ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಪಾಲಿಕೆಯಲ್ಲಿ ‘ಸದಸ್ಯರ ಖರೀದಿ’!

ಕಾಂಗ್ರೆಸ್‌ ಶಾಸಕ, ಸಂಸದರ ಆರೋಪ
Last Updated 20 ಫೆಬ್ರುವರಿ 2022, 21:45 IST
ಅಕ್ಷರ ಗಾತ್ರ

ಬಳ್ಳಾರಿ: ‘ಬಳ್ಳಾರಿ ಮಹಾನಗರಪಾಲಿಕೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಬಿಜೆಪಿ ಹಿಂಬಾಗಿಲಿನಲ್ಲಿ ಅಧಿಕಾರ ಹಿಡಿಯಲು ಸದಸ್ಯರ ಖರೀದಿಗೆ ಕೈಹಾಕಿದ್ದು, ಕಾಂಗ್ರೆಸ್‌ ಸದಸ್ಯರಿಗೆ ಕೋಟಿಗಟ್ಟಲೆ ಹಣ, ಕಾರುಗಳ ಆಮಿಷವೊಡ್ಡಿದೆ’ ಎಂದು ರಾಜ್ಯಸಭೆ ಸದಸ್ಯ ಸಯ್ಯದ್‌ ನಾಸಿರ್‌ ಹುಸೇನ್‌ ಮತ್ತು ವಿಧಾನಸಭೆ ಸದಸ್ಯ ಬಿ.ನಾಗೇಂದ್ರ ಆರೋಪಿಸಿದರು.

‘ಬಿಜೆಪಿ ಮುಖಂಡರಿಗೆ ಆಪ್ತರಾದ ಆಲಿಖಾನ್‌, ಕಾಂಗ್ರೆಸ್‌ ಪಾಲಿಕೆ ಸದಸ್ಯರಾದ ಸಿಯಾಜ್‌ ಅಹಮ್ಮದ್‌ (ನಾಜು), ಕುಬೇರ, ಬಿ.ಆರ್.ಎಲ್‌. ಸೀನ, ಮಹಮ್ಮದ್‌, ಅಯಾಜ್‌ ಅಹಮದ್‌, ಜಬ್ಬಾರ್‌ ಅವರನ್ನು ಸಂಪರ್ಕಿಸಿ ₹ 1ರಿಂದ 2 ಕೋಟಿ ಹಣ, ಐಷಾರಾಮಿ ಕಾರು, ಹುದ್ದೆಗಳ ಆಮಿಷವೊಡ್ಡಿದ್ದಾರೆ. ಒಂದು ವಾರದಿಂದ ಸದಸ್ಯರ ಖರೀದಿ ಪಯತ್ನ ನಡೆಯುತ್ತಿದೆ‘ ಎಂದು ಅವರು ಭಾನುವಾರ ಸಂಜೆ ತರಾತುರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ರೆಡ್ಡಿಗಳಿಗೆ ಆಲಿಖಾನ್‌ ಆಪ್ತರು ಎಂದು ಗೊತ್ತು. ಆದರೆ, ಯಾವ ರೆಡ್ಡಿಗೆ ಎಂಬುದು ಗೊತ್ತಿಲ್ಲ. ಪಾಲಿಕೆ ಕಾಂಗ್ರೆಸ್‌ ಸದಸ್ಯರನ್ನು ಸಂಪರ್ಕಿಸಿ ಅವರು ಮಾತನಾಡಿರುವ ರೆಕಾರ್ಡ್‌ ನಮ್ಮಲ್ಲಿದೆ. ಅಗತ್ಯವಾದರೆ ಅದನ್ನು ಬಹಿರಂಗ ಮಾಡುತ್ತೇವೆ’ ಎಂದು ಸಯ್ಯದ್‌ ನಾಸಿರ್ ಹುಸೇನ್ ಸ್ಪಷ್ಟಪಡಿಸಿದರು.

‘ಪಾಲಿಕೆಯಲ್ಲಿ ಒಟ್ಟು 39 ಚುನಾಯಿತ ಸದಸ್ಯರಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನ 21, ಐವರು ಪಕ್ಷೇತರ ಸದಸ್ಯರು (ಕಾಂಗ್ರೆಸ್‌ ಬಂಡಾಯ ಸದಸ್ಯರು) ಒಬ್ಬರು ರಾಜ್ಯಸಭೆ ಸದಸ್ಯರು, ವಿಧಾನಸಭೆ ಮತ್ತು ವಿಧಾನಪರಿಷತ್ತಿನ ತಲಾ ಒಬ್ಬರು ಸದಸ್ಯರು ಸೇರಿದಂತೆ 29 ಸದಸ್ಯರಿದ್ದು, ಪಾಲಿಕೆಯಲ್ಲಿ ನಮಗೆ ಸ್ಪಷ್ಟ ಬಹುಮತವಿದೆ. ಬಿಜೆಪಿಯವರು ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ’ ಎಂದು ನಾಸಿರ್‌ ಹುಸೇನ್‌ ಪ್ರತಿಪಾದಿಸಿದರು.

‘ಕಾಂಗ್ರೆಸ್‌ನ ಪಾಲಿಕೆ ಸದಸ್ಯರನ್ನು ಪತ್ರಿಕಾಗೋಷ್ಠಿಗೆ ಕರೆತಂದು ಒಗ್ಗಟ್ಟು ಪ್ರದರ್ಶಿಸಿದರು. ನಾವೆಲ್ಲರೂ ಒಟ್ಟಾಗಿ ಇದ್ದೇವೆ. ನಮ್ಮ ಒಗ್ಗಟ್ಟು ಒಡೆಯಲು ಸಾಧ್ಯವಿಲ್ಲ. ಕೋವಿಡ್‌ ಕಾರಣ ಕೊಟ್ಟು 9 ತಿಂಗಳಿಂದ ಚುನಾವಣೆ ಮುಂದೂಡಲಾಗುತ್ತಿದೆ. ಕೋವಿಡ್‌ ನಡುವೆಯೇ ಎಷ್ಟೋ ರಾಜ್ಯಗಳಲ್ಲಿ ಚುನಾವಣೆ ನಡೆಸಲಾಗಿದೆ’ ಎಂದು ಅವರು ಕಟುವಾಗಿ ಮಾತನಾಡಿದರು.

‘ಕಾಂಗ್ರೆಸ್‌ಗೆ ಬಹುಮತವಿರುವ ಕಡೆಗಳಲ್ಲಿ ಉದ್ದೇಶಪೂರ್ವಕವಾಗಿ ಚುನಾವಣೆ ನಡೆಸುತ್ತಿಲ್ಲ. ಒಂದು ವಾರದೊಳಗಾಗಿ ಚುನಾವಣೆ ಅಧಿಸೂಚನೆ ಹೊರಡಿಸದಿದ್ದರೆ ನಾವು ಪ್ರತಿಭಟನೆ ಆರಂಭಿಸುತ್ತೇವೆ. ಪ್ರತಿದಿನ ಧರಣಿ, ಮೆರವಣಿಗೆ ಹಾಗೂ ಕಾನೂನಾತ್ಮಕ ಹೋರಾಟಗಳ ಮೂಲಕ ಇದನ್ನು ತಾರ್ಕಿಕ ಹಂತಕ್ಕೆ ತಲುಪಿಸುತ್ತೇವೆ’ ಎಂದು ಎಚ್ಚರಿಸಿದರು.

ಮುಖಂಡರಾದ ಆಂಜನೇಯಲು, ವೆಂಕಟೇಶ್‌ ಹೆಗಡೆ, ಮುಂಡರಗಿ ನಾಗರಾಜ್‌ ಇದ್ದರು.

ರಾಜಕೀಯ ಬಣ್ಣ ಬೇಡ: ಆಲಿಖಾನ್‌

‘ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ. ಸ್ನೇಹದಲ್ಲಿ ನಾನು ಕೆಲವರ ಜತೆ ಮಾತನಾಡಿರಬಹುದು. ಅದಕ್ಕೆ ರಾಜಕೀಯ ಬಣ್ಣ ಕೊಡುವುದು ಸರಿಯಲ್ಲ. ನಾನು ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ಇದ್ದೇನೆ’ ಎಂದು ಆಲಿಖಾನ್‌ ಸ್ಪಷ್ಟಪಡಿಸಿದರು.

‘ನನಗೆ ರಾಜಕೀಯದ ಗಂಧಗಾಳಿ ಗೊತ್ತಿಲ್ಲ. ನಾನೊಬ್ಬ ಕೂಲಿ ಮಾಡುವವನು. ನಾನು ಹೇಗೆ ಕೋಟಿ, ಕೋಟಿ ಆಮಿಷವೊಡ್ಡಲಿ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT