ’ ಎಂದು ಎಐಡಿಎಸ್ಒ ಜಿಲ್ಲಾ ಸಂಚಾಲಕ ಮಹಾಂತೇಶ ಬಿಳೂರ್ ಹೇಳಿದರು.

ಎಐಡಿಎಸ್‌ಒ ಹಾಗೂ ಎಐಡಿವೈಒ ವತಿಯಿಂದ ನಗರದಲ್ಲಿ ಗುರುವಾರ ಆಯೋಜಸಿದ್ದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್‌ ಅವರ 116ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೇವಲ ಬ್ರಿಟಿಷರನ್ನು ದೇಶದಿಂದ ಓಡಿಸುವು ದು ಸ್ವಾತಂತ್ರ್ಯದ ಉದ್ದೇಶವಲ್ಲ. ಬದಲಿಗೆ ರೈತ– ಕಾರ್ಮಿಕರನ್ನು ಸಂಘಟಿಸಿ ರಾಜಿರಹಿತ ಸಂಘರ್ಷದ ಮೂಲಕ ಕ್ರಾಂತಿ ನೆರವೇರಿಸಬೇಕು. ದೇಶದ ಸಂಪತ್ತಿನ ಮೇಲೆ ದುಡಿಯುವ ಜನರ ಅಧಿಪತ್ಯ ಸ್ಥಾಪಿಸಬೇಕು. ಈ ಪ್ರಕ್ರಿಯೆಯಲ್ಲಿ ಅಡ್ಡಿಯಾಗಿರುವ ಜಾತಿ- ಧರ್ಮಗಳನ್ನು ಹೋರಾಟದಲ್ಲಿ ಬೆರೆಸದೇ, ಸಮಾನತೆಯ ಭಾವದೊಂದಿಗೆ ಹೋರಾಟವನ್ನು ಬಲಪಡಿಸಬೇಕು ಎಂಬುದು ಭಗತ್‌ ಸಿಂಗ್‌ ಅವರ ಧ್ಯೇಯವಾಗಿತ್ತು’ ಎಂದರು.

‘ಇಂದಿಗೂ ದೇಶವನ್ನು ಆಳುತ್ತಿರುವ ಬಂಡವಾಳಿ ಶಾಹಿಗಳು ದುಡಿಯುವ ಜನರ ಬದುಕನ್ನು ಸರ್ವನಾಶದೆಡೆಗೆ ತಳ್ಳುತ್ತಿದ್ದಾರೆ. ಪ್ರತಿದಿನ ಸಾವಿರಾರು ಮಕ್ಕಳು ಹಸಿವೆಯಿಂದ ಸತ್ತರೆ, 20 ನಿಮಿಷಕ್ಕೊಬ್ಬ ರೈತನ ಆತ್ಮಹತ್ಯೆ, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ- ಮುಂತಾದವುಗಳು ಜನರ ಬದುಕನ್ನು ನರಕ ಸದೃಶವಾಗಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಭಗತ್ ಸಿಂಗ್‌ ಅವರಿಗೆ ವಿದ್ಯಾರ್ಥಿಗಳು ಕೊಡುವ ನಿಜವಾದ ಗೌರವವೆಂದರೆ; ಇಂದಿನ ಪರಿಸ್ಥಿತಿಯ ವಿರುದ್ಧ ಬಲಿಷ್ಠ ಹೋರಾಟಗಳನ್ನು ಕಟ್ಟುವುದು. ಅವರು ಕನಸು ಕಂಡ ಸಮಾಜವಾದವನ್ನು ಸ್ಥಾಪಿಸುವುದು’ ಎಂದು ಕರೆ ನೀಡಿದರು.

ಎಐಡಿವೈಒ ಜಿಲ್ಲಾ ಸಂಚಾಲಕ ರಾಜು ಗಾಣಗಿ ಇದ್ದರು. ಸಂಘಟನೆಯ ಜಿಲ್ಲಾ ಸಂಘಟಕಿ ಮೇಘಾ ಗುಳ್ಳನ್ನವರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕರ್ತರಾದ ಎಲ್ಲುಕಾ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕರ್ತರಾದ ಅಕ್ಷತಾ ತಳವಾರ, ಯಶವಂತ್ ಭಜಂತ್ರಿ, ಸುಮಿತ್ರಾ ಸೇರಿದಂತೆ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT