ಮಂಗಳವಾರ, ಜನವರಿ 28, 2020
23 °C
ಸಾವಿರಾರು ಭಕ್ತರ ಆಗಮನ, ಟೆಂಟ್‌ಗಳಲ್ಲಿ ಬಿಡಾರ

ಬೆಳಗಾವಿ: ಬನದ ಹುಣ್ಣಿಮೆಗೆ ಕಳೆಗಟ್ಟಿದ ಯಲ್ಲಮ್ಮನ ಗುಡ್ಡ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಶುಕ್ರವಾರದಿಂದ (ಜ.10) ಆರಂಭಗೊಳ್ಳಲಿರುವ ‘ಬನದ ಹುಣ್ಣಿಮೆ’ ಜಾತ್ರೆಗೆ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಯಲ್ಲಮ್ಮನ ಗುಡ್ಡದಲ್ಲಿರುವ ಉತ್ತರ ಕರ್ನಾಟಕದ ಪ್ರಸಿದ್ಧ ಶಕ್ತಿಪೀಠವಾದ ರೇಣುಕಾದೇವಿ ದೇವಸ್ಥಾನ ಸಜ್ಜಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳು, ನೆರೆಯ ಮಹಾರಾಷ್ಟ್ರದಿಂದ ಸಹಸ್ರಾರು ಮಂದಿ ಭಕ್ತರು ಬಂದಿದ್ದು, ತಮ್ಮ ಎತ್ತಿನಗಾಡಿಗಳು ಮತ್ತು ವಾಹನಗಳನ್ನು ಬಳಸಿ ತಾತ್ಕಾಲಿಕ ಟೆಂಟ್‌ ಹಾಕಿಕೊಂಡು ಬಿಡಾರ ಹೂಡಿದ್ದಾರೆ.

ಭಕ್ತರು, ದೇವಿ ದರ್ಶನ ಪಡೆದು ಜಾತ್ರೆಯನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಬಹುತೇಕರು ದೂರದ ಊರುಗಳಿಂದ ಎತ್ತಿನಗಾಡಿಗಳಲ್ಲಿ ಕುಟುಂಬ ಸಮೇತವಾಗಿ ಬಂದು ಪಾಲ್ಗೊಳ್ಳುವುದು ಈ ಜಾತ್ರೆಯ ವಿಶೇಷ. ಹಲವರು ಪಾದಯಾತ್ರೆಯಲ್ಲೂ ಬಂದು ಹರಕೆ ತೀರಿಸುವುದೂ ಉಂಟು. ಶುಕ್ರವಾರವೊಂದೇ (ಜ.10) ದಿನ 5 ಲಕ್ಷಕ್ಕೂ ಹೆಚ್ಚಿನ ಭಕ್ತರು ದೇವಿಯ ದರ್ಶನ ಪಡೆಯುವ ನಿರೀಕ್ಷೆ ಇದೆ.

ದರ್ಶನ ಪಡೆಯಲು

ಬರೋಬ್ಬರಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಹರಡಿರುವ ಗುಡ್ಡದ ಪರಿಸರದಲ್ಲಿ ಜನರು ತಂಗಿದ್ದಾರೆ. ತಾತ್ಕಾಲಿಕ ಟೆಂಟ್‌ಗಳನ್ನು ಹಾಕಿದ್ದು, ಅಲ್ಲಿಯೇ ಸಿಹಿ ಅಡುಗೆ ತಯಾರಿಸಿ ದೇವಿಗೆ ಮೀಸಲು ನೈವೇದ್ಯ ಅರ್ಪಿಸಿ, ನಂತರ ವಿವಿಧ ವಾದ್ಯಗಳೊಂದಿಗೆ ಭಂಡಾರದ ಓಕುಳಿಯೊಂದಿಗೆ ದೇವಿಯ ಪ್ರಾಂಗಣಕ್ಕೆ ಬಂದು ಯಲ್ಲಮ್ಮ ದೇವಿಯ ದರ್ಶನ ಪಡೆಯುವುದು ಸಂಪ್ರದಾಯ. ಇದಕ್ಕಾಗಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ.

ಜೋಗುಳ ಬಾವಿಗೆ ಬರುವ ಭಕ್ತರು, ಅಲ್ಲಿ ಪುಣ್ಯಸ್ನಾನ ಮಾಡಿ ನಂತರ ಯಲ್ಲಮ್ಮನಗುಡ್ಡದತ್ತ ತೆರಳುತ್ತಾರೆ. ಹೀಗೆ ಹೋಗುವಾಗ ‘ಉಧೋ ಉಧೋ ಯಲ್ಲಮ್ಮ’ ಎಂಬ ಘೋಷಣೆಗಳು ಮೊಳಗುತ್ತವೆ.

‘ಈಗಾಗಲೇ ಗುಡ್ಡದೆಲ್ಲೆಡೆ ಭಕ್ತರ ಕಲರವ ಆರಂಭವಾಗಿದೆ. ಬನದ ಹುಣ್ಣಿಮೆಯಂದು ದೇವಿ ದರ್ಶನ ಪಡೆದರೆ ಒಳಿತಾಗುತ್ತದೆ ಎಂಬ ಪ್ರತೀತಿ ಇದೆ. ಒಂದು ದಿನ ಮುಂಚಿತವಾಗಿಯೇ ಬಂದಿರುವ ಭಕ್ತರು, 2–3 ದಿನಗಳವರೆಗೆ ಇಲ್ಲಿಯೇ ಇರುತ್ತಾರೆ. ಜಾತ್ರೆಯು ಶಿವರಾತ್ರಿವರೆಗೂ ಇರುತ್ತದೆ. 4ನೇ ದಿನದ ನಂತರ ಶುಕ್ರವಾರ ಮತ್ತು ಮಂಗಳವಾರದಂದು ಹೆಚ್ಚಿನ ಜನಸಂದಣಿ ಇರುತ್ತದೆ. ಫೆ. 9ರಂದು ಭಾರತ ಹುಣ್ಣಿಮೆಯಂದೂ ಭಕ್ತರ ಸಂಖ್ಯೆ ಜಾಸ್ತಿ ಇರುತ್ತದೆ’ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೊಟಾರಗಸ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅಗತ್ಯ ಸಿದ್ಧತೆ

‘ಹೆಚ್ಚಿನ ಜನರಿಗೆ ಅನುಕೂಲವಾಗಲೆಂದು, ಶುಕ್ರವಾರ ನಸುಕಿನಿಂದಲೇ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು’ ಎಂದು ಹೇಳಿದರು.

‘ಭಕ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಖ್ಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. 5 ಲಕ್ಷ ಲೀಟರ್‌ ಸಾಮರ್ಥ್ಯದ 4 ಟ್ಯಾಂಕ್‌ಗಳಿವೆ. 5ಸಾವಿರ ಲೀಟರ್ ಸಾಮರ್ಥ್ಯದ 40 ಮಿನಿ ಟ್ಯಾಂಕರ್‌ಗಳನ್ನು ಗುಡ್ಡದಾದ್ಯಂತ ಸಂಚರಿಸಲಿವೆ. ಅವುಗಳಿಗೆ ತಲಾ20 ನಲ್ಲಿಗಳಿರುತ್ತವೆ. ಅವುಗಳ ಮೂಲಕ ಜನರು ನೀರು ಸಂಗ್ರಹಿಸಿಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

‘ಶನಿವಾರ ಮಧ್ಯಾಹ್ನದಿಂದಲೇ ಸ್ವಚ್ಛತಾ ಕಾರ್ಯಾಚರಣೆ ನಡೆಯುತ್ತದೆ. ದೇವಸ್ಥಾನದ 40 ಮಂದಿ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ 40 ಪೌರಕಾರ್ಮಿಕರನ್ನು ಈ ಕಾರ್ಯಕ್ಕೆ ಬಳಸಲಾಗುವುದು. ಸ್ವಚ್ಛತೆ ಕಾಪಾಡಿಕೊಳ್ಳಲು ಭಕ್ತರು ಕೂಡ ಸಹಕರಿಸಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಲು ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ. ವಿವಿಧೆಡೆ ಪೊಲೀಸ್‌ ಸಹಾಯವಾಣಿ ಇದೆ. ಅಲ್ಲಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ಅಲ್ಲಲ್ಲಿ 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೈಮಾಸ್ಟ್‌ ವಿದ್ಯುತ್‌ ದೀಪಗಳನ್ನು ಹಾಕಲಾಗಿದೆ. ಸಂಚಾರಿ ಆಸ್ಪತ್ರೆ, ಆರೋಗ್ಯ ಸೇವೆ ನೀಡಲು ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು