ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ‘ಕನ್ನಡ ಡಿಂಡಿಮ’ಕ್ಕೆ ಕ್ಷಣಗಣನೆ!

Last Updated 1 ನವೆಂಬರ್ 2014, 8:03 IST
ಅಕ್ಷರ ಗಾತ್ರ

ಬೆಳಗಾವಿ: ನಗರದಾದ್ಯಂತ ಕನ್ನಡದ ಕಂಪು ಪಸರಿಸಿದೆ. ಎಲ್ಲೆಂದರಲ್ಲಿ ಕನ್ನಡದ ಬಾವುಟಗಳು ರಾರಾಜಿಸುತ್ತಿವೆ. ‘ಬೆಳಗಾವಿ’ ಎಂದು ನಗರದ ಹೆಸರನ್ನು ಹೆಮ್ಮೆಯಿಂದ ಹೇಳಿಕೊಳ್ಳಲು ಕನ್ನಡದ ಮನಸ್ಸುಗಳು ಕಾತುರದಲ್ಲಿವೆ. ಪ್ರತಿ ವರ್ಷಕ್ಕಿಂತ ಈ ವರ್ಷದ ರಾಜ್ಯೋತ್ಸವಕ್ಕೆ ಹೆಚ್ಚಿನ ವಿಶೇಷತೆ ಬಂದಿದ್ದು, ಅದ್ದೂರಿ ಉತ್ಸವಕ್ಕೆ ಸಜ್ಜಾಗಿದೆ.

ಬೆಳಗಾಂ ಎಂಬುವುದನ್ನು ಬೆಳಗಾವಿ ಎಂದು ನಾಮಕರಣ ಮಾಡಲು ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲ. ಆದರೆ, ಕನ್ನಡಿಗರು ಮಾತ್ರ ಹೆಸರು ಬದಲಾವಣೆ ಮಾಡಿ ‘ಬೆಳಗಾವಿ’ ಎಂದು ಘೋಷಿಸಬೇಕು ಎಂದು ಜಿಲ್ಲಾ ಆಡಳಿತದ ಮೇಲೆ ಒತ್ತಡ ತಂದಿದ್ದಾರೆ. ಈ ಮೂಲಕ ರಾಜ್ಯೋತ್ಸವದ ಕೊಡುಗೆ ನೀಡಬೇಕು ಎಂಬುದು ಕನ್ನಡ ಹೋರಾಟಗಾರರ ಒತ್ತಾಯ.

‘ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ‘ಬೆಳಗಾವಿ’ ಎಂದು ಘೋಷಣೆ ಮಾತ್ರ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಮಾಡಬ­ಹುದು. ಈ ಕುರಿತು ಸರ್ಕಾರದ ಅಧಿಸೂಚನೆ ಇನ್ನೂ ಬಂದಿಲ್ಲ. ಅದಕ್ಕಾಗಿ ಸದ್ಯ ನಾವೇನೂ ಇದಕ್ಕಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿಲ್ಲ’ ಎಂದು ಜಿಲ್ಲಾಧಿಕಾರಿ ಎನ್‌.ಜಯರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಸರು ಬದಲಾವಣೆಗೆ ಸರ್ಕಾರದಿಂದ ಆದೇಶ ಬಂದ ನಂತರ ಮತ್ತೊಂದು ಅದ್ದೂರಿ ಕಾರ್ಯಕ್ರಮ ಆಯೋಜಿಸಿ ‘ಬೆಳಗಾವಿ’ ಎಂದು ನಾಮಕರಣ ಮಾಡಲು ಉದ್ದೇಶಿಸಲಾಗಿದೆ’ ಎಂದು ಅವರು ಹೇಳಿದರು.

ಹೆಸರು ಬದಲಾವಣೆ ಆಗದಿದ್ದರೂ ಗಡಿ ನಾಡಿನ ಕನ್ನಡಿಗರು ಕನ್ನಡ ಹಬ್ಬವನ್ನು ಆಚರಿಸಲು ಬಹಳ ಉತ್ಸುಕತೆ ತೋರಿದ್ದಾರೆ. ಜಿಲ್ಲಾ ಆಡಳಿತ ಸಹ ಕನ್ನಡ ರಾಜ್ಯೋತ್ಸವಕ್ಕೆ ಅದ್ದೂರಿ ತಯಾರಿ ಮಾಡಿದೆ. ಇದರಿಂದ ಕನ್ನಡಿಗರಲ್ಲಿ ಹುಮ್ಮಸ್ಸು ಇಮ್ಮಡಿಯಾಗಿದೆ.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಶೋಕ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳು ಹಾಗೂ ಸರ್ಕಾರಿ ಕಚೇರಿಗಳು ವಿದ್ಯುತ್‌ ದೀಪಾಲಂಕಾರದಿಂದ ಝಗಮಗಿ­ಸುತ್ತಿವೆ. ನಗರದ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಸ್ವಾಗತ ಕಮಾನುಗಳನ್ನು ಹಾಕಲಾಗಿದೆ. ನಗರದ ತುಂಬೆಲ್ಲ ಕನ್ನಡ ದಿಗ್ಗಜರ ಕಟೌಟ್‌ಗಳು ರಾರಾಜಿಸುತ್ತಿವೆ. ನಗರಕ್ಕೆ ಹಬ್ಬದ ಕಳೆ ತಂದುಕೊಟ್ಟಿವೆ. ಕನ್ನಡಪರ ಸಂಘಟನೆಗಳೂ ಸಹ ಸರ್ಕಾರಿ ಇಲಾಖೆಗಳಿಗಿಂತ ವಿಭಿನ್ನ ರೀತಿಯಲ್ಲಿ ‘ಕನ್ನಡ ಹಬ್ಬ’ವನ್ನು ಆಚರಿಸಲು ಹೊರಟಿವೆ. ಗಡಿನಾಡಿನಲ್ಲಿ ಕನ್ನಡ ಡಿಂಡಿಮ ಮೊಳಗಿಸಲು ಎಲ್ಲ ರೀತಿಯ ಸಿದ್ಧತೆಗಳು ಮಾಡಿಕೊಳ್ಳಲಾಗಿದೆ.

ಸಿಪಿಇಡಿ ಮೈದಾನದಿಂದ ಚಾಲನೆ
ಈ ಹಿಂದೆ ಜಿಲ್ಲಾಧಿಕಾರಿ ಕಚೇರಿಯಿಂದ ಕನ್ನಡ ರಾಜ್ಯೋತ್ಸವದ ಮೆರವಣಿಗೆಗೆ ಚಾಲನೆ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಕನ್ನಡಿಗರು ಅತ್ಯಧಿಕ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇರುವದರಿಂದ ಸಿಪಿಇಡಿ ಮೈದಾನದಿಂದ ಮೆರವಣಿಗೆಗೆ ಚಾಲನೆ ನೀಡಲಾಗುತ್ತಿದೆ. ಜಿಲ್ಲಾ ಆಡಳಿತದ ಈ ನಿರ್ಣಯ ಗಡಿನಾಡ ಕನ್ನಡಿಗರಲ್ಲಿ ಸಂತಸ ತಂದಿದೆ. ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧೆಡೆಗಳಿಂದ ಜಾನಪದ ಕಲಾ ತಂಡಗಳು ಬರಲಿದ್ದು, ಕನ್ನಡ ಕಂಪನ್ನು ಹರಿಸಲಿವೆ. ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ನಾಡದೇವಿ ಭುವನೇಶ್ವರಿ ಸೇರಿದಂತೆ ಕನ್ನಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರೂಪಕಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

10 ಸಾವಿರ ಜನರಿಗೆ ಊಟದ ವ್ಯವಸ್ಥೆ
ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಶನಿವಾರ ನಗರಕ್ಕೆ ಬರಲಿರುವ ಕನ್ನಡ ಸಂಘಟನೆಗಳ ಮುಖಂಡರು, ಸಾಹಿತಿಗಳು, ಚಿಂತಕರು, ಶಾಲಾ ಮಕ್ಕಳು ಸೇರಿದಂತೆ 10 ಸಾವಿರ ಜನರಿಗೆ ಇಲ್ಲಿನ ಸರ್ದಾರ್‍ಸ್‌ ಪ್ರೌಢಶಾಲೆ ಮೈದಾನದಲ್ಲಿ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಊಟದ ವ್ಯವಸ್ಥೆ ಮಾಡಿದ್ದಾರೆ.

ಹುನ್ನಾರ: ಪ್ರತಿವರ್ಷ ನಗರದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ‘ಕರಾಳ ದಿನ’ ಆಚರಿಸುತ್ತ ಬಂದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮುಖಂಡರು ಈ ಬಾರಿಯೂ ‘ಕ್ಯಾತೆ’ ತೆಗೆಯುವ ಹುನ್ನಾರ ನಡೆಸಿದ್ದಾರೆ.
ಎಂಇಎಸ್‌ ಮುಖಂಡರು ಕರಾಳ ದಿನಾಚರಣೆ ಮೆರವಣಿಗೆಯಲ್ಲಿ ಮಕ್ಕಳನ್ನು ಮುಂದೆ ಬಿಟ್ಟು, ‘ಝಾಲಾಚ್‌ ಪಾಹಿಜೇ’ ಘೋಷಣೆ ಮೊಳಗಿಸಲು ತಂತ್ರ ಹೆಣೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT