ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಅರ್ಥವಾಗದೇ ಸಂವಿಧಾನದ ಅರಿವಾಗದು: ಎಚ್‌.ಎನ್. ನಾಗಮೋಹನ್‌ದಾಸ್

Last Updated 9 ಜನವರಿ 2020, 11:10 IST
ಅಕ್ಷರ ಗಾತ್ರ

ಬೆಳಗಾವಿ: ‘ದೇಶದಲ್ಲಿರುವ ವಿವಿಧತೆಯಲ್ಲಿ ಏಕರೆ, ಬಹುತ್ವ, ಸಾಮಾಜಿಕ ವ್ಯವಸ್ಥೆ ಮೊದಲಾದವುಗಳನ್ನು ಅರ್ಥಮಾಡಿಕೊಳ್ಳದಿದ್ದರೆ ಸಂವಿಧಾನ ಅರ್ಥವಾಗುವುದಿಲ್ಲ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನ ದಾಸ್ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಕೀಲರ ಸಂಘ, ಸಹಯಾನ ಕೆರೆ ಕೋಣ ಮತ್ತು ಸಮುದಾಯ ಕರ್ನಾಟಕ ಸಹಯೋಗದಲ್ಲಿ ಗುರುವಾರ ನಗರದಲ್ಲಿ ಆಯೋಜಿಸಿದ್ದ ‘ಸಂವಿಧಾನ ಓದು ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.

‘ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳುವುದು ಬಹು ಮಹತ್ವದ್ದಾಗಿದೆ. ಆದರೆ, ವಕೀಲರು ಮತ್ತು ನ್ಯಾಯಾಧೀಶರೂ ಸಂಪೂರ್ಣವಾಗಿ ಓದಿಕೊಂಡಿಲ್ಲ’ ಎಂದು ವಿಷಾದಿಸಿದರು.

ಸಂವಿಧಾನ ಕಾರಣ

‘ನಿಜವಾದ ಭಾರತ ನಿರ್ಮಾಣವಾಗಿದ್ದು ಸಂವಿಧಾನ‌ ಬಂದ ನಂತರವೇ. ಒಂದಷ್ಟು ಜನಸಾಮಾನ್ಯರ ‌ಜೀವನ ಉತ್ತಮಗೊಳಿಸಲು ಸಂವಿಧಾನ ಕಾರಣವಾಗಿದೆ. ಸಾಕ್ಷರತೆ ಪ್ರಮಾಣ ಹೆಚ್ಚಳವಾಗಿದೆ. ಮಹಿಳಾ ಸಬಲೀಕರ ಸಾಧ್ಯವಾಗಿದೆ. ಅಲ್ಪಸಂಖ್ಯಾತರು, ದಲಿತರು ಹಾಗೂ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬಂದಿದ್ದಾರೆ. ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಇದಕ್ಕೆ ಕಾರಣವಾದದ್ದು ಸಂವಿಧಾನ’ ಎಂದು ತಿಳಿಸಿದರು.

‘ಕಾನೂನಿನ‌ ದೃಷ್ಟಿಯಲ್ಲಿ ಎಲ್ಲರೂ ಸಮಾನರೇ. ಸಂವಿಧಾನ ಎಲ್ಲ ಕಾನೂನುಗಳ ತಾಯಿ. ಅದನ್ನು ಓದಿದರೆ ಎಲ್ಲ ಕಾನೂನುಗಳನ್ನು ತಿಳಿದುಕೊಳ್ಳಬಹುದು. ಆ ತಾಯಿ ತೋರಿದ ಜಾಗದಲ್ಲಿ ಹೋದರೆ ನಮಗೆ, ಸಮಾಜಕ್ಕೆ ಹಾಗೂ ದೇಶಕ್ಕೆ ಅನುಕೂಲವಾಗುತ್ತದೆ’ ಎಂದು ಪ್ರತಿಪಾದಿಸಿದರು.

‘ಜಾಗತೀಕರಣದ ಇಂದಿನ ಯುಗದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಮಾರುಕಟ್ಟೆಯನ್ನಷ್ಟೇ ಅಲ್ಲ ನಮ್ಮ ಮನಸ್ಸುಗಳನ್ನೂ ನಿಯಂತ್ರಿಸುತ್ತಿವೆ. ಸರ್ಕಾರದ ಮೇಲೆ ಪ್ರಭಾವ ಬೀರುತ್ತಿವೆ. ಪರಿಣಾಮ ಸರ್ಕಾರಗಳು ಜವಾಬ್ದಾರಿಯಿಂದ ದೂರ ಸರಿಯುತ್ತಿವೆ. ಸಂವಿಧಾನದಲ್ಲಿರುವ ಕಲ್ಯಾಣ ರಾಜ್ಯದ ಕಲ್ಪನೆ ಅರ್ಥ ಮಾಡಿಕೊಂಡಿಲ್ಲದಿರುವುದೇ ಇದಕ್ಕೆ ಕಾರಣ’ ಎಂದು ವಿಷಾದಿಸಿದರು.

ಎಲ್ಲರೂ ತಿಳಿದುಕೊಳ್ಳಬೇಕು

ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಆರ್.ಜೆ. ಸತೀಶ್‌ಸಿಂಗ್‌ ಮಾತನಾಡಿ, ‘ಸಂವಿಧಾನವನ್ನು ಎಲ್ಲರೂ ಓದಬೇಕು. ಕಾನೂನುಗಳನ್ನು ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ‘ಸಂವಿಧಾನ ಕೆಲವರಷ್ಟೇ ತಿಳಿದುಕೊಳ್ಳಬೇಕು ಎನ್ನುವ ತಪ್ಪುಕಲ್ಪನೆ ಇದೆ. ಸಂವಿಧಾನ ರಚನೆಯಾಗಿ ಇಷ್ಟು ದಿನಗಳಾದರೂ ಅದು ನಮಗೆ ಏನು ಹಕ್ಕು, ಶಕ್ತಿ ಕೊಟ್ಟಿದೆ ಎನ್ನುವುದನ್ನು ಬಹುತೇಕರು ತಿಳಿದಿಲ್ಲ. ಆದರೆ, ತಪ್ಪಾಗಿ ಅರ್ಥೈಸಿಕೊಂಡಿರುವುದಿದೆ. ಹೀಗಾಗಿ, ಅಧಿಕಾರಿಗಳಾದ ನಾವು ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಏಜೆಂಟರು ಹಾಗೂ ಚಾಂಪಿಯನ್‌ಗಳಾಗಬೇಕು’ ಎಂದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ‘ಅರಿವಿಲ್ಲದಂತೆಯೇ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಇದಕ್ಕೆ ಮೂಲ ಕಾರಣ ಸಂವಿಧಾನ ಓದಿಕೊಂಡಿಲ್ಲದಿರುವುದೇ ಆಗಿದೆ’ ಎಂದು ಹೇಳಿದರು.

‘ಸಂವಿಧಾನ ರಚನಾ ಸಮಿತಿಯಲ್ಲಿನ ಚರ್ಚೆಗಳನ್ನು ಓದಿದರೆ ಸಂವಿಧಾನದ ಆಶಯವನ್ನು ಸಮರ್ಥವಾಗಿ ಅರ್ಥ ಮಾಡಿಕೊಳ್ಳಬಹುದು. ಸಂವಿಧಾನ ನಮ್ಮೆಲ್ಲ ಸಮಸ್ಯೆಗಳಿಗೂ ಪರಿಹಾರ ನೀಡಿದೆ. ಅದನ್ನು ಬಹಳಷ್ಟು ಮಂದಿ ಅರ್ಥ ಮಾಡಿಕೊಂಡಿಲ್ಲ’ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಜಯ ಅರಸ್‌, ವಕೀಲ ಅನಂತ ನಾಯ್ಕ, ವಕೀಲರ ಸಂಘ ಬೆಳಗಾವಿ ಘಟಕದ ಅಧ್ಯಕ್ಷ ಎ.ಜಿ. ಮುಳವಾಡಮಠ, ಸಂವಿಧಾನ ಓದು ಸಮಿತಿ ಸದಸ್ಯ ಕೆ.ಎಚ್. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT