ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ ಪ್ರಕರಣ | ಸಹೋದರಿಯನ್ನು ಪ್ರೀತಿಸಿದ ಯುವಕನ ಕೊಲೆ; ಆರೋಪಿಯ ಬಂಧನ

Published 16 ಮೇ 2024, 13:24 IST
Last Updated 16 ಮೇ 2024, 13:24 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಮಹಾಂತೇಶ ನಗರದ ರಾಷ್ಟ್ರೀಯ ಹೆದ್ದಾರಿ ಸೇತುವೆ ಬಳಿ ಕನಕದಾಸ ವೃತ್ತದಲ್ಲಿ ಗುರುವಾರ ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಯುವಕನ ಕೊಲೆ ಮಾಡಲಾಗಿದೆ. ಪ್ರೀತಿ–ಪ್ರೇಮದ ವಿಷಯವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಧಿ ನಗರದ ನಿವಾಸಿ, ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಇಬ್ರಾಹಿಂ ಗೌಸ್‌ (22) ಕೊಲೆಯಾದವರು. ಇದೇ ಪ್ರದೇಶದ ಬೈಕ್‌ ಮೆಕ್ಯಾನಿಕ್‌ ಮುಜಮಿಲ್ ಸತ್ತಿಗೇರಿ (23) ಆರೋಪಿ.

ಮುಜಮಿಲ್‌ ಅವರ ಸಹೋದರಿ ಹಾಗೂ ಇಬ್ರಾಹಿಂ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಡುವಂತೆ ಯುವತಿಯ ಮನೆಯವರಲ್ಲಿ ಮಾತುಕತೆ ನಡೆಸಿದ್ದರು. ಈ ಪ್ರೇಮ ವಿವಾಹಕ್ಕೆ ಹುಡುಗಿ ಮನೆಯವರು ನಿರಾಕರಿಸಿದ್ದರು. ಅಲ್ಲದೇ, ಪರಸ್ಪರ ದೂರ ಇರುವಂತೆ ಪ್ರೇಮಿಗಳಿಗೆ ತಾಕೀತು ಮಾಡಿದ್ದರು.

ಗುರುವಾರ ಯುವತಿಯನ್ನು ಭೇಟಿಯಾದ ಇಬ್ರಾಹಿಂ ಬೈಕಿನಲ್ಲಿ ಸುತ್ತಾಡಿಸುತ್ತಿದ್ದ. ಇದನ್ನು ಕಂಡು ಮುಜಮಿಲ್‌ ಬೈಕ್‌ ನಿಲ್ಲಿಸಿ ತಕರಾರು ತೆಗೆದ. ತನ್ನೊಂದಿಗೆ ಮನೆಗೆ ಬರುವಂತೆ ಸಹೋದರಿಯನ್ನು ಒತ್ತಾಯಿಸಿದ. ಯುವತಿ ಅದಕ್ಕೆ ಒಪ್ಪಲಿಲ್ಲ. ಈ ವೇಳೆ ಇಬ್ಬರೂ ಯುವಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮುಜಮಿಲ್‌ ತನ್ನ ಬಳಿ ಇದ್ದ ಸ್ಕ್ರೂಡ್ರೈವರ್‌ನಿಂದ ಇಬ್ರಾಹಿಂನ ಹೊಟ್ಟೆಗೆ ಚುಚ್ಚಿದ.

ಸ್ಥಳದಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವಕನನ್ನು ಸಂಚಾರ ಠಾಣೆ ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಯುವಕ ಕೊನೆಯುಸಿರೆಳೆದ ಎಂದು ಮಾಳಮಾರುತಿ ಠಾಣೆಯ ಸಿಪಿಐ ಜೆ.ಎಂ.ಕಾಲಿಮಿರ್ಚಿ ತಿಳಿಸಿದ್ದಾರೆ.

ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಇದರಲ್ಲಿ ಯಾರ ತಪ್ಪಿದೆ ಎಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದೂ ಸಿಪಿಐ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT