ಹೊಸಪೇಟೆ(ವಿಜಯನಗರ): ‘ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮಂಡಳಿಯವರು ನಿತ್ಯ ಕನಿಷ್ಠ 50 ಜನರಿಗಾದರೂ ಕೋವಿಡ್ ಲಸಿಕೆಯನ್ನು ಹಾಕಿಸಲು ಪ್ರಯತ್ನಿಸಬೇಕು’ ಎಂದು ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ಸಲಹೆ ನೀಡಿದರು.
ನಗರದ ಪಟ್ಟಣ ಪೊಲೀಸ್ ಠಾಣೆಯ ಆವರಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಗಣೇಶೋತ್ಸವ ಆಚರಣೆಯಲ್ಲಿ ಪಾಲಿಸಬೇಕಾದ ಮಾರ್ಗಸೂಚಿ ಕುರಿತ ಸಭೆಯಲ್ಲಿ ಮಾತನಾಡಿದರು.
‘ಗಣೇಶ ಪ್ರತಿಷ್ಠಾಪನಾ ಮಂಡಳಿ ಸಮಿತಿ ಸದಸ್ಯರು ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿ ಅನುಸರಿಸುವ ಜೊತೆಗೆ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆಗೆ ಸಹಕರಿಸಬೇಕು. ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರಿಗೆ ಲಸಿಕೆ ಹಾಕಿಸಲು ಸಹಕರಿಸಬೇಕು. ಮೂರು ದಿನದ ಗಣೇಶೋತ್ಸವದಲ್ಲಿ ದಿನಕ್ಕೆ ಕನಿಷ್ಠ 50 ಜನರಿಗೆ ಕೋವಿಡ್ ಲಸಿಕೆ ಹಾಕಿಸಿದರೆ ಲಸಿಕಾಕರಣ ಕಾರ್ಯಕ್ರಮ ಯಶಸ್ವಿಯಾಗುತ್ತದೆ’ ಎಂದರು.
‘ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯನ್ನು ಮೂರನೇ ದಿನ ಸಮೀಪದ ಕಾಲುವೆಗಳಲ್ಲಿ ವಿಸರ್ಜಿಸಲು ಅವಕಾಶ ನೀಡಲಾಗುತ್ತದೆ. ಇಷ್ಟರಲ್ಲೇ ಅದನ್ನು ಅಂತಿಮಗೊಳಿಸಲಾಗುವುದು’ ಎಂದು ತಿಳಿಸಿದರು.
ತಹಶೀಲ್ದಾರ್ ಎಚ್.ವಿಶ್ವನಾಥ್, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಎಂ.ಶ್ರೀನಿವಾಸ್, ಗ್ರಾಮೀಣ ಠಾಣೆಯ ಶ್ರೀನಿವಾಸ ಮೇಟಿ, ಚಿತ್ತವಾಡ್ಗಿ ಠಾಣೆಯ ಜಯಪ್ರಕಾಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ್, ಮುಖಂಡರಾದ ತಾರಿಹಳ್ಳಿ ಹನುಮಂತಪ್ಪ, ಗುಜ್ಜಲ್ ನಾಗರಾಜ್, ಪಿ.ವೆಂಕಟೇಶ್, ಗಣೇಶ್, ಜಗದೀಶ್ ಕಮಟಗಿ, ಶ್ರೀಕಾಂತ ಪೂಜಾರಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.