ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಹಬ್ಬಕ್ಕೆ ಸಜ್ಜಾದ ಕುಂದಾನಗರ

Last Updated 20 ಅಕ್ಟೋಬರ್ 2014, 6:36 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಕಿನ ಹಬ್ಬ ದೀಪಾವಳಿಗೆ ಸಡಗರ, ಸಂಭ್ರಮ ಮನೆ ಮಾಡಿದೆ. ನಗರದ ಮಾರುಕಟ್ಟೆಯನ್ನು ದೀಪಗಳ ಹಬ್ಬವು ಬೆಳಗಲು ಆರಂಭಿಸಿದೆ. ರಸ್ತೆಯ ಪಕ್ಕದಲ್ಲಿ ರಾರಾಜಿಸುತ್ತಿರುವ ಆಕಾಶ (ಕಾರ್ತಿಕ) ಬುಟ್ಟಿ, ಬಣ್ಣ ಬಣ್ಣದ ರಂಗೋಲಿ, ವೈವಿಧ್ಯಮಯ ಹಣತೆಗಳು ಹಬ್ಬದ ಬರುವಿಕೆಯನ್ನು ಸಾರಿ ಹೇಳುತ್ತಿವೆ.

ದೀಪಾವಳಿಯು ಕೆಲವರಿಗೆ ಪಟಾಕಿ ಹಬ್ಬ, ಕೆಲವರಿಗೆ ಕೃಷಿ ಹಬ್ಬ, ಮತ್ತೆ ಕೆಲವರಿಗೆ ಲಕ್ಷ್ಮೀಪೂಜೆ... ಹೀಗೆ ಜನಪದ ಹಾಗೂ ವ್ಯಾಪಾರಸ್ಥರ ಹಬ್ಬವೂ ಆಗಿರುವ ದೀಪಾವಳಿ­ಯನ್ನು ವಿಜೃಂಭ­ಣೆಯಿಂದ ಆಚರಿಸಲು ಕುಂದಾನಗರಿಯ ಜನತೆ ಸಿದ್ಧತೆ ಮಾಡಿಕೊಂಡಿದ್ದಾರೆ. ಸೀಗಿ ಹುಣ್ಣಿಮೆ ಮುಗಿಯುತ್ತಿದ್ದಂತೆ ದೀಪಾವಳಿ ಹಬ್ಬದ ಸಡಗರ ಶುರುವಾಗುತ್ತದೆ. ‘ಸುಗ್ಗಿ’ಗೆ ಮೊದಲ ದೊಡ್ಡ ಹಬ್ಬ ದೀಪಾವಳಿ. ರೈತರಲ್ಲಿ ಹುಮ್ಮಸ್ಸು ಮೂಡಿಸಿದರೆ, ವ್ಯಾಪಾ­ರಸ್ಥರಲ್ಲಿ ವರ್ಷದ ಖಾತೆ–ಖಿರ್ದಿ ಮುಗಿಸುವ ತವಕ. ದೀಪಾವಳಿ ಅಮವಾಸ್ಯೆ ಅಥವಾ ಪಾಡ್ಯದಂದು ಲಕ್ಷ್ಮಿ ಪೂಜೆ ಮಾಡುವುದರೊಂದಿಗೆ ಹೊಸ ವರ್ಷದ ಲೆಕ್ಕದ ಪುಸ್ತಕ ತೆರಯಲಾಗುತ್ತದೆ. ದೀಪ ಬೆಳಗಲು ಹಣತೆಯ ವ್ಯಾಪಾರ ಒಂದಡೆಯಾದರೆ, ಅಂಗಡಿಗಳು, ಮನೆಗಳು, ಸಂಸ್ಥೆಗಳು ಸುಣ್ಣ– ಬಣ್ಣ ಮೆತ್ತಿ­ಕೊಂಡು ಬೆಳಕಿನ ಹಬ್ಬಕ್ಕಾಗಿ ಕಂಗೊಳಿ­ಸುತ್ತಿವೆ. ಹಗಲು ಹೊತ್ತಿನಲ್ಲಿ ವ್ಯಾಪಾರ ನಡೆಸುವ ಅಂಗಡಿ­ಕಾರರು, ರಾತ್ರಿ ಸಮಯದಲ್ಲಿ ಸುಣ್ಣ– ಬಣ್ಣ ಬಳದಿದ್ದಾರೆ. ಬಣ್ಣ– ಬಣ್ಣದ ಚಿತ್ತಾರದ, ಆಕರ್ಷಕ ಹಣತೆಗಳ ಮಾರಾಟ ಭರದಿಂದ ನಡೆದಿದೆ. ಮಾರುಕಟ್ಟೆ ಪ್ರದೇಶದಲ್ಲಿ ಒಂದೇ ಕಡೆಗೆ ಎರಡು ಅಂಗಡಿಗಳಲ್ಲಿ ಹಣತೆಗಳ ಮಾರಾಟ ನಡೆದಿದೆ. ಮಾರುತಿ ಗಲ್ಲಿಯಲ್ಲಿಯೂ ರಸ್ತೆ ಬದಿಗೆ ಹಣತೆಗಳ ಸಾಲನ್ನು ಕಾಣಬಹುದು.

ಖಾನಾಪುರ ತಾಲ್ಲೂಕಿನ ಗುಂಜಿ ಗ್ರಾಮದಿಂದ ಹಣತೆಗಳು ಮಾರುಕಟ್ಟೆಗೆ ಬರುತ್ತವೆ. ಇವುಗಳ ಜೊತೆಗೆ ತಮಿಳುನಾಡು, ಆಂಧ್ರಪ್ರದೇಶ, ಬೆಂಗಳೂರು ಸೇರಿದಂತೆ ಹೊರಗಿನ ಊರುಗಳಿಂದ ಬರುವ ಹಣತೆಗಳ ವ್ಯಾಪಾರಕ್ಕೆ ಪೈಪೋಟಿ ನಡೆದಿದೆ. ವೈವಿಧ್ಯಮಯ, ಚಿತ್ತಾಕರ್ಷಕ ಹಣತೆಗಳು ಗಮನ ಸೆಳೆಯುತ್ತವೆ. ಮಣ್ಣಿನ ಹಣತೆಗಳ ಜೊತೆಗೆ ಚೀನಿ ಮಣ್ಣಿನಿಂದ ತಯಾರಾದ ದೀಪದ ಕುಂಡಗಳು, ಅಲಂಕಾರಿಕ ಮೇಣದ ಬತ್ತಿಗಳು, ಎಣ್ಣೆ ದೀಪಗಳು, ಸಾಲು ದೀಪಗಳು, ಗಣೇಶ, ಲಕ್ಷ್ಮೀ, ಹೀಗೆ ವಿವಿಧ ದೇವತೆಗಳನ್ನು ಬಿಂಬಿಸುವ ಚಿತ್ರಗಳನ್ನು ಒಳಗೊಂಡಿರುವ ವಿಭಿನ್ನ ವಿನ್ಯಾಸದ ಹಣತೆಗಳ ಮಾರಾಟ ಭರದಿಂದ ಸಾಗಿದೆ.

‘ನಾನು 35 ವರ್ಷಗಳಿಂದ ಹಣತೆ ವ್ಯಾಪಾರ ನಡೆಸಿದ್ದೇನೆ. ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ನಿಂದ ಸಹ ಹಣತೆ ತಯಾರಾಗುತ್ತಿರುವುದರಿಂದ ಮಣ್ಣಿನ ಹಣತೆಗಳಿಗೆ ಬೇಡಿಕೆ ಕುಗ್ಗಿದೆ. 10 ವರ್ಷದ ಹಿಂದೆ ಮಣ್ಣಿನ ಹಣತೆ ವ್ಯಾಪಾರ ಮುಗಿಯುವ ಹಂತದಲ್ಲಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ’ ಎಂದು ಮಾರುಕಟ್ಟೆ ಪ್ರದೇಶದ ವ್ಯಾಪಾರಿ ಸಮೀರ ಎಂ. ಶಹಾಪುರ ಹೇಳುತ್ತಾರೆ.

‘ಮಣ್ಣಿನ ಹಣತೆ ಅಲ್ಲದೇ ಪಂಚಲೋಹ, ಪ್ಲಾಸ್ಟಿಕ್‌, ಸ್ಟೀಲ್‌ನ ಸಿದ್ಧ ದೀಪಗಳು ದೀಪಾವಳಿಯಲ್ಲಿ ಬೆಳಕು ನೀಡಲು ಮಾರುಕಟ್ಟೆಗೆ ಆಗಮಿಸಿವೆ. ಪ್ಲಾಸ್ಟಿಕ್‌ ಕಾಟದಿಂದ ಕುಂಬಾ­ರರು ಹಣತೆ ಮಾಡುವುದನ್ನೇ ಕೈಬಿಟ್ಟಿದ್ದಾರೆ. ಮಣ್ಣಿನ ಹಣತೆಯೇ ಶ್ರೇಷ್ಠ ಎಂದು ಹೇಳಲಾದರೂ, ಈಗಿನ ಪರಿಸ್ಥಿತಿಯಲ್ಲಿ ಪ್ಲಾಸ್ಟಿಕ್‌ ಹಣತೆಗಳಿಗೂ ಬೇಡಿಕೆ ಬಂದಿದೆ’ ಎನ್ನುತ್ತಾರೆ ಅವರು.

ಮಾರುಕಟ್ಟೆಯಲ್ಲಿ ಜನಸಂದಣಿ: ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಿದೆ. ನಗರದ ಬಟ್ಟೆ ಅಂಗಡಿ, ಗೃಹೋಪಯೋಗಿ ಅಂಗಡಿ, ಇಲೆಕ್ಟ್ರಾನಿಕ್ಸ್‌ ಮಳಿಗೆ, ದಿನಸಿ ಅಂಗಡಿಗಳಲ್ಲಿ ಹಬ್ಬದ ಖರೀದಿ ಜೋರಾಗಿ ನಡೆದಿದೆ. ಜಿಲ್ಲೆಯ ವಿವಿಧ ಪಟ್ಟಣ ಹಾಗೂ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿಭಾಗಗಳ ಜನರು ಹಬ್ಬದ ಖರೀದಿಗಾಗಿ ಬೆಳಗಾವಿ ಮಾರುಕಟ್ಟೆಗೆ ಬರಲಾರಂಭಿಸಿದ್ದಾರೆ.

ಸಿದ್ಧ ಉಡುಪುಗಳ ಮಳಿಗೆ ಹಾಗೂ ದೊಡ್ಡ ದೊಡ್ಡ ಬಟ್ಟೆ ಅಂಗಡಿಗಳು ಭಾರಿ ಪ್ರಮಾಣದ ರಿಯಾಯಿತಿಯನ್ನು ಘೋಸಿಸಿದ್ದು, ‘ಲಕ್ಕಿ ಡ್ರಾ ಕೂಪನ್‌’ಗಳ ಮೂಲಕ ಗ್ರಾಹಕರನ್ನು ತಮ್ಮತ್ತ ಸೆಳೆದುಕೊಳ್ಳಲು ಪೈಪೋಟಿ ನಡೆಸುತ್ತಿವೆ.

ಗಣಪತಿ ಗಲ್ಲಿ, ಮಾರುತಿ ಗಲ್ಲಿ, ರವಿವಾರ ಪೇಟೆ, ಕಿರ್ಲೋಸ್ಕರ್‌ ರಸ್ತೆ ಸೇರಿದಂತೆ ನಗರದ ಮಾರುಕಟ್ಟೆಯಲ್ಲಿ  ಹಬ್ಬದ ಸಡಗರ ಕಂಡು ಬರುತ್ತಿದೆ. ರಸ್ತೆ ಪಕ್ಕದಲ್ಲಿನ ಅಂಗಡಿಗಳಲ್ಲಿ ವೈವಿಧ್ಯಮಯ ಆಕಾಶ ಬುಟ್ಟಿಗಳು ಕಣ್ಮನ ಸೆಳೆಯುತ್ತಿವೆ. ದೀಪಾವಳಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಆಕಾಶ ಬುಟ್ಟಿ ಖರೀದಿ ಬಲು ಜೋರು. ಹಬ್ಬದ ದಿನ ಸುಂದರ ರಂಗೋಲಿಗಳನ್ನು ಬಿಡಿಸಲು ವಿವಿಧ ಬಣ್ಣದ ರಂಗೋಲಿ ಹುಡಿ ಹಾಗೂ ವಿವಿಧ ವಿನ್ಯಾಸವುಳ್ಳ ರಂಗೋಲಿ ಅಚ್ಚುಗಳನ್ನು ಮಹಿಳೆಯರು ಖರೀದಿಸುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಅನಾರ ಆಕಾಶ ಬುಟ್ಟಿ ದರ ₨180, ಸ್ಟಾರ್‌ ಆಕಾಶ ಬುಟ್ಟಿಗಳ ದರ ₨100 ರಿಂದ ₨250, ಲೋಟಸ್‌ ಬುಟ್ಟಿಗಳಿಗೆ ₨150 ರಿಂದ 300, ಮಧ್ಯಮ ಹಾಗೂ ಸಣ್ಣ ಗಾತ್ರದ ಆಕಾಶ ಬುಟ್ಟಿಗಳು ಪ್ರತಿ ಡಜನ್‌ಗೆ ₨100 ರಿಂದ ₨40 ದರದಲ್ಲಿ ಮಾರಾಟ ಆಗುತ್ತಿವೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಕ್ಕಳು ತಮ್ಮ ಮನೆ ಯ ಎದುರು ಮಣ್ಣಿನ ಕೋಟೆ ನಿರ್ಮಿಸಿ, ಶಿವಾಜಿ ಮಹಾರಾಜರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಭ್ರಮಿಸುತ್ತಾರೆ. ಕೋಟೆ ನಿರ್ಮಾಣದ ಕೆಲಸ ಅಂತಿಮ ಹಂತ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT