ಮಂಗಳವಾರ, ಏಪ್ರಿಲ್ 20, 2021
29 °C
150 ಅಡಿ ಧ್ವಜಸ್ತಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಆನಂದ್‌ ಸಿಂಗ್‌

ವಿಜಯನಗರಕ್ಕೆ ಉಜ್ವಲ ಭವಿಷ್ಯ: ಧ್ವಜಾರೋಹಣ ನೆರವೇರಿಸಿದ ಆನಂದ್‌ ಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಗಣರಾಜ್ಯೋತ್ಸವದ ಪ್ರಯುಕ್ತ ನಗರದ ರೋಟರಿ ವೃತ್ತದಲ್ಲಿನ 150 ಅಡಿ ಧ್ವಜಸ್ತಂಭದಲ್ಲಿ ಮೂಕಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್ ಸಿಂಗ್ ಅವರು ಸೋಮವಾರ ಬೆಳಿಗ್ಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಮೈಕೊರೆಯುವ ಚಳಿಯಿದ್ದರೂ ಅದನ್ನು ಲೆಕ್ಕಿಸದೆ ಬೆಳಿಗ್ಗೆ ಆರು ಗಂಟೆಗೆ ಜನ ರೋಟರಿ ವೃತ್ತದಲ್ಲಿ ಸೇರಿದ್ದರು. ಭಾರತ ನಕಾಶೆ ಬಿಡಿಸಿ, ಹೂವಿನಿಂದ ಇಡೀ ಧ್ವಜ ಸ್ತಂಭದ ಪರಿಸರ ಅಲಂಕರಿಸಲಾಗಿತ್ತು. ಜನ ಕೈಯಲ್ಲಿ ವಿವಿಧ ವರ್ಣದ ಬಲೂನ್‌ಗಳನ್ನು ಹಿಡಿದುಕೊಂಡು ನಿಂತಿದ್ದರು. ದೇಶಭಕ್ತಿಯ ಗೀತೆಯ ಸಂಗೀತ ಹಾಕಿದ್ದರು.

ಈ ನಡುವೆ ಸಚಿವ ಆನಂದ್‌ ಸಿಂಗ್‌ ಡಾ.ಬಿ.ಆರ್‌. ಅಂಬೇಡ್ಕರ್‌, ಮಹಾತ್ಮ ಗಾಂಧೀಜಿ ಹಾಗೂ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಗೌರವ ಸಲ್ಲಿಸಿದರು. ಬಳಿಕ ಪಾರಿವಾಳ ಹಾರಿಸಿದರು. ಅದರ ನಂತರ ರಿಮೋಟ್‌ ಮೂಲಕ ಧ್ವಜ ಹಾರಿಸಿದರು. ಈ ವೇಳೆ ಜನ ಬಲೂನ್‌ಗಳನ್ನು ಬಿಟ್ಟರು. ಅದು ಆಕಾಶದಲ್ಲಿ ಕಳೆಗಟ್ಟಿತ್ತು. ಆದರೆ, ಮಂಜಿನಿಂದ ಬೃಹತ್‌ ಧ್ವಜ ಹಾರಾಡದ ಕಾರಣ ಅಲ್ಲಿದ್ದವರಲ್ಲಿ ನಿರಾಸೆ ಮೂಡಿಸಿತು.

ಬಳಿಕ ಮಾತನಾಡಿದ ಸಚಿವರು, ‘ಗಣರಾಜ್ಯೋತ್ಸವದ ಆಶಯಗಳು ಈಡೇರಬೇಕಾದರೆ ದೀನ ದಲಿತರು ಮುಖ್ಯವಾಹಿನಿಗೆ ಬರಬೇಕು. ಅವರಿಗೆ ಸಂವಿಧಾನದ ಪ್ರಕಾರ ಎಲ್ಲ ಹಕ್ಕುಗಳು ಸಿಗಬೇಕು. ಜಾತಿ ತಾರತಮ್ಯ ದೂರವಾಗಬೇಕು‘ ಎಂದು ಹೇಳಿದರು.

‘ಇದೇ ವೇದಿಕೆಯಲ್ಲಿ ಆಗಸ್ಟ್‌ 15ರಂದು ವಿಜಯನಗರ ಜಿಲ್ಲೆ ರಚನೆಗೆ ಶ್ರಮಿಸುವೆ ಎಂದು ಹೇಳಿದ್ದೆ. ಅದು ಈಡೇರಿದೆ. ಈಗಾಗಲೇ ವಿಜಯನಗರ ಜಿಲ್ಲೆ ಘೋಷಣೆಯಾಗಿದೆ. ಅಧಿಕೃತ ಅಧಿಸೂಚನೆ ಹೊರಬೀಳುವುದಷ್ಟೇ ಉಳಿದಿದೆ. ಕೆಲವೇ ದಿನಗಳಲ್ಲಿ ಸರ್ಕಾರದಿಂದ ಆದೇಶವಾಗುತ್ತದೆ ಎಂಬ ಭರವಸೆ ಇದೆ. ವಿಜಯನಗರ ವಿಜಯೋತ್ಸವಕ್ಕೆ ಈಗಾಗಲೇ ದೊಡ್ಡ ಮಟ್ಟದ ಸಿದ್ಧತೆ ನಡೆದಿದೆ. ಇಡೀ ರಾಜ್ಯ ನೋಡುವಂತೆ ವಿಜಯನಗರ ವಿಜಯೋತ್ಸವ ಆಚರಿಸಲಾಗುವುದು. ಮುಖ್ಯಮಂತ್ರಿ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ಅದರಲ್ಲಿ ಪಾಲ್ಗೊಳ್ಳುವರು’ ಎಂದು ತಿಳಿಸಿದರು.

‘ವಿಜಯನಗರ ಜಿಲ್ಲೆ ರಚನೆಯ ಸಂದರ್ಭದಲ್ಲೇ ಗಣರಾಜ್ಯೋತ್ಸವದ ಪ್ರಯುಕ್ತ ನವದೆಹಲಿಯ ರಾಜಪಥದಲ್ಲಿ ವಿಜಯನಗರ ವೈಭವ ಸಾರುವ ಸ್ತಬ್ಧಚಿತ್ರ ಪಾಲ್ಗೊಂಡಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ವಿಜಯನಗರಕ್ಕೆ ಉಜ್ವಲವಾದ ಭವಿಷ್ಯವಿದೆ’ ಎಂದು ಹೇಳಿದರು.

ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಬಸವರಾಜ, ತಹಶೀಲ್ದಾರ್ ಎಚ್. ವಿಶ್ವನಾಥ್, ಡಿವೈಎಸ್ಪಿ ವಿ. ರಘುಕುಮಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ, ಮುಖಂಡರಾದ ಬಸವರಾಜ ನಾಲತ್ವಾಡ, ಸಾಲಿ ಸಿದ್ದಯ್ಯ ಸ್ವಾಮಿ, ಸಂದೀಪ್‌ ಸಿಂಗ್‌, ಜೀವರತ್ನಂ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು