ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಯುಗ ಅಂತ್ಯವಾಗಿದೆ, ಯುಗಾದಿಗೆ ಹೊಸ ಬೆಳವಣಿಗೆ: ಯತ್ನಾಳ್

Last Updated 2 ಫೆಬ್ರುವರಿ 2022, 14:22 IST
ಅಕ್ಷರ ಗಾತ್ರ

ಬೆಳಗಾವಿ: ‘ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರ‍ಪ್ಪ ಯುಗ ಅಂತ್ಯವಾಗಿದೆ. ಉಳಿದ ನಾಲ್ಕೈದು ಮಂದಿಯ ಯುಗವೂ ಮುಗಿಯುತ್ತಾ ಬಂದಿದೆ. ರಾಜ್ಯದಲ್ಲಿ ಪಕ್ಷಕ್ಕೆ 2ನೇ ಹಂತದ ನಾಯಕತ್ವ ಬೇಕಾಗಿದ್ದು, ಬದಲಾವಣೆ ಅವಶ್ಯ ಹಾಗೂ ಅನಿವಾರ್ಯವಾಗಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸ್ಥಾನದಿಂದ ಬಸವರಾಜ ಬೊಮ್ಮಾಯಿ ಅವರನ್ನು ಬದಲಾಯಿಸಲಾಗುತ್ತದೆ ಎನ್ನುವುದು ನನ್ನ ಮಾತಿನ ಅರ್ಥವಲ್ಲ’ ಎಂದರು.

‘ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಹೈಕಮಾಂಡ್‌ನವರು 2ನೇ ಹಂತದ ನಾಯಕತ್ವಕ್ಕೆ ಆದ್ಯತೆ ಕೊಡುತ್ತಾರೆಂಬ ವಿಶ್ವಾಸವಿದೆ’ ಎಂದು ತಿಳಿಸಿದರು.

‘ಯುಗಾದಿಗೆ ರಾಜ್ಯ ರಾಜಕಾರಣದಲ್ಲಿ ಒಳ್ಳೆಯ ಬೆಳವಣಿಗೆ ಆಗುತ್ತದೆ. ಹೊಸ ಮಂತ್ರಿಗಗಳು, ಹೊಸ ಪದಾಧಿಕಾರಿಗಳು ಬರಬಹುದು. ನಾನು ಸಚಿವ ಸ್ಥಾನ ಕೇಳಿಲ್ಲ. ಮುಂದಿನ ಚುನಾವಣೆಯಲ್ಲಿ ಮಹತ್ವಪೂರ್ವ ಜವಾಬ್ದಾರಿ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ’ ಎಂದು ಪ್ರತಿಕ್ರಿಯಿಸಿದರು.

‘ನಮ್ಮ ಕೆಲವು ಶಾಸಕರು ಕಾಂಗ್ರೆಸ್‌ಗೆ ಹೋಗುತ್ತಾರೆ ಎಂದು ಪರೀಕ್ಷಿಸುವುದಕ್ಕಾಗಿ ಹೇಳಿದ್ದೆ. ನಾವು ಹೋಗುವುದಿಲ್ಲ ಎಂದು ಎಲ್ಲರೂ ಸ್ಪಷ್ಟಪಡಿಸುತ್ತಿದ್ದಾರೆ ಅಷ್ಟು ಸಾಕು’ ಎಂದು ಹಾಸ್ಯ ಚಟಾಕಿ ಹಾರಿಸಿದರು.

‘ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಅವರನ್ನು ಬಿಜೆಪಿ ಉಪ ಮುಖ್ಯಮಂತ್ರಿ ಮಾಡಿದೆ. ಅಷ್ಟಾದರೂ ಬಿಟ್ಟು ಹೋದರೆ ಹೇಗೆ?’ ಎಂದು ಕೇಳಿದರು.

‘ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಪಕ್ಷದಲ್ಲಿ ಉಳಿಯುವ ಮನಸ್ಸಿದೆ. ಪ್ರಾದೇಶಿಕ ಪಕ್ಷ ಕಟ್ಟುವ ಹೊಲಸು ಕೆಲಸವನ್ನು ನಾನಂತೂ ಮಾಡುವುದಿಲ್ಲ. ಅವರು ಏನು ಮಾಡುತ್ತಾರೋ? ಹಾಗೇನಿಲ್ಲ ಎಂದು ನನ್ನ ಬಳಿ ಹೇಳಿದ್ದಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು ಒಂದಾಗಿ ಹೋಗಬೇಕು ಎಂದು ಚರ್ಚಿಸಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

ಮಜಾ ಮಾಡಲು ಪೀಠ ಸ್ಥಾಪಿಸಿದರೆ ಪ್ರಯೋಜನವಿಲ್ಲ:

‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ನೂರು ಪೀಠವಾದರೂ ಏನೂ ಆಗುವುದಿಲ್ಲ. ಕುರ್ಚಿ ಇಡ್ಕೊಂಡು ಕೂರುವುದರಿಂದ ಲಾಭವೇನೂ ಇಲ್ಲ. ಸಮುದಾಯದ ಭವಿಷ್ಯಕ್ಕಾಗಿ ಹೋರಾಡುವವರ ಹಿಂದೆ ಜನರು ಬರುತ್ತಾರೆ. ಮಜಾ ಮಾಡಲು, ಫೈನಾನ್ಸಿಯರ್‌ ಇದ್ದಾನೆ, ಕಾರ್ಯಕ್ರಮಕ್ಕೆ ₹ 25 ಲಕ್ಷ ಅಥವಾ ₹ 1 ಕೋಟಿ ಕೊಡುತ್ತಾನೆ ಎಂದ ಕೂಡಲೇ ಪೀಠಕ್ಕೆ ಗೌರವ ಬರುವುದಿಲ್ಲ’ ಎಂದು ಟೀಕಿಸಿದರು.

‘ಯಾರನ್ನೋ ಮುಖ್ಯಮಂತ್ರಿ ಅಥವಾ ಮಂತ್ರಿ ಮಾಡಲೆಂದು ಎಂದು ಮೀಸಲಾತಿ ಹೋರಾಟ ನಡೆಯುತ್ತಿಲ್ಲ‘ ಎಂದು ತಿಳಿಸಿದರು.

‘ಮಂತ್ರಿ ಮಾಡುವುದಕ್ಕಾಗಿ ಹರ ಜಾತ್ರೆ ನಡೆಸುವುದು, ಯಾರನ್ನೋ ಮುಖ್ಯಮಂತ್ರಿ ಮಾಡಲೆಂದು ಮತ್ತೊಂದು ಪೀಠ ಸ್ಥಾಪಿಸುವುದಲ್ಲ’ ಎಂದು ಟೀಕಿಸಿದರು.

‘ಸಮಾಜ ಒಡೆದವರೆಲ್ಲರೂ ನಮ್ಮನ್ನು ಬಿಟ್ಟು ಹೋಗಿದ್ದಾರೆ’ ಎಂದು ಸಚಿವ ಮುರುಗೇಶ ನಿರಾಣಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT